ರಾಜಕಾಲುವೆ ಒತ್ತುವರಿ ತೆರವಿಗೆ ಕ್ರಮ: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

Update: 2019-04-24 13:28 GMT

ಬೆಂಗಳೂರು, ಎ. 24: ರಾಜಕಾಲುವೆ ಜಾಗ ಒತ್ತುವರಿ ಮಾಡಿಕೊಂಡಿರುವವರು ಎಷ್ಟೇ ಪ್ರಭಾವಿಗಳಿದ್ದರೂ ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಒತ್ತುವರಿ ಮಾಡಿಕೊಂಡ ರಾಜಕಾಲುವೆ ಜಾಗವನ್ನು ತೆರವು ಮಾಡುವ ಕೆಲಸ ನಡೆಯುತ್ತಿದೆ ಎಂದರು.

ನಗರದ ಪ್ರತಿ ವಲಯದಲ್ಲಿಯೂ ರಾಜಕಾಲುವೆ ಗುರುತಿಸಿದ್ದು, ಅದರಲ್ಲೂ ಒತ್ತುವರಿಯಾಗಿ ಮಳೆನೀರು ನಿಲ್ಲುವಂತಹ ಪ್ರದೇಶಗಳನ್ನು ಆದ್ಯತೆ ಮೇಲೆ ತೆರವು ಮಾಡಲಾಗುತ್ತಿದೆ. ನಗರದಲ್ಲಿ ಒಟ್ಟು 840 ಕಿ.ಮೀ ಕಾಲುವೆ ಇದ್ದು, 400ಕಿ.ಮೀ ಉದ್ದ ನೀರು ಸರಾಗವಾಗಿ ಹರಿಯುವಂತೆ ಸ್ವಚ್ಛ ಹಾಗೂ ಹೂಳು ಎತ್ತುವ ಕೆಲಸ ಮಾಡಲಾಗಿದೆ.

ರಾಜಕಾಲುವೆಗೆ ತಡೆಗೋಡೆ ನಿರ್ಮಿಸಲಾಗಿದೆ. ಉಳಿದ 440 ಕಿ.ಮೀ. ಕೆಲಸ ಪ್ರಗತಿಯಲ್ಲಿದೆ. ರಾಜಕಾಲುವೆ ಮಾರ್ಗದಲ್ಲಿ ಒಟ್ಟು 1950 ಕಿ.ಮೀ. ಒತ್ತುವರಿಯನ್ನು ಗುರುತಿಸಿದ್ದು, ಈ ವರ್ಷ 450 ಕಿ.ಮೀ. ತೆರವು ಮಾಡಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತೆರವು ವಿಳಂಬವಾಗಿದ್ದು, ಇದೀಗ ಪುನರ್ ಆರಂಭಿಸಲಾಗುವುದು ಎಂದರು.

ಮಳೆಗಾಲದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಯಾವುದೇ ಭಾಗದಲ್ಲಿ ನೀರು ನಿಲ್ಲದಂತೆ ಮುನ್ನಚ್ಚರಿಕೆ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ತಗ್ಗು ಪ್ರದೇಶ, ರಾಜಕಾಲುವೆ, ರಸ್ತೆಗಳಲ್ಲಿ ನೀರು ನಿಲ್ಲುವ ಸ್ಥಿತಿ ಇದೆ. ಕಳೆದ ವರ್ಷ ನಿರೀಕ್ಷೆಗೂ ಹೆಚ್ಚು ಮಳೆಯಾದ್ದರಿಂದ ನಗರವಾಸಿಗಳು ತೊಂದರೆ ಅನುಭವಿಸಿದ್ದರು. ಆದರೆ, ಈ ವರ್ಷ ಮಳೆಗಾಲಕ್ಕೂ ಮೊದಲೇ ಅಗತ್ಯ ಮುನ್ನಚ್ಚರಿಕೆ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ ಎಂದರು.

ನಗರದಲ್ಲಿ ಒಟ್ಟು 246 ತಗ್ಗು ಪ್ರದೇಶ ಗುರುತಿಸಲಾಗಿದೆ. ಇಲ್ಲಿ ಮಳೆ ಬಿದ್ದ ಕೂಡಲೇ ನೀರು ಮನೆಗಳಿಗೆ ನುಗ್ಗುವ ಪರಿಸ್ಥಿತಿ ಇದ್ದು, ಇಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಲಾಗಿದೆ. ಜೊತೆಗೆ ಚರಂಡಿಗಳಲ್ಲಿ ಕಸ ನಿಲ್ಲದೆ ನೀರು ಸರಾಗವಾಗಿ ಹರಿಯುವಂತೆ ಈಗಾಗಲೆ ಸ್ವಚ್ಛತಾ ಕೆಲಸ ನಡೆಸಲಾಗಿದೆ ಎಂದು ಡಾ.ಪರಮೇಶ್ವರ್ ಮಾಹಿತಿ ನೀಡಿದರು.

ಮಳೆಗಾಲದಲ್ಲಿ ಪರಿಸ್ಥಿತಿ ನಿರ್ವಹಣೆಗೆ 8 ವಿಭಾಗ ಹಾಗೂ 63 ಉಪವಿಭಾಗದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ನೇಮಿಸಲಾಗಿದೆ. ಕೇಂದ್ರ ವಿಭಾಗದಲ್ಲಿ ಅಧಿಕಾರಿಗಳು ಮೂರು ಪಾಳಿಯಲ್ಲಿ ಕೆಲಸ ಮಾಡಲಿದ್ದಾರೆ. ಉಪವಿಭಾಗದಲ್ಲಿನ ಅಧಿಕಾರಿಗಳು ದಿನದ 24 ಗಂಟೆಯೂ ಕೆಲಸ ಮಾಡುವಂತೆ ಸೂಚಿಸಿದ್ದೇನೆ ಎಂದರು.

ಹೊಸದಾಗಿ ಟೆಂಡರ್: ಕಸ ವಿಲೇವಾರಿ, ಸಂಸ್ಕರಣೆ ಸಂಬಂಧ ಇನ್ನು 15 ದಿನದೊಳಗೆ ಹೊಸದಾಗಿ ಗ್ಲೋಬಲ್ ಟೆಂಡರ್ ಕರೆಯುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಇದೀಗ ಇರುವ ಟೆಂಡರ್‌ದಾರರು ಸೂಕ್ತ ರೀತಿಯಲ್ಲಿ ಕಸ ವಿಲೇವಾರಿ ಮಾಡದ ಹಿನ್ನೆಲೆಯಲ್ಲ ಹೊಸದಾಗಿ ಟೆಂಡರ್ ಆಹ್ವಾನಿಸುವುದು ಅನಿವಾರ್ಯ ಎಂದರು.

ನಗರದ ವಿವಿಧ ರಸ್ತೆಗಳಲ್ಲಿ ಒಣಗಿ ಉರುಳಿ ಬೀಳುವ ಸ್ಥಿತಿಯಲ್ಲಿರುವ ಮರಗಳನ್ನು ಪರಿಶೀಲಿಸಿ, ಅವುಗಳನ್ನು ಕತ್ತರಿಸಲು ಸೂಚಿಸಲಾಗಿದೆ. ಅಲ್ಲದೆ, ಈ ಕಾರ್ಯಕ್ಕೆ 21 ತಂಡಗಳನ್ನು ರಚಿಸಲಾಗಿದೆ. ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ’

-ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News