ರಾಜಸ್ಥಾನ ರಾಯಲ್ಸ್‌ ವಿರುದ್ಧ ಡೆಲ್ಲಿ ದರ್ಬಾರ್

Update: 2019-04-22 18:45 GMT

ಜೈಪುರ, ಎ.22: ಇಲ್ಲಿನ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ 40ನೇ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆತಿಥೇಯ ರಾಜಸ್ಥಾನ ರಾಯಲ್ಸ್‌ನ್ನು 6 ವಿಕೆಟ್‌ಗಳಿಂದ ಮಣಿಸಿದೆ.

ರಾಜಸ್ಥಾನ ನೀಡಿದ 192 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ 19.2 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 193 ರನ್ ಗಳಿಸಿ ಬೀಗಿತು.

ಡೆಲ್ಲಿ ಪರ ಬ್ಯಾಟಿಂಗ್ ಆರಂಭಿಸಿದ ಪೃಥ್ವಿ ಶಾ (42, 39 ಎಸೆತ, 4 ಬೌಂಡರಿ, 1ಸಿಕ್ಸರ್ ) ಹಾಗೂ ಶಿಖರ್ ಧವನ್ (54, 27 ಎಸೆತ, 8 ಬೌಂಡರಿ, 2 ಸಿಕ್ಸರ್) ಮೊದಲ ವಿಕೆಟ್ ಜೊತೆಯಾಟದಲ್ಲಿ 72 ರನ್ ಗಳಿಸಿದರು. ಶಿಖರ್ ಧವನ್ ವಿಕೆಟ್ ಪತನದ ಬಳಿಕ ಬ್ಯಾಟಿಂಗ್‌ಗೆ ಇಳಿದ ನಾಯಕ ಶ್ರೇಯಸ್ ಅಯ್ಯರ್ (4) ಶೀಘ್ರ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಗೂಡಿದ ಪೃಥ್ವಿ ಹಾಗೂ ವಿಕೆಟ್ ಕೀಪರ್ ರಿಷಭ್ ಪಂತ್ (ಅಜೇಯ 78, 36 ಎಸೆತ, 6 ಬೌಂಡರಿ, 4 ಸಿಕ್ಸರ್ ) ರಾಜಸ್ಥಾನ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು. ಪೃಥ್ವಿ ವಿಕೆಟ್ ಪತನಗೊಂಡಾಗ ಡೆಲ್ಲಿಯ ಸ್ಕೋರ್ 3 ವಿಕೆಟ್‌ಗೆ 161 ರನ್. ರುದರ್‌ಫೋರ್ಡ್ (11, 5 ಎಸೆತ, 1 ಬೌಂಡರಿ, 1 ಸಿಕ್ಸರ್) ಅಲ್ಪ ಕಾಣಿಕೆ ನೀಡಿದರು. ಕೊನೆಯಲ್ಲಿ ಕಾಲಿನ್ ಇನ್‌ಗ್ರಾಮ್(ಅಜೇಯ 3)ಹಾಗೂ ಪಂತ್ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ಇದಕ್ಕೂ ಮೊದಲು ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡ ಅಜಿಂಕ್ಯಾ ರಹಾನೆ ಶತಕದ ಬಲದಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು. ತಂಡದ ಪರ ಬ್ಯಾಟಿಂಗ್ ಆರಂಭಿಸಿದ ಮಾಜಿ ನಾಯಕ ರಹಾನೆ (105, 63 ಎಸೆತ, 11 ಬೌಂಡರಿ, 3 ಸಿಕ್ಸರ್) ಹಾಗೂ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ (0) 5 ರನ್ ಆಗುವಷ್ಟರಲ್ಲಿ ಬೇರ್ಪಟ್ಟರು. ಈ ಬಳಿಕ ರಹಾನೆಗೆ ಜೊತೆಗೂಡಿದ ನಾಯಕ ಸ್ಟೀವನ್ ಸ್ಮಿತ್ (50, 32 ಎಸೆತ, 8 ಬೌಂಡರಿ) ತಂಡದ ಮೊತ್ತವನ್ನು ಶೀಘ್ರಗತಿಯಲ್ಲಿ ಹೆಚ್ಚಿಸುವ ಪ್ರಯತ್ನ ಆರಂಭಿಸಿದರು.

ನಾಯಕತ್ವ ಜವಾಬ್ದಾರಿಯ ‘ಭಾರ’ವನ್ನು ಇಳಿಸಿ ಹಗುರವಾದಂತೆ ಕಂಡುಬಂದ ರಹಾನೆ ಕ್ರೀಡಾಂಗಣದ ಮೂಲೆ ಮೂಲೆಗೆ ಚೆಂಡನ್ನು ಅಟ್ಟಿ ಆಟಕ್ಕೆ ರಂಗು ತಂದರು. ಈ ಇಬ್ಬರೂ 2ನೇ ವಿಕೆಟ್ ಜೊತೆಯಾಟದಲ್ಲಿ 75 ಎಸೆತಗಳಲ್ಲಿ 130 ರನ್ ಗಳಿಸಿದರು. ಅರ್ಧಶತಕ ಗಳಿಸುತ್ತಿದ್ದಂತೆಯೇ ಸ್ಮಿತ್ ಅವರು ಅಕ್ಷರ್ ಪಟೇಲ್ ಎಸೆತದಲ್ಲಿಕ್ರಿಸ್ ಮೊರಿಸ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.ಬೆನ್ ಸ್ಟೋಕ್ಸ್ (8) ವೈಫಲ್ಯ ಅನುಭವಿಸಿದರು. ಅಶ್ಟನ್ ಟರ್ನರ್(0) ಮಿಂಚಲಿಲ್ಲ. ಸ್ಟುವರ್ಟ್ ಬಿನ್ನಿ (19, 13 ಎಸೆತ, 2 ಬೌಂಡರಿ ) ಕೊನೆಯಲ್ಲಿ ಸಿಡಿದರು.

ಡೆಲ್ಲಿ ಪರ ರಬಾಡ (37ಕ್ಕೆ 2) ಬೌಲಿಂಗ್‌ನಲ್ಲಿ ಮಿಂಚಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News