×
Ad

ರಾಜ್ಯದಲ್ಲಿ 22 ಸ್ಥಾನಗಳಲ್ಲಿ ಗೆಲುವು ನಿಶ್ಚಿತ: ಯಡಿಯೂರಪ್ಪ

Update: 2019-05-04 20:21 IST

ಬೆಂಗಳೂರು, ಮೇ 4: ರಾಜ್ಯದಲ್ಲಿ ಕನಿಷ್ಠ 22 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವುದು ನಿಶ್ಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶನಿವಾರ ತಿರುಪತಿ ದೇವಾಲಯದಿಂದ ಹಿಂದಿರುಗಿದ ಬಳಿಕ ನಗರದ ಡಾಲರ್ಸ್‌ ಕಾಲನಿಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಾವು 22 ಸ್ಥಾನಗಳಲ್ಲಿ ಗೆಲ್ಲುವ ವಿಚಾರದಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಸಂಬಂಧಿಸಿದಂತೆ ಒಂದೊಂದು ಮಾಧ್ಯಮಗಳು ಒಂದೊಂದು ರೀತಿಯಲ್ಲಿ ಸಮೀಕ್ಷಾ ವರದಿಗಳನ್ನು ತೋರಿಸಲಾಗುತ್ತಿದೆ. ಆದರೆ, ನಾವು ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಂತು ನಿಶ್ಚಿತ ಎಂದು ಅವರು ಹೇಳಿದರು.

ಮೇ 23ರ ಬಳಿಕ ರಾಜಕೀಯ ದ್ರುವೀಕರಣವಾಗಲಿದೆ ಎಂದು ಕೇಳಿ ಬರುತ್ತಿರುವ ಮಾತುಗಳ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ವಲಯದಲ್ಲಿ ವಿಭಿನ್ನವಾದ ಹೇಳಿಕೆಗಳು ಕೇಳಿ ಬರುತ್ತಿವೆ. ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬಳಿಕ ಎಲ್ಲವೂ ತಿಳಿಯಲಿದೆ ಎಂದರು.

ಚಿಂಚೋಳಿ ಹಾಗೂ ಕುಂದಗೋಳ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ನಾಳೆಯಿಂದಲೇ ನಾನು ಚಿಂಚೋಳಿ ಹಾಗೂ ಕುಂದಗೋಳ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಳ್ಳುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.

ರಾಜ್ಯದ ಜನರ ಸಂಕಷ್ಟ ಮತ್ತು ರಾಜ್ಯ ಎದುರಿಸುತ್ತಿರುವ ಬರಗಾಲ ನೀಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಜೊತೆಗೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ತಿರುಪತಿಗೆ ಹೋಗಿ ಆಶೀರ್ವಾದ ಪಡೆದುಕೊಂಡು ಬಂದಿದ್ದೇನೆ ಎಂದು ಯಡಿಯೂರಪ್ಪ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News