ಯುಎಇ: 'ಅದೃಷ್ಟದ ಕರೆ' ಸ್ವೀಕರಿಸದ ಜಾಕ್‌ಪಾಟ್ ವಿಜೇತ ಭಾರತೀಯ!

Update: 2019-05-05 04:07 GMT

ದುಬೈ, ಮೇ 5: ಭಾರತೀಯ ಮೂಲದ ವ್ಯಕ್ತಿಯೊಬ್ಬರಿಗೆ ಅಬುಧಾಬಿಯ ರ್ಯಾಫಲ್ ಡ್ರಾದಲ್ಲಿ 15 ದಶಲಕ್ಷ ದಿರ್ಹಮ್ (40 ಲಕ್ಷ ಡಾಲರ್) ಬಹುಮಾನ ಬಂದಿದ್ದು, ಲಾಟರಿ ಸಂಸ್ಥೆಯ ಅಧಿಕಾರಿಗಳು ಈ ವಿಚಾರವನ್ನು ತಿಳಿಸಲು ಪದೇ ಪದೇ ಕರೆ ಮಾಡಿದರೂ ಈತ ಸಂಪರ್ಕಕ್ಕೆ ಸಿಗುತ್ತಿಲ್ಲ.

ಅಬುಧಾಬಿಯ ಡ್ಯೂಟಿಫ್ರೀ ಬಿಗ್ ಟಿಕೆಟ್ ಸೀರಿಸ್ ಡ್ರಾದಲ್ಲಿ ದೊಡ್ಡ ಮೊತ್ತದ ಬಹುಮಾನ ಗೆದ್ದ ಶೋಜಿತ್ ಕೆ.ಎಸ್., ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅದೃಷ್ಟಶಾಲಿ ಭಾರತೀಯರ ಪಟ್ಟಿಗೆ ಹೊಸ ಸೇರ್ಪಡೆ. ಡ್ರಾವನ್ನು ಯೂಟ್ಯೂಬ್‌ನಲ್ಲಿ ನೇರಪ್ರಸಾರ ಮಾಡಲಾಗಿದೆ.

ಶೋಜಿತ್ ಈ ಅದೃಷ್ಟದ ಟಿಕೆಟನ್ನು ಎಪ್ರಿಲ್ 1ರಂದು ಆನ್‌ಲೈನ್ ಮೂಲಕ ಖರೀದಿಸಿದ್ದರು. ಆದರೆ ಇದುವರೆಗೂ ತಾನು ಕೋಟ್ಯಧೀಶ ಎನ್ನುವ ವಿಚಾರ ಅವರಿಗೆ ತಿಳಿದಿಲ್ಲ. "ನಾವು ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಲೇ ಇದ್ದೇವೆ. ಸಂಪರ್ಕಕ್ಕೆ ಸಿಗದಿದ್ದರೆ, ಶಾರ್ಜಾದಲ್ಲಿ ಅವರು ಎಲ್ಲಿ ವಾಸವಿದ್ದಾರೆ ಎನ್ನುವುದು ತಿಳಿದಿದೆ. ಅವರ ಮನೆಗೆ ತೆರಳುತ್ತೇವೆ" ಎಂದು ಪ್ರತಿ ತಿಂಗಳು ಅಬುಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಗ್ ಟಿಕೆಟ್ ರ್ಯಾಫಲ್ ನಡೆಸುತ್ತಿರುವ ರಿಚರ್ಡ್ "ಖಲೀಜ್ ಟೈಮ್ಸ್"ಗೆ ತಿಳಿಸಿದ್ದಾರೆ.

ಭಾರತೀಯ ಮೂಲದ ಮಂಗೇಶ್ ಮೈಂಡೆ ಇದೇ ಡ್ರಾದಲ್ಲಿ ಬಿಎಂಡಬ್ಲ್ಯು 220ಐ ಕಾರು ಗೆದ್ದಿದ್ದಾರೆ. ಇತರ ಎಂಟು ಮಂದಿ ಭಾರತೀಯರು ಹಾಗೂ ಒಬ್ಬ ಪಾಕಿಸ್ತಾನಿ ಒಂಬತ್ತು ಸಮಾಧಾನಕರ ಬಹುಮಾನ ಪಡೆದಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ಕೇರಳದ ಚಾಲಕ ಜಾನ್ ವರ್ಗೀಸ್ ಎಂಬುವವರು 12 ದಶಲಕ್ಷ ದಿರ್ಹಮ್ ಬಹುಮಾನ ಗೆದ್ದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News