ಗೃಹ ಸಚಿವ ಎಂ.ಬಿ.ಪಾಟೀಲ್ ವಿರುದ್ಧ ಮೇ 6ರಂದು ಬಿಜೆಪಿ ಪ್ರತಿಭಟನೆ

Update: 2019-05-04 14:16 GMT

ಬೆಂಗಳೂರು, ಮೇ 4: ವಿರೋಧ ಪಕ್ಷಗಳನ್ನು ಹತ್ತಿಕ್ಕಿ, ಮಾಧ್ಯಮಗಳನ್ನು ಬೆದರಿಸಿ ಬಾಯಿ ಮುಚ್ಚಿಸಲು ಹೊರಟಿರುವ ರಾಜ್ಯ ಸರಕಾರದ ವಿರುದ್ಧ, ಗೃಹ ಸಚಿವ ಎಂ.ಬಿ.ಪಾಟೀಲ್ ರ ದ್ವೇಷದ ರಾಜಕಾರಣ ಖಂಡಿಸಿ ಮೇ 6ರಂದು ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿಳಿಸಿದ್ದಾರೆ.

ರಾಜ್ಯದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರವು ಜನರ ಹಿತಕ್ಕಾಜಗಿ ಆಡಳಿತ ನಡೆಸುತ್ತದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ದೋಸ್ತಿ ಪಕ್ಷಗಳ ನಡುವಿನ ಆಂತರಿಕ ಕಚ್ಚಾಟ ಮಿತಿ ಮೀರಿದೆ. ರಾಜ್ಯ ಸರಕಾರದಲ್ಲಿ ಮಂತ್ರಿಗಳು, ಅಧಿಕಾರ ದುರುಪಯೋಗ ಪಡಿಸಿಕೊಂಡು, ವಿರೋಧ ಪಕ್ಷಗಳನ್ನು ಹತ್ತಿಕ್ಕುವ ದ್ವೇಷ ರಾಜಕಾರಣದಲ್ಲಿ ನಿರತರಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆಯಾಗುವ ಸುಳಿವು ಸಿಕ್ಕ ನಂತರವಂತೂ ಸಮ್ಮಿಶ್ರ ಸರಕಾರದಲ್ಲಿ ದ್ವೇಷದ ರಾಜಕಾರಣ ಮಿತಿ ಮೀರಿದೆ. ರಾಜಕೀಯ ವಿರೋಧಿಗಳು ಮತ್ತು ಮಾಧ್ಯಮದ ವಿರುದ್ಧವೂ ಸರಕಾರ ಪ್ರತೀಕಾರದ ಕ್ರಮಕ್ಕೆ ಮುಂದಾಗಿರುವುದು ಸ್ಪಷ್ಟವಾಗಿದೆ ಎಂದು ಅವರು ದೂರಿದ್ದಾರೆ.

ಪ್ರಧಾನಿಯನ್ನು ಹತ್ಯೆ ಮಾಡುವಂತೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆ ನೀಡಿದ್ದರು. ಜೆಡಿಎಸ್ ಶಾಸಕ ನಾರಾಯಣಗೌಡ ನಟರಾದ ದರ್ಶನ್, ಯಶ್ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರೂ ಯಾವುದೇ ಕ್ರಮ ಜರುಗಿಸಲಿಲ್ಲ ಎಂದು ರವಿಕುಮಾರ್ ಹೇಳಿದ್ದಾರೆ.

ಆದರೆ, ಬಿಜೆಪಿ ಕಾರ್ಯಕರ್ತರು ಮತ್ತು ಬಿಜೆಪಿ ಹಿತೈಷಿಗಳ ವಿರುದ್ಧ ದೂರು ದಾಖಲಿಸಿ ಬೆದರಿಸಲು ಪೊಲೀಸರನ್ನು ದುರ್ಬಳಕೆ ಮಾಡಲಾಗುತ್ತಿದೆ. ಐಪಿಸಿ ಸೆಕ್ಷನ್ 307ರ ಅಡಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಪ್ರಕರಣಗಳು ದಾಖಲಾಗಿದ್ದರೂ, ಕೇವಲ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಪ್ರಧಾನಿಯನ್ನು ಹತ್ಯೆ ಮಾಡುವಂತೆ ಪ್ರಚೋದನಾತ್ಮಕ ಹೇಳಿಕೆ ನೀಡಿದವರನ್ನು ಬಂಧಿಸದ ಸರಕಾರ, ಕೇವಲ ಸರಕಾರದ ವಿರುದ್ಧ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಕಾರಣಕ್ಕೆ ಬಿಜೆಪಿ ಬಗ್ಗೆ ಅಭಿಮಾನ ಹೊಂದಿರುವ ಪತ್ರಕರ್ತರಿಗೂ ಕಿರುಕುಳ ನೀಡಿ ಬಂಧಿಸಿದೆ. ಸಮ್ಮಿಶ್ರ ಸರಕಾರದಲ್ಲಿ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಕಡವೆ ಕಾಸಿನ ಬೆಲೆಯೂ ಉಳಿದಿಲ್ಲ ಎಂದು ರವಿಕುಮಾರ್ ಪ್ರಕಟಣೆಯಲ್ಲಿ ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News