ಕೋಲ್ಕತಾ ವಿರುದ್ಧ ಆರ್‌ಸಿಬಿಗೆ ರೋಚಕ ಜಯ

Update: 2019-04-19 18:54 GMT

ಕೋಲ್ಕತಾ, ಎ.19: ನಾಯಕ ವಿರಾಟ್ ಕೊಹ್ಲಿ ಭರ್ಜರಿ ಶತಕ , ಮೊಯಿನ್ ಅಲಿ ಅರ್ಧಶತಕ ಹಾಗೂ ಬೌಲರ್‌ಗಳ ಉತ್ತಮ ಪ್ರದರ್ಶನದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಕ್ರವಾರ ಇಲ್ಲಿಯ ಈಡನ್ ಗಾರ್ಡನ್‌ನಲ್ಲಿ ನಡೆದ 35ನೇ ಐಪಿಎಲ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 10 ರನ್‌ಗಳಿಂದ ಮಣಿಸಿದೆ.

214 ರನ್‌ಗಳ ಗುರಿ ಬೆನ್ನಟ್ಟಿದ್ದ ಕೋಲ್ಕತಾ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 203 ರನ್ ಗಳಿಸಲಷ್ಟೇ ಶಕ್ತವಾಯಿತು.

ಇನಿಂಗ್ಸ್ ಆರಂಭದಲ್ಲೇ ಕೋಲ್ಕತಾ ದಾಂಡಿಗರು ಮುಗ್ಗರಿಸಿದರು. ತಂಡದ ಮೊತ್ತ 33 ರನ್‌ಗಳಾಗುವಷ್ಟರಲ್ಲಿ 3 ವಿಕೆಟ್‌ಗಳು ಪತನಗೊಂಡವು. ಈ ವರ್ಷದ ಐಪಿಎಲ್‌ನಲ್ಲಿ ಮೊದಲ ಪಂದ್ಯವಾಡಿದ ಡೇಲ್ ಸ್ಟೇಯ್ನ್ (40ಕ್ಕೆ 2) ಈ ಮೂರರ ಪೈಕಿ ಎರಡು ವಿಕೆಟ್ ಪಡೆದು ಕೋಲ್ಕತಾಗೆ ಆಘಾತ ನೀಡಿದರು. ಕ್ರಿಸ್ ಲಿನ್ (1), ಸುನೀಲ್ ನರೈನ್ (18, 16 ಎಸೆತ, 4 ಬೌಂಡರಿ) ಹಾಗೂ ಶುಭಮನ್ ಗಿಲ್ (9) ವಿಫಲರಾದರು. ರಾಬಿನ್ ಉತ್ತಪ್ಪ 9 ರನ್ ಗಳಿಸಲು 20 ಎಸೆತ ತೆಗೆದುಕೊಂಡರು. ನಿತೀಶ್ ರಾಣಾಗೆ (ಅಜೇಯ 85, 46 ಎಸೆತ, 9 ಬೌಂಡರಿ, 5 ಸಿಕ್ಸರ್ ) ಜೊತೆಯಾದ ಆ್ಯಂಡ್ರೆ ರಸೆಲ್ (65, 25 ಎಸೆತ, 2 ಬೌಂಡರಿ, 9 ಸಿಕ್ಸರ್ )ತಮ್ಮ ಎಂದಿನ ಅಬ್ಬರದ ಆಟಕ್ಕೆ ಮನ ಮಾಡಿದರು. 5ನೇ ವಿಕೆಟ್ ಜೊತೆಯಾಟದಲ್ಲಿ ಈ ಜೋಡಿ 118 ರನ್ ಜಮೆ ಮಾಡಿತು. ಆದರೆ ಗೆಲುವು ದಕ್ಕಲಿಲ್ಲ. ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಬೆಂಗಳೂರು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 213 ರನ್ ಗಳಿಸಿತ್ತು.

ಕೊಹ್ಲಿ (100, 58 ಎಸೆತ, 9 ಬೌಂಡರಿ, 4 ಸಿಕ್ಸರ್) ಹಾಗೂ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ (11, 11 ಎಸೆತ, 2 ಬೌಂಡರಿ) ಎಂದಿನಂತೆ ಆರ್‌ಸಿಬಿ ಪರ ಇನಿಂಗ್ಸ್ ಆರಂಭಿಸಿದರು. ತಂಡದ ಮೊತ್ತಕ್ಕೆ 18 ರನ್ ಸೇರುವಷ್ಟರಲ್ಲಿ ಪಾರ್ಥಿವ್ ಅವರು ಸುನೀಲ್ ನರೈನ್‌ಗೆ ವಿಕೆಟ್ ಒಪ್ಪಿಸಿದರು.

ಕೊಹ್ಲಿ ಹಾಗೂ ಆಕಾಶದೀಪ ನಾಥ್ (13, 15 ಎಸೆತ, 1 ಸಿಕ್ಸರ್) ಎರಡನೇ ವಿಕೆಟ್ ಜೊತೆಯಾಟದಲ್ಲಿ 41 ರನ್ ಸೇರಿಸಿದರು. ಆ್ಯಂಡ್ರೆ ರಸೆಲ್ ಅವರು ಆಕಾಶದೀಪರನ್ನು ವಿಕೆಟ್ ಕೀಪರ್ ರಾಬಿನ್ ಉತ್ತಪ್ಪಗೆ ಕ್ಯಾಚ್ ನೀಡುವಂತೆ ಮಾಡಿದರು.

ಈ ಹಂತದಲ್ಲಿ ಕೊಹ್ಲಿಗೆ ಜೊತೆಯಾದ ಮೊಯಿನ್ ಅಲಿ (66, 28 ಎಸೆತ, 5 ಬೌಂಡರಿ, 6 ಸಿಕ್ಸರ್) ಕೋಲ್ಕತಾ ಬೌಲರ್‌ಗಳನ್ನು ಅಕ್ಷರಶಃ ದಂಡಿಸಿದರು. ಅಗತ್ಯವಿದ್ದಾಗ ರಕ್ಷಣಾತ್ಮಕ ಹಾಗೂ ಆಕ್ರಮಣಕಾರಿ ಆಟಕ್ಕೆ ಮೊರೆಹೋದ ಇಬ್ಬರೂ 3ನೇ ವಿಕೆಟ್ ಜೊತೆಯಾಟದಲ್ಲಿ 90 ರನ್ ಸೇರಿಸಿದರು. ಮೊಯಿನ್ ಅವರು ಕುಲದೀಪ್ ಯಾದವ್‌ರ (59ಕ್ಕೆ 1) ಒಂದೇ ಓವರ್‌ನಲ್ಲಿ 26 ರನ್ ಚಚ್ಚಿದರು. ಆದರೆ ಅದೇ ಓವರ್‌ನ ಕೊನೆಯ ಎಸೆತದಲ್ಲಿ ಔಟಾದರು. ಕೊನೆಯಲ್ಲಿ ಸ್ಟೋನಿಸ್ (17, 8 ಎಸೆತ, 2 ಬೌಂಡರಿ, 1 ಸಿಕ್ಸರ್) ಉತ್ತಮ ಆಟವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News