'ಪೋಸ್ಟ್ ಕಾರ್ಡ್' ಸ್ಥಾಪಕ ಮಹೇಶ್ ವಿಕ್ರಂ ಹೆಗ್ಡೆ ಸಿಐಡಿ ವಶಕ್ಕೆ?

Update: 2019-04-24 17:34 GMT

ಬೆಂಗಳೂರು, ಎ.24: ವಿಜಯಪುರದ ಬಿಎಲ್ ಇಡಿ ಸಂಸ್ಥೆಯ ನಕಲಿ ಲೆಟರ್ ಹೆಡ್ ಸೃಷ್ಟಿಸಿ, ನಕಲಿ ಸಹಿ ಬಳಸಿ ಅಪಪ್ರಚಾರ ನಡೆಸಿದ ಆರೋಪದಲ್ಲಿ ನಕಲಿ ಸುದ್ದಿಗಳಿಂದ ಕುಖ್ಯಾತಿ ಪಡೆದಿರುವ ವೆಬ್ ಸೈಟ್ ‘ಪೋಸ್ಟ್ ಕಾರ್ಡ್’ ಸ್ಥಾಪಕ ಮಹೇಶ್ ವಿಕ್ರಂ ಹೆಗ್ಡೆಯನ್ನು ಸಿಐಡಿ ಸೈಬರ್ ವಿಂಗ್‌ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಗೃಹ ಸಚಿವರ ವಿರುದ್ಧ ಷಡ್ಯಂತ್ರ ರೂಪಿಸುವುದಕ್ಕಾಗಿ ನಕಲಿ ಲೆಟರ್ ಹೆಡ್ ಮತ್ತು ನಕಲಿ ಸಹಿ ಬಳಸಲಾಗಿದೆ ಎಂದು ಆರೋಪಿಸಲಾಗಿದ್ದು, ಈ ವಿಚಾರ ಭಾರೀ ವಿವಾದ ಸೃಷ್ಟಿಸಿತ್ತು. ಗೃಹ ಸಚಿವರ ದೂರಿನ ನಂತರ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿತ್ತು ಎನ್ನಲಾಗಿದ್ದು, ಇದೀಗ ಮಹೇಶ್ ವಿಕ್ರಂ ಹೆಗ್ಡೆಯನ್ನು ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. 

ಏನಿದು ಪ್ರಕರಣ?: ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ ಎನ್ನುವ ರೀತಿಯ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

“ಈ ಪತ್ರವನ್ನು ನಾನು ಬರೆದಿಲ್ಲ. ಯಾರೋ ಉದ್ದೇಶಪೂರ್ವಕವಾಗಿ ಹೀಗೆ ಮಾಡಿದ್ದಾರೆ” ಎಂದು ಆರೋಪಿಸಿ ಗೃಹ ಸಚಿವರು ವಿಜಯಪುರದ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ನಂತರ ಈ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಈಗ ಈ ಪ್ರಕರಣದ ಹಿನ್ನೆಲೆಯಲ್ಲಿ ಸಿಐಡಿ, ಮಹೇಶ್ ವಿಕ್ರಂ ಹೆಗ್ಡೆಯನ್ನು ಬುಧವಾರ ಸತತ 4 ಗಂಟೆಗಳ ಕಾಲ ವಿಚಾರಣೆ ನಡೆಸಿದೆ ಎಂದು ತಿಳಿದುಬಂದಿದೆ.

ಬಂಧನ: ಈ ಹಿಂದೆ ಜೈನ ಮುನಿ ಶ್ರೀ ಉಪಾಧ್ಯಾಯ ಮಾಯಾಂಕ್ ಸಾಗರ್‌ ಜಿ ಮಹಾರಾಜ್ ಎಂಬವರು ಅಪಘಾತವೊಂದರಲ್ಲಿ ಗಾಯಗೊಂಡಿದ್ದರು. ಆದರೆ, ಮಹೇಶ್ ವಿಕ್ರಂ ಹೆಗ್ಡೆ, ಮುಸ್ಲಿಮರು ಜೈನ ಮುನಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದ. ಈ ಆರೋಪದಡಿ ಈತನ ಮೇಲೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪೊಲೀಸರು ಬಂಧಿಸಿದ್ದರು.

ಸುಳ್ಳು ಹೇಳಿದ ಬಿಜೆಪಿ ನಾಯಕರು?

ವೈರಲ್ ಪತ್ರದ ಪ್ರಕರಣ ಸಂಬಂಧ ಮಹೇಶ್ ವಿಕ್ರಂ ಹೆಗ್ಡೆ ಅನ್ನು ಸಿಐಡಿ ಸೈಬರ್ ವಿಭಾಗದ ಪೊಲೀಸರು ಬರೀ ವಿಚಾರಣೆ ನಡೆಸಿದರು. ಆದರೆ, ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸಿ.ಟಿ.ರವಿ ಸೇರಿದಂತೆ ಪ್ರಮುಖರು ರಾಜ್ಯ ಸರಕಾರ ಮಹೇಶ್ ವಿಕ್ರಂ ಹೆಗ್ಡೆಯನ್ನು ಬಂಧಿಸಿದೆ ಎಂದು ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News