ಮಹಿಳಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಲ್ಲಿ ಹಿಂದೆ ಉಳಿದಿದ್ದೇವೆ: ಡಾ.ವಸುಂಧರಾ ಭೂಪತಿ

Update: 2019-04-21 14:34 GMT

ಬೆಂಗಳೂರು, ಎ.21: ಇಂದಿನ ಜಗತ್ತು ಆಧುನಿಕವಾಗಿ ಎಷ್ಟೇ ಮುಂದುವರೆದಿದ್ದರೂ ಮಹಿಳೆಯರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಲ್ಲಿ ನಾವು ಹಿಂದೆ ಉಳಿದಿದ್ದೇವೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಅಭಿಪ್ರಾಯಪಟ್ಟರು.

ರವಿವಾರ ನಗರದ ಚಾನ್ಸರಿ ಹೋಟೆಲ್‌ನಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಫೌಂಡೇಷನ್ ಫಾರ್ ಆರ್ಟ್ ಅಂಡ್ ಕಲ್ಚರ್ ಫಾರ್ ಡೆಫ್ ಆಯೋಜಿಸಿದ್ದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿಕಲ ಚೇತನ ಮಹಿಳೆಯರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ನಾವುಗಳು ಮಹಿಳಾ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಮಹಿಳೆಯರಿಗೆ ಏನು ತೊಂದರೆ ಆಗುತ್ತಿದೆಯೋ ಅಂತಹ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಹಿಳೆಯರಿಗೆ ಇನ್ನೂ ಸಮಾಜದಲ್ಲಿ ತಾರತಮ್ಯವಿದೆ. ಒಂದು ಕಡೆ ಮಹಿಳೆ ಇನ್ನೊಂದೆಡೆ ವಿಕಲಚೇತನರು, ಹೀಗಿರುವಾಗ ಇವೆಲ್ಲವನ್ನೂ ಮೀರಿ ಸಮಾಜದಲ್ಲಿ ನೀವು ಬೆಳೆದಿರುವುದು ಅನನ್ಯವಾದುದು. ಅಲ್ಲದೆ, ನಿಮ್ಮ ನ್ಯೂನತೆಗಳನ್ನು ಮೀರಿ ಸಾಧನೆ ಮಾಡಿರುವುದು ಶ್ಲಾಘನೀಯವಾಗಿದೆ. ಮಹಿಳೆ ಎಂಬುದೇ ಒಂದು ಶಕ್ತಿಯಾಗಿದ್ದು, ಅವಳು ಕುಟುಂಬದ ಜೀವಾಳವಾಗಿದ್ದಾಳೆ ಎಂದು ತಿಳಿಸಿದರು.

ಸಾಧನೆ ಮಾಡುವವರು ಒಂದು ಕಡೆಯಾದರೆ ಸಾಧಕರನ್ನೂ ಗುರುತಿಸುತ್ತಿರುವವರರೂ ಕೆಲವು ಮಂದಿ ಇದ್ದಾರೆ. ಇಂತವರೇ ವಿಕಲಚೇತನರ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು. ಅಲ್ಲದೆ, ಸೌಂದರ್ಯ ಎನ್ನುವುದು ನೋಡುವ ಕಣ್ಣುಗಳಲ್ಲಿ ಇಲ್ಲ. ನಗು ಮತ್ತು ನಡವಳಿಕೆಯಲ್ಲಿ ಇದೆ. ಅದು ವಿಕಲ ಚೇತನರಲ್ಲಿ ಹೆಚ್ಚು ಇದೆ ಎಂದರು.

ವಾಯು ಪಡೆಯ ಕಂಮಾಡರ್ ಬಿ.ನರರೇಂದ್ರ ಕುಮಾರ್ ಮಾತನಾಡಿ, ಸಮಾಜದಲ್ಲಿ ವಿಕಲಚೇತನರಿಗೆ ವಿಶೇಷ ಸೌಲಭ್ಯಗಳನ್ನು ಹೆಚ್ಚಿನ ಮಟ್ಟದಲ್ಲಿ ನೀಡಿಲ್ಲ. ಆದರೂ ಇರುವ ಸೌಲಭ್ಯಗಳನ್ನೇ ಉಪಯೋಗಿಸಿಕೊಂಡು ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ಇವರಿಗೆ ಮುಕ್ತ ಅವಕಾಶ ನೀಡಬೇಕು ಎಂದು ಮನವ ಮಾಡಿದರು.

ಪ್ರಶಸ್ತಿ ಪುರಸ್ಕೃತರು: ಕುಸುಮಾ - ಈಜುಗಾರ್ತಿ, ಪಿಂಕಿಗುಪ್ತ - ಸಂಗೀತಗಾರ್ತಿ, ರಾಧಾಮಣಿ ಪರಮ ಶಿವ - ಪಿಸಿಯೋ ತೆರಪಿಸ್ಟ್, ಟಿ.ಸವಿತಾ - ಶಿಕ್ಷಣ ಕ್ಷೇತ್ರ, ಹಾಲಮ್ಮ - ಸಮರ್ಥನಂ ಟ್ರಸ್ಟ್, ಮೃದುಲಾ - ಚಿತ್ರಕಲಾವಿದೆ, ಶಂಕರಮ್ಮ - ಸಮರ್ಥನಂ ಟ್ರಸ್ಟ್, ಶ್ವೇತ - ನಿವೇದಿತಾ ಪ್ರತಿಷ್ಠಾನದ ಕಾರ್ಯಕರ್ತೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News