ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಆಕಾಂಕ್ಷಿಗಳ ದಂಡು
ಬೆಂಗಳೂರು, ಎ.27: ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅಧಿಕಾರಾವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ತೆರವಾಗಲಿರುವ ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆಗಾಗಿ ಪಕ್ಷದಲ್ಲಿ ಆಕಾಂಕ್ಷಿಗಳ ದಂಡೇ ಸಿದ್ಧವಾಗುತ್ತಿದೆ.
ಪ್ರಮುಖವಾಗಿ ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮತ್ತೊಮ್ಮೆ ಪಕ್ಷದ ಅಧ್ಯಕ್ಷರಾಗಲು ತೆರೆಮರೆಯಲ್ಲಿ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.
ಇವರ ಜೊತೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ಮಾಜಿ ಸಚಿವ ಸಿ.ಟಿ.ರವಿ, ವಿರೋಧ ಪಕ್ಷದ ಮುಖ್ಯ ಸಚೇತಕ ವಿ.ಸುನೀಲ್ ಕುಮಾರ್ ಪ್ರಯತ್ನಿಸುತ್ತಿದ್ದಾರೆ. ದೀರ್ಘ ಕಾಲದಿಂದಲೂ ರಾಜ್ಯದಲ್ಲಿ ಬಿಜೆಪಿ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿರುವ ಬಿ.ಎಲ್.ಸಂತೋಷ್ ಕೂಡ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ಪ್ರಮುಖ ನಾಯಕರ ಪ್ರಯತ್ನದ ನಡುವೆಯೂ ಹಾಲಿ ಅಧ್ಯಕ್ಷ ಯಡಿಯೂರಪ್ಪ, ತಮ್ಮಿಂದ ತೆರವಾಗಲಿರುವ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಆಪ್ತರನ್ನು ತಂದು ಕೂರಿಸಲು ಪ್ರಯತ್ನಿಸುತ್ತಿದ್ದು, ಮಾಜಿ ಸಚಿವ ಶಿವಕುಮಾರ್ ಉದಾಸಿ, ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ ಹಾಗೂ ಶೋಭಾ ಕರಂದ್ಲಾಜೆ ಪರ ಒಲವು ಹೊಂದಿದ್ದಾರೆ ಎನ್ನಲಾಗುತ್ತಿದೆ.
ಡಿಸೆಂಬರ್‌ನಲ್ಲಿಯೇ ಯಡಿಯೂರಪ್ಪ ಸ್ಥಾನಕ್ಕೆ ಬೇರೆ ಅಧ್ಯಕ್ಷರನ್ನು ನೇಮಕ ಮಾಡಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮುಂದಾಗಿದ್ದರು. ಆದರೆ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಧ್ಯಕ್ಷರ ಬದಲಾಣೆ ಪ್ರಕ್ರಿಯೆಗೆ ಬಿಜೆಪಿ ಹೈ ಕಮಾಂಡ್ ಕೈ ಹಾಕಿರಲಿಲ್ಲ. ಪ್ರಮುಖವಾಗಿ ಒಕ್ಕಲಿಗ, ವೀರಶೈವ-ಲಿಂಗಾಯತ, ದಲಿತ, ಬ್ರಾಹ್ಮಣ, ಹಿಂದುಳಿದ ವರ್ಗ ಸೇರಿದಂತೆ ಎಲ್ಲ ಸಮುದಾಯದ ಹಿರಿಯ ಪ್ರಮುಖರು ಅಧ್ಯಕ್ಷ ಸ್ಥಾನಕ್ಕಾಗಿ ಪ್ರಯತ್ನ ನಡೆಸುತ್ತಿದ್ದಾರೆ.