ಸ್ತ್ರೀಯರನ್ನು ಅಪಮಾನಿಸುವ ಹೇಳಿಕೆ ನೀಡಿದ ಆರೋಪ: ಸಿ.ಟಿ.ರವಿ ವಿರುದ್ಧ ದೂರು

Update: 2019-04-25 13:50 GMT

ಬೆಂಗಳೂರು, ಎ.25: ರಾಜ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಎ.14ರಂದು ಬಿಜೆಪಿ ಪಕ್ಷದ ಚಿಕ್ಕಮಗಳೂರು ಕ್ಷೇತ್ರದ ಶಾಸಕ ಸಿ.ಟಿ.ರವಿ ಪ್ರಚಾರ ಸಭೆಯಲ್ಲಿ ಸ್ತ್ರೀಯರನ್ನು ಅಪಮಾನ ಮಾಡುವ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಬಿ.ಪುಷ್ಪಾ ಅಮರನಾಥ್ ನೇತೃತ್ವದ ನಿಯೋಗವು, ಗುರುವಾರ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದೆ.

ಒಂದು ಪಕ್ಷದ ಪರ ಮತಯಾಚನೆ ಮಾಡುವಾಗ ಎದುರಾಳಿ ಪಕ್ಷವನ್ನು ವಿಷಯಾಧಾರಿತ ಟೀಕೆ ಮಾಡುವುದು ಸಂಸದೀಯ ವ್ಯವಸ್ಥೆಯಲ್ಲಿ ಸಹಜ ಪ್ರಕ್ರಿಯೆ. ಆದರೆ, ಜವಾಬ್ದಾರಿಯುತ ಸ್ಥಾನದಲ್ಲಿರುವ ಜನರಿಂದ ಆಯ್ಕೆಯಾದ ಶಾಸಕ, ರಚನಾ ಕಾರ್ಯದಲ್ಲಿ ಭಾಗಿದಾರರಾದ ವ್ಯಕ್ತಿ, ಮಹಿಳಾ ಘನತೆಯನ್ನು ಸಾರ್ವಜನಿಕವಾಗಿ ಹರಣ ಮಾಡುವ ಹೇಳಿಕೆ ನೀಡುವುದು ಸಾಮಾಜಿಕ ನೆಲೆಗಟ್ಟಿನಲ್ಲಿ ಸ್ತ್ರೀಯನ್ನು ಅಪಮಾನಿಸುವಂತಹ ಕೆಟ್ಟ ನಡವಳಿಕೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸಿ.ಟಿ.ರವಿ ಪ್ರಚಾರ ಸಭೆಯಲ್ಲಿ ‘ಮೋದಿ ವಿರೋಧಿಸುವವರು ತಾಯಿ ಗಂಡ್ರು’, ‘ಯಾರಾದರೂ ಜಾತಿ, ಧರ್ಮದ ಕಾರಣಕ್ಕೆ ಮೋದಿ ವಿರೋಧಿಸಿದರೆ ಉಂಡ ಮನೆಗೆ ದ್ರೋಹ ಬಗೆದಂತೆ’ ಎಂದು ಹೇಳಿಕೆ ನೀಡಿದ್ದಾರೆ. ಈ ಸಂಬಂಧ ರಾಜ್ಯದ ಪ್ರಮುಖ ಮಾಧ್ಯಮಗಳು ತಮ್ಮ ಟ್ವಿಟರ್ ಖಾತೆಯಲ್ಲಿ ಹಾಗೂ ಜಾಲತಾಣದಲ್ಲಿ ಪ್ರಕಟಿಸಿದೆ ಎಂದು ಪುಷ್ಪಾ ಅಮರನಾಥ್ ತಿಳಿಸಿದ್ದಾರೆ.

ಸಾರ್ವಜನಿಕರ ಎದುರು ತಮ್ಮ ಪಕ್ಷ ಬೆಂಬಲಿಸದ ಮತದಾರರು ‘ತಾಯಿ ಗಂಡರು’ ಎಂದು ಹೇಳಿಕೆ ನೀಡುವ ಮೂಲಕ ಮಹಿಳೆ ಘನತೆಯನ್ನು ಅಪಮಾನಿಸುವ ಟೀಕೆ ಮಾಡಿದ್ದಾರೆ. ಇಡೀ ಸ್ತ್ರೀ ಸಂಕುಲವನ್ನು ಕ್ಷುಲ್ಲಕವಾಗಿ ನಿಂದಿಸುವ ಮೂಲಕ, ತಮ್ಮ ಶಾಸಕ ಸ್ಥಾನದ ಘನತೆಯನ್ನು ಅವಮಾನಿಸಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ತ್ರೀಯರ ಘನತೆಗೆ ಧಕ್ಕೆ ತಂದಿರುವ ಮತ್ತು ಮಹಿಳಾ ವಿರೋಧಿ ಹೇಳಿಕೆ ನೀಡಿರುವ ಶಾಸಕ ಸಿ.ಟಿ.ರವಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಮೂಲಕ, ರಾಜಕೀಯ ಉದ್ದೇಶಕ್ಕೆ ಮಹಿಳೆಯನ್ನು ಅಪಮಾನಿಸುವುದಕ್ಕೆ ಅಂಕುಶ ಹಾಕಲು ಪುಷ್ಪಾ ಅಮರನಾಥ್ ಮನವಿ ಮಾಡಿದ್ದಾರೆ. ನಿಯೋಗದಲ್ಲಿ ಶಾಸಕ ಸೌಮ್ಯಾ ರೆಡ್ಡಿ ಸೇರಿದಂತೆ ಮಹಿಳಾ ಕಾಂಗ್ರೆಸ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News