ಈ ಐಎಎಸ್ ಅಧಿಕಾರಿ ಮೊದಲು ಹಿಂದೂ, ಮತ್ತೆ ಮುಸ್ಲಿಂ ಈಗ ಮತ್ತೆ ಹಿಂದೂ !

Update: 2019-04-19 09:43 GMT

ಜೈಪುರ್ :  ಮೂರು ವರ್ಷಗಳ ಹಿಂದೆ ರಾಜಸ್ಥಾನ ಸರಕಾರದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ ಇಸ್ಲಾಂಗೆ  ಮತಾಂತರಗೊಂಡಿದ್ದ ಉಮ್ರಾವ್ ಸಲೋಡಿಯಾ ಎಂಬ ಹೆಸರಿನ ಈಗ ನಿವೃತ್ತರಾಗಿರುವ ಅಧಿಕಾರಿ ತಾನು ಹಿಂದೂ ಎಂದೇ ಗುರುತಿಸಿಕೊಂಡು  ಜೈಪುರ್ ಲೋಕಸಭಾ ಕ್ಷೇತ್ರದಿಂದ  ಬಿಎಸ್‍ಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ತನಗೆ ಮುಖ್ಯ ಕಾರ್ಯದರ್ಶಿಯಾಗಿ ಭಡ್ತಿ ನೀಡಿಲ್ಲದೇ ಇರುವುದಕ್ಕೆ ಪ್ರತಿಭಟಿಸಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಉಮ್ರಾವ್ ಖಾನ್ ಆಗಿದ್ದ ಸಲೋಡಿಯಾ ಸಾಕಷ್ಟು ವಿವಾದಕ್ಕೀಡಾಗಿದ್ದರು. ತಾನು ದಲಿತ ಸಮುದಾಯದವನಾಗಿರುವುದರಿಂದ ತಮ್ಮ ವಿರುದ್ಧದ ತಾರತಮ್ಯ ಧೋರಣೆಯಿಂದ ತಮ್ಮನ್ನು ಮುಖ್ಯ ಕಾರ್ಯದರ್ಶಿ  ಹುದ್ದೆಯಿಂದ ವಂಚಿತರನ್ನಾಗಿಸಲಾಗಿತ್ತು ಎಂದು ಅವರು ಆರೋಪಿಸಿದ್ದರಲ್ಲದೆ ನಿವೃತ್ತರಾಗಲು ಆರು ತಿಂಗಳಿರುವಾಗಲೇ  ಸರಕಾರಿ ಸೇವೆಯನ್ನು ತ್ಯಜಿಸಿದ್ದರು.

ಮಂಗಳವಾರ ನಾಮಪತ್ರ ಸಲ್ಲಿಕೆಯ ವೇಳೆ ತಾನು ಹಿಂದೂ ಎಂದು ಅವರು ಹೇಳಿಕೊಂಡಿದ್ದಾರೆ. ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು  ಹೆಸರು ಬದಲಾವಣೆಗೆ  ಕೇಂದ್ರ  ಸರಕಾರದಿಂದ ಗಜೆಟ್ ನೋಟಿಫಿಕೇಶನ್ ಗೆ ಅನುಮತಿ ದೊರಕದೇ ಇದ್ದುದರಿಂದ ಹಿಂದಿನ ಹೆಸರನ್ನೇ  ಸಲ್ಲಿಸಬೇಕಾಯಿತು ಎಂದಿದ್ದಾರೆ.

ಇಸ್ಲಾಂ ಧರ್ಮಕ್ಕೆ ತಮ್ಮ ಮತಾಂತರಕ್ಕೆ ತಾವು ಬದ್ಧರಾಗಿರುವುದಾಗಿ ಹಾಗೂ ತಾನು ಇಸ್ಲಾಂ ಅನುಯಾಯಿ ಎಂಬುದನ್ನು ಅವರು ಸ್ಪಷ್ಟ ಪಡಿಸಿದ್ದಾರೆ. ''ದಲಿತರಿಗೆ ಅವರ ಹಕ್ಕುಗಳನ್ನು ಕೊಡಿಸಲು ಚುನಾವಣೆ ಸ್ಪರ್ಧಿಸುತ್ತಿದ್ದೇನೆ. ನನ್ನ ಜ್ಯೇಷ್ಠತೆಯನ್ನು ಪರಿಗಣಿಸಿ ನನ್ನನ್ನು ರಾಜ್ಯದ ಮುಖ್ಯ ಕಾರ್ಯದರ್ಶಿ ಯನ್ನಾಗಿ ಮಾಡಬೇಕಿತ್ತಾದರೂ ಹಾಗೆ ಮಾಡಲಾಗಿರಲಿಲ್ಲ'' ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News