ಕೆಕೆಆರ್ ತಂಡದ ನಿರ್ಧಾರ ಪ್ರಶ್ನಿಸಿದ ಆ್ಯಂಡ್ರೆ ರಸೆಲ್

Update: 2019-04-20 18:09 GMT

ಕೋಲ್ಕತಾ, ಎ.20: ಆರ್‌ಸಿಬಿ ವಿರುದ್ಧ ಕಡಿಮೆ ಅಂತರದಲ್ಲಿ ಸೋತಿರುವುದು ಸಿಹಿ-ಕಹಿ ಅನುಭವ ನೀಡಿದೆ ಎಂದ ಕೋಲ್ಕತಾ ನೈಟ್ ರೈಡರ್ಸ್ ತಂಡದ ಆಲ್‌ರೌಂಡರ್ ಆ್ಯಂಡ್ರೆರಸೆಲ್, ತನ್ನನ್ನು ಕೆಳ ಕ್ರಮಾಂಕದಲ್ಲಿ ಕಳುಹಿಸಿದ ತಂಡದ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.

ಗೆಲ್ಲಲು 214 ರನ್ ಚೇಸಿಂಗ್‌ಗೆ ತೊಡಗಿದ ಕೆಕೆಆರ್ 5 ಓವರ್‌ನೊಳಗೆ 33 ರನ್‌ಗೆ 3 ವಿಕೆಟ್ ಕಳೆದುಕೊಂಡಿತ್ತು. 20 ಎಸೆತಗಳಲ್ಲಿ ಕೇವಲ 9 ರನ್ ಗಳಿಸಿದ್ದ ರಾಬಿನ್ ಉತ್ತಪ್ಪತಂಡವನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸಿದ್ದರು. ರಸೆಲ್ ಬ್ಯಾಟಿಂಗ್‌ಗೆ ಇಳಿದಾಗ ಕೋಲ್ಕತಾ ಗೆಲುವಿಗೆ 49 ಎಸೆತಗಳಲ್ಲಿ 135 ರನ್ ಬೇಕಾಗಿತ್ತು. 25 ಎಸೆತಗಳಲ್ಲಿ 9 ಸಿಕ್ಸರ್ಹಾಗೂ 2 ಬೌಂಡರಿ ಸಹಿತ 65 ರನ್ ಗಳಿಸಿದ ವೆಸ್ಟ್‌ಇಂಡೀಸ್‌ನ ಬಿಗ್-ಹಿಟ್ಟರ್ ರಸೆಲ್ ಕೊನೆಯ ಓವರ್‌ನಲ್ಲಿ ಔಟಾಗುವ ತನಕ ಗೆಲುವಿಗಾಗಿ ಹೋರಾಟ ನಡೆಸಿದರು. ‘‘ನಾವುಕೇವಲ 10 ರನ್‌ನಿಂದ ಸೋತಿದ್ದೇವೆ. ಇನ್ನೆರಡು ಸಿಕ್ಸರ್ ಬಾರಿಸಿದ್ದರೆ ಗೆಲುವು ಸಾಧಿಸಬಹುದಿತ್ತು. ಮಧ್ಯಮ ಓವರ್‌ನಲ್ಲಿ ನಾವು ವೇಗವಾಗಿ ರನ್ ಗಳಿಸಿದ್ದರೆ, ಇನ್ನೂ ಕೆಲವುಎಸೆತ ಬಾಕಿ ಇರುವಾಗಲೇ ಗೆಲ್ಲಬಹುದಿತ್ತು’’ ಎಂದು ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ರಸೆಲ್ ಹೇಳಿದ್ದಾರೆ. ನಿತಿಶ್ ರಾಣಾ(ಔಟಾಗದೆ 85, 46 ಎಸೆತ)ಡೆತ್ ಓವರ್‌ನಲ್ಲಿಬೌಂಡರಿ ಸುರಿಮಳೆ ಗೈದಿದ್ದರೂ ಕೋಲ್ಕತಾವನ್ನು ಸತತ ನಾಲ್ಕನೇ ಸೋಲಿನಿಂದ ಪಾರಾಗಿಸಲು ಸಾಧ್ಯವಾಗಲಿಲ್ಲ. ನೀವು ನಾಲ್ಕನೇ ಕ್ರಮಾಂಕದಲ್ಲಿ ಆಡಬೇಕಾಗಿತ್ತಲ್ಲವೇ?ಎಂದು ಕೇಳಿದಾಗ, ‘‘ಹೌದು ನಾನು 4ನೇ ಕ್ರಮಾಂಕದಲ್ಲಿ ಆಡಬೇಕಾಗಿತ್ತು...ನಿಜ ಹೇಳಬೇಕೆಂದರೆ ಕೆಲವೊಮ್ಮೆ ತಂಡದಲ್ಲಿ ಹೊಂದಾಣಿಕೆ ಬೇಕಾಗುತ್ತದೆ...ನನ್ನ ತಂಡದಹಿತದೃಷ್ಟಿಯಿಂದ 4ನೇ ಕ್ರಮಾಂಕದಲ್ಲಿ ಆಡಲು ಹಿಂಜರಿಯುವುದಿಲ್ಲ. ನಾನು ಕ್ರೀಸ್‌ನಲ್ಲಿರುವಾಗ ವಿರಾಟ್ ಕೊಹ್ಲಿ ತನ್ನನ್ನು ಔಟ್ ಮಾಡಲು ಉತ್ತಮ ಬೌಲರ್‌ನ್ನುದಾಳಿಗಿಳಿಸುತ್ತಾರೆ. ಅಂತಿಮವಾಗಿ ಉತ್ತಮ ಬೌಲರ್‌ಗಳ ಬಳಿ ಕಡಿಮೆ ಓವರ್ ಇರುತ್ತದೆ. ನಾನು ಬೇಗನೇ ಬ್ಯಾಟಿಂಗ್‌ಗೆ ಇಳಿಯುವುದರಿಂದ ಕೆಕೆಆರ್‌ಗೆ ಖಂಡಿತವಾಗಿಯೂಲಾಭವಾಗಲಿದೆ’’ ಎಂದು ರಸೆಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News