×
Ad

ಬೆಂಗಳೂರು ನಗರದ 3 ಲೋಕಸಭಾ ಕ್ಷೇತ್ರಗಳ ಮತಯಂತ್ರಗಳಿಗೆ ಮೂರು ಹಂತದಲ್ಲಿ ಭದ್ರತೆ

Update: 2019-05-04 19:53 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 4: ಬೆಂಗಳೂರು ನಗರ ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರಗಳ ಮತಯಂತ್ರಗಳಿಗೆ ಭಿಗಿ ಭದ್ರತೆ ಕಲ್ಪಿಸಿದ್ದು, ಮೇ 23 ರಂದು ನಡೆಯಲಿರುವ ಮತ ಎಣಿಕೆಗೆ ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳಲಾಗುತ್ತಿದೆ.

ನಗರದ ವ್ಯಾಪ್ತಿಯಲ್ಲಿ ಮೂರು ಲೋಕಸಭಾ ಕ್ಷೇತ್ರಗಳಿದ್ದು, ಪ್ರತಿಯೊಂದು ಕ್ಷೇತ್ರದ ಮತಯಂತ್ರಗಳಿರುವ ಸ್ಟ್ರಾಂಗ್ ರೂಂಗೆ ಭಿಗಿ ಭದ್ರತೆ ಏರ್ಪಡಿಸಲಾಗಿದೆ. ಒಟ್ಟಾರೆ ಮೂರು ಹಂತದಲ್ಲಿ ಭದ್ರತೆ ನೀಡಲಾಗಿದ್ದು, ಮೊದಲನೆ ಹಂತದಲ್ಲಿ ಕೇಂದ್ರೀಯ ಪಡೆ, ಎರಡನೆ ಹಂತದಲ್ಲಿ ರಾಜ್ಯ ಮೀಸಲು ಪಡೆ ಹಾಗೂ ಮೂರನೆ ಹಂತದಲ್ಲಿ ಸಿವಿಲ್ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ. ಎಲ್ಲರೂ ಮೂರು ಶಿಫ್ಟ್‌ನಲ್ಲಿ ಕೆಲಸ ನಿರ್ವಹಿಸಲಿದ್ದು, ಪ್ರತಿದಿನ ಒಬ್ಬರು ಎಸಿಪಿ ಹಂತದ ಅಧಿಕಾರಿ, ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್‌ಗಳು ಭದ್ರತೆಗೆ ನಿಯೋಜನೆಗೊಂಡಿದ್ದಾರೆ.

ನಗರದಲ್ಲಿ ಮೂರು ಕಡೆ ಮತಯಂತ್ರಗಳನ್ನಿಟ್ಟಿದ್ದು, ಸುಮಾರು 75 ಜನ ಕೇಂದ್ರೀಯ ಪಡೆಯ ಸಿಬ್ಬಂದಿ, 76 ಮೀಸಲು ಪಡೆ ಪೊಲೀಸ್, 113 ಸಿವಿಲ್ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮತಯಂತ್ರಗಳಿರುವ ಮೌಂಟ್ ಕಾರ್ಮಲ್ ಕಾಲೇಜಿನ ಬಳಿ 24 ಕೇಂದ್ರ ಪಡೆ ಮೊದಲ ಹಂತದಲ್ಲಿ, 24 ಮೀಸಲು ಪಡೆ ಎರಡನೆ ಹಂತದಲ್ಲಿ, ಸಿವಿಲ್‌ನ 46 ಸಿಬ್ಬಂದಿ ಮೂರನೇ ಹಂತದಲ್ಲಿ ಭದ್ರತೆಗೆ ನಿಯೋಜಿಸಲಾಗಿದೆ.

ಬೆಂಗಳೂರು ದಕ್ಷಿಣ ಕ್ಷೇತ್ರದ ಮತಯಂತ್ರಗಳಿರುವ ಎಸ್‌ಎಸ್‌ಎಂಆರ್‌ವಿ ಕಾಲೇಜಿನಲ್ಲಿ ಮೊದಲ ಹಂತದಲ್ಲಿ 24 ಕೇಂದ್ರ ಪಡೆಯ ಸಿಬ್ಬಂದಿ, 24 ಮೀಸಲು ಪಡೆ ಸಿಬ್ಬಂದಿ ಎರಡನೆ ಹಂತದಲ್ಲಿ, ಮೂರನೆ ಹಂತದಲ್ಲಿ 42 ಸಿಬ್ಬಂದಿ ಭದ್ರತೆಗೆ ನಿಯೋಜನೆಗೊಂಡಿದ್ದಾರೆ.

ಉತ್ತರ ಲೋಕಸಭಾ ಕ್ಷೇತ್ರದ ಮತಯಂತ್ರಗಳಿಟ್ಟಿರುವ ಸೇಂಟ್ ಜೋಸೆಫ್ ಕಾಲೇಜಿನಲ್ಲಿ 25 ಕೇಂದ್ರಿಯ ಪಡೆ ಮೊದಲ ಹಂತದಲ್ಲಿ, ರಾಜ್ಯ ಮೀಸಲು ಪಡೆಯ 28 ಸಿಬ್ಬಂದಿ ಎರಡನೆ ಹಂತದಲ್ಲಿ ಹಾಗೂ 32 ಜನ ಸಿವಿಲ್ ಪೊಲೀಸ್ ಸಿಬ್ಬಂದಿ ಮೂರನೇ ಹಂತದಲ್ಲಿ ಭದ್ರತೆಗೆ ನಿಯೋಜಿಸಲಾಗಿದೆ. ಒಟ್ಟಾರೆ ಮೂರು ಕಡೆಗಳಲ್ಲಿ 100 ಕ್ಕೂ ಅಧಿಕ ಸಿಸಿವಿಟಿಗಳನ್ನು ಅಳವಡಿಸಲಾಗಿದ್ದು, ಬಿಗಿ ಭದ್ರತೆ ಒದಗಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News