ಟಿವಿ9 ಹೆಸರಿನಲ್ಲಿ ಹಣ ವಸೂಲಿ ಆರೋಪ: ಪತ್ರಕರ್ತನ ವಿರುದ್ಧ ಎಫ್‌ಐಆರ್

Update: 2019-04-24 14:01 GMT

ಬೆಂಗಳೂರು, ಎ.24: ವೈದ್ಯರೊಬ್ಬರ ವಿಡಿಯೋ ಟಿವಿ 9 ಸುದ್ದಿವಾಹಿನಿಯಲ್ಲಿ ಬಿತ್ತರಿಸುವುದಾಗಿ ಬೆದರಿಸಿ 25 ಲಕ್ಷ ರೂ. ಹಣ ವಸೂಲಿ ಆರೋಪದಡಿ ಪತ್ರಕರ್ತನ ವಿರುದ್ಧ ಇಲ್ಲಿನ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಕಿರಣ್ ಶ್ಯಾನಭಾಗ್ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಈತ ಟಿವಿ 9 ಸುದ್ದಿ ವಾಹಿನಿಯ ಮಾಜಿ ವರದಿಗಾರ ಎಂದು ಹೇಳಲಾಗುತ್ತಿದೆ.

ಏನಿದು ಪ್ರಕರಣ?: ನೆಲಮಂಗಲ ತಾಲೂಕಿನ ಅರ್ಜುನ್ ಬೆಟ್ಟಹಳ್ಳಿಯ ಪರಿಪೂರ್ಣ ಸನಾತನ ಚಾರಿಟಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಎ.ವಿ.ಶ್ರೀನಿವಾಸನ್ ಎಂಬುವರು ಆರ್ಯುವೇದ ಮೆಡಿಕಲ್ ಕಾಲೇಜುವೊಂದನ್ನು ನಡೆಸುತ್ತಿದ್ದು, 2018ರ ನವೆಂಬರ್ 23ರಂದು ಕಾಲೇಜಿನ ನೂತನ ಕಟ್ಟಡವೊಂದು ಉದ್ಘಾಟನೆಗೊಂಡಿತ್ತು.

ಈ ಸಂದರ್ಭದಲ್ಲಿ ಕಿರಣ್ ಶ್ಯಾನಭಾಗ್, ತಾನು ಟಿವಿ9 ಸುದ್ದಿ ವರದಿಗಾರ. ನನ್ನ ಬಳಿ, ನಿಮ್ಮ ವಿಡಿಯೋ ಇದ್ದು, ಅದನ್ನು ವಾಹಿನಿಯಲ್ಲಿ ಬಿತ್ತರ ಮಾಡಲಾಗುವುದು. ಇದಕ್ಕೆ ತಡೆ ನೀಡಬೇಕಾದರೆ 25 ಲಕ್ಷ ನೀಡುವಂತೆ ಒತ್ತಡ ಹಾಕಿದ್ದ. ಇದರಿಂದ ಹೆದರಿ, ಡಾ.ಎ.ವಿ.ಶ್ರೀನಿವಾಸನ್ ಹಣ ಕೊಟ್ಟಿದ್ದರು. ಆದರೆ, ಮತ್ತೆ ಹಣಕ್ಕೆ ಆತ ಬೇಡಿಕೆ ಇಟ್ಟಿದ್ದು, ಈ ಸಂಬಂಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ.

ಪ್ರಕರಣ ಸಂಬಂಧ ಕಿರಣ್ ಶ್ಯಾನಭಾಗ್ ವಿರುದ್ಧ ಐಪಿಎಸ್ 1860 ಅಡಿ ಮೊಕದ್ದಮೆ ದಾಖಲಿಸಿದ್ದು, ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News