ಭಾರತ ಹಾಕಿ ಕೋಚ್ ಸ್ಥಾನ ಸ್ವೀಕರಿಸಿದ ಗ್ರಹಾಂ ರೇಡ್

Update: 2019-04-22 18:30 GMT

ಬೆಂಗಳೂರು, ಎ.22: ಭಾರತ ಪುರುಷರ ಹಾಕಿ ತಂಡಕ್ಕೆ ನೂತನವಾಗಿ ನೇಮಕಗೊಂಡಿರುವ ಕೋಚ್ ಗ್ರಹಾಂ ರೇಡ್ ಸೋಮವಾರ ಇಲ್ಲಿ ನಡೆಯುತ್ತಿರುವ ತಂಡದ ರಾಷ್ಟ್ರೀಯ ಶಿಬಿರದಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ. ಆಟಗಾರರು ಯಾವತ್ತೂ ತಂಡಕ್ಕೆ ಮೊದಲ ಆದ್ಯತೆ ನೀಡಬೇಕೆಂದು ತಮ್ಮ ಮೊದಲ ಸಲಹೆಯನ್ನು ಗ್ರಹಾಂ ನೀಡಿದ್ದಾರೆ.

ಎ.20ರಂದು ಬೆಂಗಳೂರಿಗೆ ಆಗಮಿಸಿದ್ದ ಅವರು ಸೋಮವಾರ ಕಾರ್ಯನಿರತರಾಗಿದ್ದು, ಇಲ್ಲಿಯ ಸಾಯ್ ಕೇಂದ್ರದಲ್ಲಿ ಆಟಗಾರರ ಜತೆಗೆ ಮೊದಲ ಸಭೆ ನಡೆಸಿದರು.

‘‘ ಬೆಂಗಳೂರಿನ ಮೈದಾನ ವಿಶ್ವ ಪ್ರಸಿದ್ಧವಾಗಿದೆ. ನಾನು ಇಲ್ಲಿಗೆ ಬಂದ ಸಮಯದಲ್ಲಿ ಆಟಗಾರರಿಗೆ ಒಂದು ಘಟಕ, ಒಂದು ತಂಡವಾಗಿ ಆಡಬೇಕು ಹಾಗೂ ತಂಡವನ್ನು ಮೊದಲ ಆದ್ಯತೆಯನ್ನಾಗಿ ಸ್ವೀಕರಿಸಬೇಕು ಎಂಬ ನನ್ನ ನಿರೀಕ್ಷೆಗಳನ್ನು ತಿಳಿಸಿದ್ದೇನೆ ’’ ಎಂದು 54 ವರ್ಷದ ಆಸ್ಟ್ರೇಲಿಗ ಹೇಳಿದ್ದಾರೆ. ‘‘ಭಾರತದಲ್ಲಿ ಲಭ್ಯವಾಗುವ ಪ್ರತಿಭೆಗಳು ಭವಿಷ್ಯದ ಬಗ್ಗೆ ನನ್ನನ್ನು ಆಶಾವಾದಿಯಾಗುವಂತೆ ಮಾಡಿವೆ’’ ಎಂದು ಇದೇ ವೇಳೆ ಗ್ರಹಾಂ ತಿಳಿಸಿದರು. ಭುವನೇಶ್ವರದಲ್ಲಿ ಜೂ.6ರಿಂದ ಆರಂಭವಾಗುವ ಪ್ರಮುಖ ಟೂರ್ನಿ ಎಫ್‌ಐಎಚ್ ಹಾಕಿ ಸರಣಿ ಫೈನಲ್ಸ್ ಗೆ ಮುಖ್ಯ ಕೋಚ್ ಆಗಿ ತಂಡವನ್ನು ತಯಾರುಗೊಳಿಸುವ ಮೊದಲ ಹೊಣೆಗಾರಿಕೆ ರೇಡ್ ಮೇಲಿದೆ. ಈ ಸರಣಿಯಲ್ಲಿ ಭಾರತ ತಂಡ ಏಶ್ಯನ್ ಗೇಮ್ಸ್ ಚಾಂಪಿಯನ್ ಜಪಾನ್, ಮೆಕ್ಸಿಕೊ, ಪೋಲೆಂಡ್, ರಶ್ಯ, ದ.ಆಫ್ರಿಕ, ಅಮೆರಿಕ ಹಾಗೂ ಉಝ್ಬೇಕಿಸ್ತಾನ ವಿರುದ್ಧ ಸೆಣಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News