ವೋಟು ಸೆಳೆಯಲು ಪುಲ್ವಾಮ ಹುತಾತ್ಮರೇ ಬಂಡವಾಳ!

Update: 2019-04-22 18:13 GMT

ಮಾನ್ಯರೇ,

ಎರಡು ತಿಂಗಳುಗಳಿಗಿಂತಲೂ ಹೆಚ್ಚು ಕಾಲ ಸರಿದು ಹೋಗಿದ್ದರೂ, ಸರಕಾರ ತನಿಖೆ ನಡೆಸಿ ಪುಲ್ವಾಮದಲ್ಲಾಗಿದ್ದ ಘೋರ ಭದ್ರತಾ ವೈಫಲ್ಯಕ್ಕೆ ಮೂಲ ಜವಾಬ್ದಾರರು ಯಾರು ಎಂದು ಇನ್ನೂ ಪತ್ತೆ ಹಚ್ಚಿಲ್ಲ. ಲೋಕಸಭಾ ಚುನಾವಣೆಗೆ ಮುಂಚೆ ಉಗ್ರ ದಾಳಿ ಆಗುವ ಸಂಭವವಿದೆ ಮತ್ತು ಫೆಬ್ರವರಿ ಎರಡನೇ ವಾರದಲ್ಲಿಯೇ ಈ ಬಾರಿಯೂ ಉಗ್ರ ದಾಳಿ ನಡೆಯಬಹುದು ಎಂದು ಗುಪ್ತಚರ ಇಲಾಖೆ ಸತತವಾಗಿ ಎಚ್ಚರಿಸಿದ್ದರೂ ಸರಕಾರ ಯಾಕೆ ಮುನ್ನೆಚ್ಚರಿಕೆ ವಹಿಸಲಿಲ್ಲ? ಅಷ್ಟೇ ಅಲ್ಲ ಸಿಆರ್‌ಪಿಎಫ್ ಕಮಾಂಡರ್ 2,500 ಜವಾನರನ್ನು ವಿಮಾನದ ಮೂಲಕ ಜಮ್ಮುವಿನಿಂದ ಶ್ರೀನಗರಕ್ಕೆ ಸಾಗಿಸಬೇಕು ಎಂದು ಅಧಿಕೃತವಾಗಿ ಕೋರಿಕೊಂಡಿದ್ದರೂ, ಅದಕ್ಕೆ ಕೇವಲ ಐದು ಲಕ್ಷ ರೂಪಾಯಿ ಮಾತ್ರ ಖರ್ಚಾಗುತ್ತಿದ್ದರೂ, ಸರಕಾರ ಯಾಕೆ ಜುಜುಬಿ 5 ಲಕ್ಷ ಉಳಿಸಲು ರಸ್ತೆ ಮೂಲಕ ಜವಾನರನ್ನು ಸಾಗಿಸಿ ನಮ್ಮ 45 ವೀರ ಜವಾನರನ್ನು ಬಲಿ ಕೊಟ್ಟಿತು?
 
ಅಂದು ಉಗ್ರರು ಸ್ಫೋಟಗೊಳಿಸಿದ ಬಸ್ಸಿನ ಹಿಂದೆ ಮತ್ತು ಮುಂದೆ ಹೋಗುತ್ತಿದ್ದ ಇತರ ಬಸ್ಸುಗಳಿಗೂ ಹಾನಿಯಾಗಿದೆ ಹಾಗೂ ಅದರಲ್ಲಿದ್ದ ಜವಾನರೂ ಗಾಯಗೊಂಡಿದ್ದಾರೆ. ಅವರ ಆರೋಗ್ಯಸ್ಥಿತಿ ಈಗ ಹೇಗಿದೆ ಎಂದು ಸರಕಾರ ಯಾಕೆ ಜನರಿಗೆ ಮಾಹಿತಿ ಕೊಡುತ್ತಿಲ್ಲ? ಮೊದಲು ನಡೆದ ಸರ್ಜಿಕಲ್ ಸ್ಟ್ರೈಕನ್ನು ಮಿಲಿಟರಿ ರಹಸ್ಯದಂಗವಾಗಿ ಗುಟ್ಟಾಗಿ ಇಡಬೇಕಿತ್ತು. ಆದರೆ ಮೋದಿ ಅದರ ಬಗ್ಗೆ ಹೋದಲ್ಲೆಲ್ಲಾ ಬಡಾಯಿ ಕೊಚ್ಚಿ, ಒಬ್ಬ ಅಶಿಕ್ಷಿತ ಗ್ರಾಮ ಪಂಚಾಯತ್ ಸದಸ್ಯನಂತೆ ಎಲ್ಲಾ ಮಿಲಿಟರಿ ಗುಟ್ಟು ಬಹಿರಂಗ ಪಡಿಸುತ್ತಾರೆ. ಆದರೆ ಸಿಆರ್‌ಪಿಎಫ್ ಜವಾನರ ಸ್ಥಿತಿಗತಿ ಜನರಿಗೆ ತಿಳಿಸಬೇಕಿದ್ದರೂ ಅದನ್ನು ಮಾತ್ರ ಸರಕಾರ ಗುಟ್ಟು ಮಾಡುತ್ತಿದೆ. ಇಂತಹ ದಾಳಿಯ ತನಿಖೆ ಮಾಡಲು ಎರಡು ತಿಂಗಳು ಸಾಕಾಗುವುದಿಲ್ಲವೇ? ಬಾಲಕೋಟ್ ವಾಯುದಾಳಿ ವೈರಿ ದೇಶದ ಅರಣ್ಯ ಪ್ರದೇಶದಲ್ಲಿ ರಾತ್ರಿ ಕತ್ತಲೆಯಲ್ಲಿ ನಡೆದಿದ್ದರೂ ಅಲ್ಲಿ ಎಷ್ಟು ಜನರು ಸತ್ತರು ಎಂಬ ನಿಖರ ಸಂಖ್ಯೆ ಮೋದಿಗೆ ಗೊತ್ತಿದೆಯಂತೆ, ಆದರೆ ನಮ್ಮದೇ ಪ್ರದೇಶದಲ್ಲಿ ಹಗಲು ಹೊತ್ತಿನಲ್ಲಿ ನಡೆದ ಪುಲ್ವಾಮ ಉಗ್ರ ದಾಳಿಯಲ್ಲಿ ಆದ ಜೀವ ಹಾನಿ ಎಷ್ಟೆಂದು ಮೋದಿ ಸರಕಾರಕ್ಕೆ ಗೊತ್ತಿಲ್ಲವಂತೆ. ಇದು ಎಂತಹ ವಿಪರ್ಯಾಸ! ಈ ವರೆಗೆ ಮೋದಿ 50 ಕ್ಕೂ ಹೆಚ್ಚು ಕಡೆ ಚುನಾವಣಾ ರ್ಯಾಲಿ ನಡೆಸಿದ್ದಾರೆ. ಅಲ್ಲಿ ಪ್ರತಿಯೊಂದೆಡೆ ಮೋದಿಯವರು ಸೇನಾಪಡೆಯ ಹೆಸರು ಬಳಸಿ ನಿರ್ಲಜ್ಜವಾಗಿ ಚುನಾವಣಾ ನೀತಿ ಸಂಹಿತೆ ಮುರಿದು ಪುಲ್ವಾಮ ದಾಳಿಯನ್ನು ತಪ್ಪದೆ ಉಲ್ಲೇಖಿಸಿ ಮತ ಯಾಚಿಸಲು ಮರೆಯುತ್ತಿಲ್ಲ. ಆದರೆ ಹುತಾತ್ಮರ ಕುಟುಂಬಕ್ಕೆ ಈ ವರೆಗೆ ಯಾವ ಸಹಾಯ ಕೊಡಲಾಗಿದೆ ಎಂಬುದನ್ನು ಮಾತ್ರ ಅವರು ಎಲ್ಲಿಯೂ ಹೇಳುತ್ತಿಲ್ಲ. ಚುನಾವಣಾ ಲಾಭಕ್ಕಾಗಿ ಪುಲ್ವಾಮ ಹುತಾತ್ಮರನ್ನು ಬಂಡವಾಳ ಮಾಡಿಕೊಂಡು ವೋಟು ಸೆಳೆಯುವವರಿಗೆ ಈ ನತದೃಷ್ಟ ಜವಾನರ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡುವುದು ಸಮಯಸಾಧಕರಿಗೆ ಬೇಕಿಲ್ಲ. 

Writer - -ವೀರಪ್ಪಡಿ. ಎನ್., ಮಡಿಕೇರಿ

contributor

Editor - -ವೀರಪ್ಪಡಿ. ಎನ್., ಮಡಿಕೇರಿ

contributor

Similar News