ಪ್ರತ್ಯೇಕ ಪ್ರಕರಣ: ಮಹಿಳೆಯರಿಬ್ಬರು ಸೇರಿ ನಾಲ್ವರು ಮೃತ್ಯು

Update: 2019-04-21 13:03 GMT

ಬೆಂಗಳೂರು, ಎ.21: ಮಹಿಳೆಯೊಬ್ಬರ ಕೊಲೆ ಸೇರಿ ವಿವಿಧ ಘಟನೆಗಳಲ್ಲಿ ಒಟ್ಟು ನಾಲ್ವರು ಮೃತಪಟ್ಟಿರುವ ದುರ್ಘಟನೆ ನಗರ ವ್ಯಾಪ್ತಿಯಲ್ಲಿ ನಡೆದಿದೆ.

ಮಹಿಳೆ ಕೊಲೆ: ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ಸೂಳಗಿರಿಯ ಮೇಲುಮಲೈ ಬೆಟ್ಟದ ಮೇಲಿರುವ ಸಣ್ಣ ಕೊಳದಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ರೀತಿಯಲ್ಲಿ ಮಹಿಳೆಯೊಬ್ಬಾಕೆಯ ಶವ ಪತ್ತೆಯಾಗಿದೆ.

ಕಳೆದೆರಡು ದಿನಗಳಿಂದ ಸುರಿದ ಮಳೆಗೆ ಬಂಡೆಯ ಮೇಲಿನ ಕೊಳ್ಳದಲ್ಲಿ ನೀರು ನಿಂತಿದೆ. ಅದೇ ನೀರಲ್ಲಿ ತಲೆಯನ್ನು ಮುಳುಗಿಸಿ, ಕಲ್ಲು ಎತ್ತಿಹಾಕಿ ಕೊಲೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆಂದು ಮೇಲ್ನೋಟಕ್ಕೆ ತಿಳಿದುಬಂದಿದೆ.

ಈ ಸಂಬಂಧ ಸೂಳಗಿರಿ ಠಾಣಾ ಪೊಲೀಸರು ಸುತ್ತಮುತ್ತಲ ಗ್ರಾಮಗಳಿಗೆ ಫೋಟೋದೊಂದಿಗೆ ಗುರುತು ಪತ್ತೆಗಾಗಿ ಪ್ರಯತ್ನಿಸುತ್ತಿದ್ದಾರೆ. ಮಹಿಳೆಯನ್ನು ಕಂಡ ಪೊಲೀಸರು ಕರ್ನಾಟಕದ ನಿವಾಸಿ ಇರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಮ್ಯಾನೇಜರ್ ಸಾವು: ಹಿಂದಿನಿಂದ ವೇಗವಾಗಿ ಬಂದ ಲಾರಿಯೊಂದು ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಖಾಸಗಿ ಕಂಪೆನಿಯ ಮ್ಯಾನೇಜರ್‌ರೊಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ದಾರುಣ ಘಟನೆ ಯಲಹಂಕದ ಡಾಬಾ ಕ್ರಾಸ್ ಬಳಿ ನಡೆದಿದೆ. ವಿದ್ಯಾರಣ್ಯಪುರದ ಕವಿತಾ(36) ಮೃತಪಟ್ಟವರು ಎಂದು ತಿಳಿದುಬಂದಿದೆ.

ಹೆಸರುಘಟ್ಟದ ಐಸಿಎಚ್‌ಆರ್ ಕಂಪೆನಿಯಲ್ಲಿ ವ್ಯವಸ್ಥಾಪಕಿ ಆಗಿರುವ ಕವಿತಾ ಶನಿವಾರ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಸ್ಕೂಟರ್‌ನಲ್ಲಿ ಎಂ.ಎಸ್ ಪಾಳ್ಯದಿಂದ ಬೆಟ್ಟಹಳ್ಳಿ ರಸ್ತೆಯಲ್ಲಿ ಬರುತ್ತಿದ್ದರು. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಲಾರಿ ಢಿಕ್ಕಿ ಹೊಡೆದು ಕೆಳಗೆ ಬಿದ್ದ ಕವಿತಾ ಅವರ ಮೇಲೆ ಚಕ್ರ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಲಾರಿ ಚಾಲಕ ಮೋಹನ್ ರಾಜ್ ಎಂಬಾತನನ್ನು ಇಲ್ಲಿನ ಯಲಹಂಕ ಸಂಚಾರ ಠಾಣಾ ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆಂದು ಡಿಸಿಪಿ ಸಾರಾ ಫಾತಿಮಾ ತಿಳಿಸಿದ್ದಾರೆ.

ಪಾದಚಾರಿ ಸಾವು: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ಕೇಬಲ್ ತಂತಿ ತುಳಿದ ಪರಿಣಾಮ ವಿದ್ಯುತ್ ಸ್ಪರ್ಶವಾಗಿ ಸಾವನ್ನಪ್ಪಿರುವ ದಾರುಣ ಘಟನೆ ಬನ್ನೇರುಘಟ್ಟ ರಸ್ತೆಯ ವೀವರ್ಸ್ ಕಾಲೋನಿ ಬಳಿ ನಡೆದಿದೆ.

ಬನ್ನೇರುಘಟ್ಟ ಬಳಿಯ ನೇಕಾರನಗರದ ಬಾಲಕೃಷ್ಣ(32) ಮೃತ ಪಾದಚಾರಿ ಎಂದು ಪೊಲೀಸರು ತಿಳಿಸಿದ್ದಾರೆ.ಈ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಬಾಲಕ ಮೃತ್ಯು: ಟೆಂಪೋವೊಂದು ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಐದು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಇಲ್ಲಿನ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೆಗ್ಗನಹಳ್ಳಿಯ ಮಾರಮ್ಮನ ದೇವಸ್ಥಾನ ಬಳಿಯ ಗಗನ್ ಮೃತ ಬಾಲಕ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ಸಂಜೆ ಮನೆಯ ಬಳಿ ಸೈಕಲ್ ಚಲಾಯಿಸುತ್ತಿದ್ದಾಗ ಟೆಂಪೋ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಗಗನ್‌ನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿರುವ ಪೀಣ್ಯ ಸಂಚಾರ ಪೊಲೀಸರು ಟೆಂಪೋ ಚಾಲಕನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News