ಪಕ್ಷ ತ್ಯಜಿಸಿದ ಕಾಂಗ್ರೆಸ್ ವಕ್ತಾರೆ ಪ್ರಿಯಾಂಕಾ ಚತುರ್ವೇದಿ

Update: 2019-04-19 06:27 GMT

ಹೊಸದಿಲ್ಲಿ, ಎ.19: ಇತ್ತೀಚೆಗೆ ಟ್ವೀಟ್ ಮೂಲಕ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಕಾಂಗ್ರೆಸ್ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಕಳೆದ ರಾತ್ರಿ ಪಕ್ಷವನ್ನು ತ್ಯಜಿಸಿದ್ದಾರೆ.

 ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಮಥುರಾದಲ್ಲಿ ರಫೇಲ್ ಯುದ್ದ ವಿಮಾನ ಒಪ್ಪಂದಕ್ಕೆ ಸಂಬಂಧಿಸಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದಾಗ ಸ್ಥಳೀಯ ಕಾಂಗ್ರೆಸ್ ನಾಯಕರು ಪ್ರಿಯಾಂಕಾ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಆಗ ತಕ್ಷಣವೇ ಉತ್ತರಪ್ರದೇಶ ಕಾಂಗ್ರೆಸ್ ಸಮಿತಿ ಅಸಭ್ಯವಾಗಿ ವರ್ತಿಸಿದವರನ್ನು ಪಕ್ಷದಿಂದ ಅಮಾನತುಗೊಳಿಸಿತ್ತು. ಆದರೆ, ಇತ್ತೀಚೆಗೆ ಚುನಾವಣೆಯ ಹಿನ್ನೆಲೆಯಲ್ಲಿ ಸ್ಥಳೀಯರ ಬೆಂಬಲದ ಅಗತ್ಯವಿರುವ ಕಾರಣ ಪ್ರಿಯಾಂಕಾರೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಕೆಲವು ನಾಯಕರನ್ನು ವಾಪಸ್ ಕರೆಸಿಕೊಂಡಿತ್ತು. ಓರ್ವ ಕಾರ್ಯಕರ್ತನನ್ನು ಅಭ್ಯರ್ಥಿಯಾಗಿಯೂ ನೇಮಿಸಲಾಗಿತ್ತು.

 ಇದರಿಂದ ಅಸಮಾಧಾನಗೊಂಡಿದ್ದ ಪ್ರಿಯಾಂಕಾ, ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ಪಕ್ಷಕಾಗಿ ಬೆವರು ಹಾಗೂ ರಕ್ತ ಹರಿಸಿದವರ ಬದಲಿಗೆ ಗೂಂಡಾ ವರ್ತನೆ ತೋರಿದವರಿಗೆ ಆದ್ಯತೆ ನೀಡುತ್ತಿದೆ. ಪಕ್ಷದ ಘನತೆಗೆ ಧಕ್ಕೆ ತಂದವರ ವಿರುದ್ಧ ಏನೂ ಕ್ರಮ ಕೈಗೊಂಡಿಲ್ಲ್ಲ ಎಂದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಪ್ರಿಯಾಂಕಾ ಅಸಮಾಧಾನ ವ್ಯಕ್ತಪಡಿಸಿದ್ದರು.

ಉತ್ತರಪ್ರದೇಶದ ಅಮೇಠಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿರುವ ಕೇಂದ್ರ ಸಚಿವೆ ಸ್ಮತಿ ಇರಾನಿ ಪದವಿ ಪೂರೈಸಿರುವ ಬಗ್ಗೆ ಚುನಾವಣಾ ಅಫಿದಾವಿತ್‌ನಲ್ಲಿ ತಪ್ಪು ಮಾಹಿತಿ ನೀಡಿ ಸುದ್ದಿಯಾದಾಗ ಪ್ರಿಯಾಂಕಾ ಚತುರ್ವೇದಿ, ಇರಾನಿ ವಿರುದ್ಧ ಮಾಡಿರುವ ಟ್ವೀಟ್ ಭಾರೀ ಸಂಚಲನ ಮೂಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News