ಶತಮಾನದ ಚಂಡಮಾರುತಕ್ಕೆ ನಲುಗಿದ ಮೊಝಾಂಬಿಕ್

Update: 2019-04-20 15:47 GMT

ಮಪುಟೊ (ಮೊಝಾಂಬಿಕ್), ಎ. 20: ಶತಮಾನದ ಭೀಕರ ಚಂಡಮಾರುತ ‘ಇಡಾಯ್’ ಆಫ್ರಿಕದ ದೇಶಗಳಾದ ಮೊಝಾಂಬಿಕ್, ಜಿಂಬಾಬ್ವೆ, ಮಡಗಾಸ್ಕರ್ ಮತ್ತು ಮಾಲವಿಗಳಿಗೆ ಅಪ್ಪಳಿಸಿ ತಿಂಗಳು ಕಳೆದಿದೆ. ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ಜನರ ಜೀವನಾಧಾರ ಮೂಲಸೌಕರ್ಯಗಳು ನಾಶಗೊಂಡಿವೆ.

ಮಾರ್ಚ್ 15ರಿಂದ ಕೆಲವು ದಿನಗಳ ಕಾಲ ಮೊಝಾಂಬಿಕ್‌ಗೆ ಅಪ್ಪಳಿಸಿದ ಭಯಾನಕ ಗಾಳಿ ಮತ್ತು ಮಳೆಯ ಪ್ರಕೋಪ ಈಗ ತಗ್ಗಿದೆಯಾದರೂ, ಅದರ ಭೀಕರ ಪರಿಣಾಮಗಳಿಂದ ಜನರು ಚೇತರಿಸಿಕೊಂಡಿಲ್ಲ.

ಒಂದು ಹಂತದಲ್ಲಿ ಗಂಟೆಗೆ 205 ಕಿ.ಮೀ. ವೇಗದಲ್ಲಿ ಗಾಳಿ ಬೀಸಿ ಮನೆಗಳು, ಮರಗಳು, ವಿದ್ಯುತ್ ಕಂಬಗಳು ಸೇರಿದಂತೆ ಎದುರಲ್ಲಿ ಸಿಕ್ಕಿದ ಎಲ್ಲವನ್ನೂ ನೆಲಸಮಗೊಳಿಸಿತು.

ಮಳೆಯಿಂದಾಗಿ ಉದ್ಭವಿಸಿದ ಭೀಕರ ಪ್ರವಾಹವು ಊರಿಗೆ ಊರನ್ನೇ ಕೊಚ್ಚಿಕೊಂಡು ಹೋಗಿದೆ. ಜಾನುವಾರುಗಳು ಮತ್ತು ಸಾಕುಪ್ರಾಣಿಗಳು ಮನುಷ್ಯರ ಜೊತೆಗೆ ಕೊಚ್ಚಿ ಹೋಗಿವೆ.

ಪ್ರವಾಹವು ಹಲವು ದಿನಗಳ ಕಾಲ ಇಳಿಯಲಿಲ್ಲ. ಈ ಅವಧಿಯಲ್ಲಿ ಜನರು ಕೈಯಲ್ಲಿ ಜೀವ ಹಿಡಿದುಕೊಂಡು ಬದುಕುಳಿದಿದ್ದರು.

ನಾಲ್ಕು ದೇಶಗಳಲ್ಲಿ 1,000ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ಸಾವಿರಾರು ಮಂದಿ ನಾಪತ್ತೆಯಾಗಿದ್ದಾರೆ.

ಭೀಕರ ಚಂಡಮಾರುತವು ತನ್ನ ಹೆಚ್ಚಿನ ಪ್ರಕೋಪವನ್ನು ಮೊಝಾಂಬಿಕ್‌ನಲ್ಲಿ ತೋರಿಸಿದೆ. ಮೊಝಾಂಬಿಕ್ ಒಂದರಲ್ಲೇ 600ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

1892ರಲ್ಲಿ ಬೀಸಿದ ಮಾರಿಶಸ್ ಚಂಡಮಾರುತವನ್ನು ಹೊರತುಪಡಿಸಿದರೆ, ‘ಇಡಾಯ್’ ನೈರುತ್ಯ ಹಿಂದು ಮಹಾಸಾಗರ ಪ್ರದೇಶದಲ್ಲಿ ಬೀಸಿದ ಎರಡನೇ ಅತಿ ಭಯಾನಕ ಚಂಡಮಾರುತವಾಗಿದೆ.

ಒಂದು ದಿನ ಬದುಕುವುದಕ್ಕೂ ಪರದಾಡುತ್ತಿರುವ ಸಂತ್ರಸ್ತರು

‘ಇಡಾಯ್’ ಚಂಡಮಾರುತ ಒಂದು ಶತಮಾನದ ಅವಧಿಯಲ್ಲಿ ದಕ್ಷಿಣ ಭಾಗದ ಆಫ್ರಿಕಕ್ಕೆ ಅಪ್ಪಳಿಸಿದ ಅತ್ಯಂತ ಭೀಕರ ಚಂಡಮಾರುತವಾಗಿದೆ. ಆಗಸ್ಟೊ ಬ್ರಾಸ್ ಮತ್ತು ಅವರ ಪತ್ನಿ ಅಮೇಲಿಯ ಆಗಸ್ಟೊ ಈ ಚಂಡಮಾರುತದಲ್ಲಿ ತಮ್ಮ ಮಗ ಮತ್ತು ಮನೆಯನ್ನು ಕಳೆದುಕೊಂಡರು.

ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದ ಅವರ 8 ವರ್ಷದ ಮಗ ಮುಳುಗಿ ಮೃತಪಟ್ಟನು. ಅವರು ಮೂರು ದಿನಗಳ ಕಾಲ ಮರದ ಕೊಂಬೆಗಳಲ್ಲಿ ನೇತಾಡಿ ಬದುಕುಳಿದರು.

ಅವರು ಬೆಳೆಸಿದ ಬೆಳೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಇನ್ನು ಅವರು ಬೆಳೆ ತೆಗೆಯಲು ಒಂದು ವರ್ಷವಾದರೂ ಬೇಕು. ಈಗ ಬದುಕಿ ಉಳಿಯುವುದು ಅವರ ದೈನಂದಿನ ಹೋರಾಟವಾಗಿದೆ.

ಅವರು ಜೋಳವನ್ನು ಬೆಳೆಯುತ್ತಿದ್ದರು. ಅದು ಈಗ ಸಂಪೂರ್ಣ ಕೊಚ್ಚಿ ಹೋಗಿದೆ. ಅಳಿದುಳಿದ ಜೋಳದ ತೆನೆಗಳನ್ನು ಬದುಕುಳಿದವರು ಈಗ ಬಳಸುತ್ತಿದ್ದಾರೆ. ಆದರೆ, ಅದು ಪ್ರವಾಹದಿಂದಾಗಿ ಕೊಳೆತು ಹೋಗಿದೆ. ಆದಾಗ್ಯೂ, ಅದನ್ನೇ ಬೇಯಿಸಿ ತಿನ್ನಬೇಕಾಗಿದೆ ಎಂದು ಅವರು ಹೇಳುತ್ತಾರೆ.

ಸಾಂಕ್ರಾಮಿಕ ರೋಗಗಳ ಬೆದರಿಕೆ

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಾಲರಾ ಮುಂತಾದ ಸಾಂಕ್ರಾಮಿಕ ರೋಗಗಳು ವ್ಯಾಪಕವಾಗಿ ಹರಡಿವೆ. ಮಕ್ಕಳು ವಾಂತಿಭೇದಿ ಮಾಡುತ್ತಿದ್ದು, ಇದು ಕಾಲರಾದ ಲಕ್ಷಣವಾಗಿವೆ ಎಂದು ಸ್ಥಳಕ್ಕೆ ತೆರಳಿರುವ ‘ನ್ಯೂಯಾರ್ಕ್ ಟೈಮ್ಸ್’ ವರದಿಗಾರರು ಹೇಳಿದ್ದಾರೆ. ಕೆಲವೇ ದಿನಗಳ ಅವಧಿಯಲ್ಲಿ ಕಾಲರಾ ಪ್ರಕರಣಗಳ ಸಂಖ್ಯೆ 3ರಿಂದ 3,000ಕ್ಕೇರಿದೆ.

ಈಗ ಸಾಮೂಹಿಕ ಲಸಿಕಾ ಕಾರ್ಯಕ್ರಮವನ್ನು ‘ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್’ ನಡೆಸುತ್ತಿದ್ದು, ಕಾಲರಾ ಪ್ರಕರಣಗಳ ಸಂಖ್ಯೆ ನಿಯಂತ್ರಣದಲ್ಲಿದೆ.

ಮೊಝಾಂಬಿಕ್‌ನ ಅತ್ಯಂತ ಹಾನಿಗೀಡಾದ ಪ್ರದೇಶದಲ್ಲಿನ ಆಸ್ಪತ್ರೆಯೊಂದು ಚಂಡಮಾರುತದಲ್ಲಿ ಕೊಚ್ಚಿಹೋಗಿದೆ. ‘ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್’ ಈಗ ತುರ್ತು ಚಿಕಿತ್ಸಾ ಕೇಂದ್ರವೊಂದನ್ನು ಸ್ಥಾಪಿಸಿದೆ.

ಕೊನೆಗೂ ನೆರವು ಆಗಮನ

ಅಂತಿಮವಾಗಿ, ಈಗ ಮೊಝಾಂಬಿಕ್‌ಗೆ ಅಂತರ್‌ರಾಷ್ಟ್ರೀಯ ನೆರವು ಬರಲು ಆರಂಭಿಸಿದೆ. ಹತ್ತಾರು ಅಂತರ್‌ರಾಷ್ಟ್ರೀಯ ಸಂಘಟನೆಗಳು ಪರಿಹಾರ ಸಾಮಗ್ರಿಗಳನ್ನೊಂಡ ಸರಕುಗಳನ್ನು ಕಳುಹಿಸಿವೆ.

ಸಂತ್ರಸ್ತರು ಪರಿಹಾರ ಕೇಂದ್ರಗಳಿಂದ ಸಾಮಗ್ರಿಗಳನ್ನು ತಮ್ಮ ಮನೆಗಳಿಗೆ ಒಯ್ಯುತ್ತಿದ್ದಾರೆ. ಮುಂದಿನ ಬೆಳೆ ಬೆಳೆಯುವವರೆಗೆ, ಅಂದರೆ ಇನ್ನು ಕನಿಷ್ಠ ಒಂದು ವರ್ಷ ಅವರು ಪರಿಹಾರ ಸಾಮಗ್ರಿಗಳನ್ನೇ ಆಶ್ರಯಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News