ಆರ್‌ಸಿಬಿ ಗೆಲುವಿನ ವಿದಾಯ

Update: 2019-05-05 06:08 GMT

ಬೆಂಗಳೂರು, ಮೇ 4: ಶಿಮ್ರಾನ್ ಹೆಟ್ಮೆಯರ್ ಹಾಗೂ ಗುರುಕೀರತ್ ಸಿಂಗ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 4 ವಿಕೆಟ್‌ಗಳಿಂದ ಮಣಿಸಿದ ಆತಿಥೇಯ ಆರ್‌ಸಿಬಿ ಗೆಲುವಿನೊಂದಿಗೆ 12ನೇ ಆವೃತ್ತಿಯ ಐಪಿಎಲ್‌ಗೆ ವಿದಾಯ ಹೇಳಿದೆ.

ಗೆಲ್ಲಲು 176 ರನ್ ಗುರಿ ಪಡೆದ ಆರ್‌ಸಿಬಿ 19.2 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು. ಆರ್‌ಸಿಬಿ ಮೊದಲ ಓವರ್‌ನ 3ನೇ ಎಸೆತದಲ್ಲಿ ಪಾರ್ಥಿವ್ ಪಟೇಲ್ ವಿಕೆಟ್ ಕಳೆದುಕೊಂಡು ಅತ್ಯಂತ ಕಳಪೆ ಆರಂಭ ಪಡೆದಿತ್ತು. ನಾಯಕ ವಿರಾಟ್ ಕೊಹ್ಲಿ(16) ಹಾಗೂ ಎಬಿಡಿ ವಿಲಿಯರ್ಸ್(1) ಕೂಡ ಬೇಗನೇ ವಿಕೆಟ್ ಕೈಚೆಲ್ಲಿದರು. ಆಗ 4ನೇ ವಿಕೆಟ್‌ಗೆ 144 ರನ್ ಭರ್ಜರಿ ಜೊತೆಯಾಟ ನಡೆಸಿದ ಹೆಟ್ಮೆಯರ್(75 ರನ್, 47 ಎಸೆತ, 4 ಬೌಂಡರಿ, 6 ಸಿಕ್ಸರ್) ಹಾಗೂ ಸಿಂಗ್(65 ರನ್, 48 ಎಸೆತ, 8 ಬೌಂಡರಿ, 1 ಸಿಕ್ಸರ್) ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಉತ್ತಮ ರನ್ ರೇಟ್ ಹೊಂದಿರುವ ಹೈದರಾಬಾದ್ ಪ್ಲೇ-ಆಫ್ ಸ್ಥಾನ ಖಚಿತಪಡಿಸಲು ರವಿವಾರದ ಕೋಲ್ಕತಾ-ಮುಂಬೈ ಪಂದ್ಯದ ಫಲಿತಾಂಶದ ತನಕ ಕಾಯಬೇಕಾಗಿದೆ.

ಭುವನೇಶ್ವರ ಕುಮಾರ್(2-24) ಹಾಗೂ ಖಲೀಲ್ ಅಹ್ಮದ್(3-37)5 ವಿಕೆಟ್ ಹಂಚಿಕೊಂಡರು. ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್(ಔಟಾಗದೆ 70) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಗೆಲ್ಲಲೇಬೇಕಾದ ಐಪಿಎಲ್ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ಇನಿಂಗ್ಸ್ ಆರಂಭಿಸಿದ ವೃದ್ಧಿಮಾನ್ ಸಹಾ(20)ಹಾಗೂ ಗಪ್ಟಿಲ್(30) ಮೊದಲ ವಿಕೆಟ್‌ಗೆ 46 ರನ್ ಸೇರಿಸಿ ಸಾಧಾರಣ ಆರಂಭ ನೀಡಿದರು. ತಂಡದ ಮೊತ್ತ 60 ರನ್ ತಲುಪಿದಾಗ ಈ ಇಬ್ಬರೂ ಆರಂಭಿಕರು ಪೆವಿಲಿಯನ್ ಸೇರಿದರು. ಕಳೆದ ಪಂದ್ಯದಲ್ಲಿ ಮಿಂಚಿದ್ದ ಮನೀಷ್ ಪಾಂಡೆ(9)ಬೇಗನೇ ಔಟಾದರು.

ಸುಂದರ್ ಅವರು ಪಾಂಡೆ ಅವರನ್ನು ತವರು ಮೈದಾನದಲ್ಲಿ ಕಟ್ಟಿಹಾಕಿದರು. ಆಗ ತಂಡಕ್ಕೆ ಆಸರೆಯಾಗಿ ನಿಂತ ವಿಲಿಯಮ್ಸನ್(ಔಟಾಗದೆ 70, 43 ಎಸೆತ, 5 ಬೌಂಡರಿ, 4 ಸಿಕ್ಸರ್) ತಂಡ ಉತ್ತಮ ಮೊತ್ತ ಗಳಿಸಲು ನೆರವಾದರು. ಆಲ್‌ರೌಂಡರ್ ವಿಜಯಶಂಕರ್ 27 ರನ್ ಗಳಿಸಿ ಸುಂದರ್‌ಗೆ 3ನೇ ಬಲಿಯಾದರು. ಆರ್‌ಸಿಬಿ ಪರ ಸುಂದರ್(3-24) ಹಾಗೂ ನಿತಿನ್ ಸೈನಿ(2-39) ಐದು ವಿಕೆಟ್‌ಗಳನ್ನು ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News