ಆಗ ಪ್ರಜ್ಞಾ ಸಿಂಗ್ ರನ್ನು ಬಂಧಿಸಿದ್ದ ಚೌಹಾಣ್ ಈಗ ಆಕೆಗೆ ಟಿಕೆಟ್ ಘೋಷಿಸಿದರು!

Update: 2019-04-19 07:01 GMT

ಭೋಪಾಲ್, ಎ.19:  ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಪ್ರಜ್ಞಾ ಸಿಂಗ್ ಠಾಕೂರ್ ರನ್ನು ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ಬುಧವಾರ ಘೋಷಿಸಿದ ಸಂದರ್ಭ ಆಕೆ ದೇಶವನ್ನು ಸುಭದ್ರವಾಗಿಸಲೆಂದೇ ಹುಟ್ಟಿದವರು ಎಂದು ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದರು.

ಆದರೆ ವಿಪರ್ಯಾಸವೆಂದರೆ ಬಿಜೆಪಿ ಪಾಲಿಗೆ ಕಾಂಗ್ರೆಸ್ ಪಕ್ಷದಿಂದ ಅನಗತ್ಯವಾಗಿ ದೂಷಣೆಗೊಳಗಾದ ಹಿಂದು ನಾಯಕಿ ಆಗಿರುವ  ಈಕೆಯನ್ನು ಮಧ್ಯ ಪ್ರದೇಶದಲ್ಲಿ ಬಿಜೆಪಿಯ ಚೌಹಾಣ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಉಗ್ರ ಸಂಬಂಧಿ ಪ್ರಕರಣಲ್ಲಿ ಬಂಧಿಸಲಾಗಿತ್ತು.

ಚೌಹಾಣ್ ಅವರ ಸರಕಾರದ ಅಧೀನದಲ್ಲಿದ್ದ ಪೊಲೀಸ್ ಇಲಾಖೆಯೇ ಸಾಧ್ವಿ ಹಾಗೂ ಎಂಟು ಮಂದಿ ಇತರರನ್ನು ಸೆಪ್ಟೆಂಬರ್ 23, 2008ರಂದು ಮಧ್ಯ ಪ್ರದೇಶದ ದೇವಸ್ ಜಿಲ್ಲೆಯಲ್ಲಿ ಆರೆಸ್ಸೆಸ್ ಗೆ ಸೇರಿದ್ದ ಸುನೀಲ್ ಜೋಷಿ ಎಂಬಾತನ ಕೊಲೆ ಪ್ರಕರಣದ ಶಾಮೀಲಾತಿಗಾಗಿ ಬಂಧಿಸಲಾಗಿತ್ತು.

“ಆದರೆ ಈಗ ಆಕೆಯ ಅಭ್ಯರ್ಥಿತನವನ್ನು ಘೋಷಿಸುವಾಗ ಶಿವರಾಜ್ ಸಿಂಗ್ ಚೌಹಾಣ್  ಆಕೆ 2008 ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಹಾಗೂ ಜಾಮೀನಿನ ಮೇಲಿದ್ದಾಳೆ ಎಂಬುದನ್ನು ಮರೆತೇ ಬಿಟ್ಟಿರು. ಹೀಗಿರುವಾಗ ಆಕೆ ದೇಶದ ರಕ್ಷಕಳಾಗಲು ಹೇಗೆ ಸಾಧ್ಯ?'' ಎಂದು ಕಾಂಗ್ರೆಸ್ ವಕ್ತಾರ ಪಂಕಚ್ ಚತುರ್ವೇದಿ ಪ್ರಶ್ನಿಸಿದ್ದಾರೆ.

“ಸುನಿಲ್ ಜೋಷಿ ಕೊಲೆ ಪ್ರಕರಣದಲ್ಲಿ ಆಕೆಯನ್ನು 2008 ಹಾಗೂ 2011ರಲ್ಲಿ ತಮ್ಮದೇ ಸರಕಾರ ಬಂಧಿಸಿತ್ತು ಎಂಬುದನ್ನು ಚೌಹಾಣ್ ಮರೆಯಬಾರದು.  ಕೊಲೆ ಆರೋಪಿ ಹಾಗೂ ಉಗ್ರ ಆರೋಪಿ ದೇಶವನ್ನು ಹೇಗೆ ರಕ್ಷಿಸಬಹುದು ಎಂದು ಚೌಹಾಣ್ ವಿವರಿಸಬೇಕು'' ಎಂದು ಅವರು ಆಗ್ರಹಿಸಿದ್ದಾರೆ.

ಪ್ರಜ್ಞಾ ಸಿಂಗ್ ಭೋಪಾಲದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರನ್ನು ಎದುರಿಸಲಿದ್ದಾರೆ. ಸಾಕಷ್ಟು ಮುಸ್ಲಿಂ ಜನಸಂಖ್ಯೆಯಿರುವ ಭೋಪಾಲದಲ್ಲಿ ಬಿಜೆಪಿ 1989ರಿಂದ ಸೋಲು ಕಂಡಿಲ್ಲ.

ಸುನಿಲ್ ಜೋಷಿ ಕೊಲೆ ಪ್ರಕರಣ: ಮೆಕ್ಕಾ ಮಸೀದಿ, ಸಂಝೋತಾ ಹಾಗೂ ಮಾಲೆಗಾಂವ್ ಸ್ಫೋಟ ಪ್ರಕರಣಗಳಲ್ಲಿ ಆರೋಪಿಯೆಂದು ತಿಳಿಯಲಾಗಿದ್ದ ಸುನಿಲ್ ಜೋಷಿಯನ್ನು ದೇವಸ್ ಎಂಬಲ್ಲಿ ಡಿಸೆಂಬರ್ 29, 2007ರಂದು ಆತ ಚುನಾ ಖದಂ ಪ್ರದೇಶದಲ್ಲಿರುವ ತನ್ನ ಅಡಗುತಾಣದತ್ತ ಸಾಗುತ್ತಿದ್ದಾಗ ಗುಂಡಿಕ್ಕಿ ಸಾಯಿಸಲಾಗಿತ್ತು. ಸಂಝೋತಾ ಸ್ಫೋಟ ಪ್ರಕರಣದಲ್ಲಿ ಜೋಷಿ ವಿರುದ್ಧ ಎನ್‍ಐಎ ಚಾರ್ಜ್ ಶೀಟ್ ಸಲ್ಲಿಸಿತ್ತು.

ಅಕ್ಟೋಬರ್ 23, 2008ರಂದು ದೇವಸ್ ಪೊಲೀಸರು ಈ ಪ್ರಕರಣದಲ್ಲಿ ಪ್ರಜ್ಞಾ ಸಿಂಗ್ ಠಾಕುರ್ ಮತ್ತಿತರರನ್ನು ಬಂಧಿಸಿದ್ದರು. ಆದರೆ ಮಾರ್ಚ್ 2009ರಲ್ಲಿ ದೇವಸ್ ಎಸ್‍ಪಿ ಸೂಚನೆಯಂತೆ ಪ್ರಕರಣವನ್ನು ಪೊಲೀಸರು ಮುಚ್ಚಿದ ಪರಿಣಾಮ ಎಲ್ಲರ ಬಿಡುಗಡೆಯಾಗಿತ್ತು.

ಆದರೆ ಒಂದು ವರ್ಷದ ತರುವಾಯ ಜುಲೈ 9, 2010ರಂದು ಮಧ್ಯ ಪ್ರದೇಶ ಪೊಲೀಸರು ಈ ಪ್ರಕರಣದ ತನಿಖೆಯನ್ನು ಮರು ಆರಂಭಿಸಿ ಸಲ್ಲಿಸಿದ್ದ ಜಾರ್ಜ್ ಶೀಟ್ ನಲ್ಲಿ ಸಂಝೋತ ಮತ್ತು ಆಜ್ಮೀರ್ ಸ್ಫೋಟ ಪ್ರಕರಣಗಳ ಹಿಂದಿನ ಸಂಪೂರ್ಣ ಸಂಚನ್ನು ಆತ ಬಹಿರಂಗಗೊಳಿಸಬಹುದೆಂಬ ಭಯದಿಂದ ಪ್ರಜ್ಞಾ ಸಿಂಗ್ ಮತ್ತಿತರರು ಆತನನ್ನು ಹತ್ಯೆಗೈದಿದ್ದರೆಂದು ಆರೋಪಿಸಲಾಗಿತ್ತು.

ಪ್ರಜ್ಞಾ ಸಿಂಗ್ ವಿರುದ್ಧ ಫೆಬ್ರವರಿ 26, 2011ರಂದು ಬಂಧನ ವಾರಂಟ್ ಜಾರಿಯಾದರೂ ಆಕೆ ಅದಾಗಲೇ ಆರು ಜನರನ್ನು ಬಲಿ ಪಡೆದು 100ಕ್ಕೂ ಅಧಿಕ ಮಂದಿ ಗಾಯಾಳುಗಳಾಗಿದ್ದ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಬಂಧಿತಳಾಗಿದ್ದಳು. 2011ರಲ್ಲಿ ಈ ಪ್ರಕರಣವನ್ನು ಎನ್‍ಐಎಗೆ ಹಸ್ತಾಂತರಿಸಲಾಗಿತ್ತು.

ತಮ್ಮ 432 ಪುಟಗಳ ಚಾರ್ಜ್ ಶೀಟ್ ನಲ್ಲಿ ಪೊಲೀಸರು ಜೋಷಿ ಕೊಲೆಗೆ ಇನ್ನೊಂದು ಕಾರಣವನ್ನೂ ನೀಡಿದ್ದರು. ಆತ ಪ್ರಜ್ಞಾ ಸಿಂಗ್ ಜತೆ ಅನುಚಿತವಾಗಿ ವರ್ತಿಸಿದ್ದ ಎಂಬ ಉಲ್ಲೇಖ ಚಾರ್ಜ್ ಶೀಟ್ ನಲ್ಲಿದೆ. ಕೊಲೆ ನಡೆದ ದಿನ ಪ್ರಜ್ಞಾ ಸಿಂಗ್ ಇತರ ಆರೋಪಿಗಳ ಜತೆ ಫೋನ್ ಸಂಪರ್ಕದಲ್ಲಿದ್ದರೆಂಬುದು ಆಕೆಯ ಮೊಬೈಲ್ ಕರೆ ವಿವರ ದಾಖಲೆಗಳಿಂದ ತಿಳಿದು ಬಂದಿದೆ.

ಆದರೆ ಫೆಬ್ರವರಿ 1, 2017ರಂದು ದೇವಸ್ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಪ್ರಜ್ಞಾ ಸಿಂಗ್ ಸಹಿತ ಇತರ ಎಲ್ಲಾ ಆರೋಪಿಗಳನ್ನು ಜೋಷಿ  ಕೊಲೆ ಪ್ರಕರಣದಲ್ಲಿ ಖುಲಾಸೆಗೊಳಿಸಿತ್ತು.

ಕೃಪೆ: thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News