ಕಾಂಗ್ರೆಸ್‌ನ 78 ಶಾಸಕರೂ ರಮೇಶ್ ಜೊತೆ ವಿಶ್ವಾಸದಿಂದ ಇದ್ದೇವೆ: ಸಚಿವ ಡಿಕೆಶಿ

Update: 2019-04-24 16:59 GMT

ಬೆಂಗಳೂರು, ಎ. 24: ‘ಇಪ್ಪತ್ತು ಮಂದಿ ಶಾಸಕರಲ್ಲ, ರಮೇಶ್ ಜಾರಕಿಹೊಳಿ ದಡ್ಡರು. ಕಾಂಗ್ರೆಸ್ಸಿನ 78ಮಂದಿ ಶಾಸಕರೂ ರಮೇಶ್ ಸಂಪರ್ಕದಲ್ಲಿದ್ದು ಕಾಂಗ್ರೆಸ್- ಜೆಡಿಎಸ್‌ನ ಎಲ್ಲ ಶಾಸಕರು ಅವರೊಂದಿಗೆ ವಿಶ್ವಾಸದಿಂದ ಇದ್ದೇವೆ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಂಸಾರ ಒಂದೇ, ಅವರು ಅವರ ಮನೇಲಿ, ನಾವು ನಮ್ಮ ಮನೆಯಲ್ಲಿದ್ದೇವೆ. ರಾಜಕಾರಣ ಅವರೊಂದಿಗೆ ಮಾಡಲೇಬೇಕಲ್ಲ. ಆದರೆ, ಮೈತ್ರಿ ಸರಕಾರಕ್ಕೆ ಗಡುವು ನೀಡುತ್ತಿದ್ದಾರೆ. ನಾವೂ ಹಳ್ಳಿಯಿಂದಲೇ ಬಂದಿದ್ದೇವೆ. ಜನರೇ ನಮ್ಮ ಆಸ್ತಿ ಎಂದು ಪರೋಕ್ಷವಾಗಿ ಎಚ್ಚರಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಿ ಉಸಿರುಗಟ್ಟುವ ವಾತಾವರಣವಿದೆಯೋ ಗೊತ್ತಿಲ್ಲ. ರಮೇಶ್ ಜಾರಕಿಹೊಳಿ ಸಚಿವರಾಗಿದ್ದವರು. ನನ್ನ ಆತ್ಮೀಯರು. ಅವರೊಂದಿಗೆ ಮಾತನಾಡಲು ನಾನು ಸಿದ್ಧ. ಅವರ ಸಹೋದರ ಮಂತ್ರಿಯಾಗಿದ್ದಾರೆ. ಭಗವಂತ ರಮೇಶ ಜಾರಕಿಹೊಳಿಗೆ ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿದರು.

ಶಾಸಕ ಕಂಪ್ಲಿ ಗಣೇಶಗೆ ಜಾಮೀನು ಸಿಕ್ಕಿದೆ. ತಪ್ಪಾಗಿದೆ, ಅವರು ಬಹಳ ನೋವು ಅನುಭವಿಸಿದ್ದಾರೆ. ಮುಂದೆ ಅವರಿಗೆ ಕೆಟ್ಟ ಘಳಿಗೆ ಬಾರದಿರಲಿ. ಶಾಸಕರಾದ ಆನಂದ ಸಿಂಗ್ ಹಾಗೂ ಗಣೇಶ್ ಅವರಿಗೆ ಕೆಟ್ಟ ಘಳಿಗೆ ಬಂದಿತ್ತು. ಇದೀಗ ಹೊರ ಬಂದಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.

ರಮೇಶ್ ಜಾರಕಿಹೊಳಿ ಅಸಮಾಧಾನಕ್ಕೆ ಸಂಬಂಧಿಸಿದಂತೆ ಪಕ್ಷದ ನಾಯಕರು ಗಮನಿಸುತ್ತಿದ್ದಾರೆ. ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಲಿದ್ದಾರೆ. ನಾನು ಅವರ ಮನವೊಲಿಸೋಕೆ ಅವರು ಸಿಕ್ಕರೆ ತಾನೇ. ಸಿಕ್ಕರೆ ಅವರೊಂದಿಗೆ ನಾನು ಮಾತನಾಡುವೆ

-ಡಿ.ಕೆ.ಶಿವಕುಮಾರ್, ಜಲಸಂಪನ್ಮೂಲ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News