ನಿರಪರಾಧಿಗಳಿಗೆ ಪರಿಹಾರ ಒದಗಿಸುವ ಕಾನೂನು ಜಾರಿಗೆ ಬರಲಿ

Update: 2019-05-07 18:31 GMT

ನಮ್ಮದು ಪ್ರಜಾಪ್ರಭುತ್ವ ದೇಶ. ಈ ದೇಶದಲ್ಲಿ ಎಲ್ಲರನ್ನೂ ಸಮಾನರನ್ನಾಗಿ ಕಾಣುವ, ಎಲ್ಲರಿಗೂ ಸಮಾನ ಅವಕಾಶ ಒದಗಿಸುವ ವ್ಯವಸ್ಥೆ ಇದೆ. 18 ವಯಸ್ಸಿನ ನಂತರ ಯಾವುದೇ ಜಾತಿ, ಧರ್ಮ, ಲಿಂಗ ತಾರತಮ್ಯವಿಲ್ಲದೆ ಎಲ್ಲರೂ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬಹುದು. ಎಲ್ಲರೂ ಸೇರಿ ಬಹುಮತದಿಂದ ಆಯ್ಕೆ ಮಾಡಿದ ವ್ಯಕ್ತಿಗಳು ಎಲ್ಲರ ಪರವಾಗಿ ಸಂಸತ್ತಿನಲ್ಲಿ ಅಥವಾ ವಿಧಾನ ಮಂಡಲದಲ್ಲಿ ಎಲ್ಲರ ಒಳಿತಿಗಾಗಿ ಕಾನೂನು ರಚನೆ ಮಾಡುತ್ತಾರೆೆ. ದೇಶದ ಮತ್ತು ರಾಜ್ಯದ ಆಡಳಿತವನ್ನು ನಡೆಸುತ್ತಾರೆ. ಹೀಗೆಯೇ ದೇಶದಲ್ಲಿ ಏನಾದರೂ ಅನ್ಯಾಯ ನಡೆದರೆ ಅಥವಾ ಕಾನೂನು ಮತ್ತು ಆಡಳಿತ ವೈಫಲ್ಯ ಎದ್ದು ಕಂಡರೆ, ಸಾಮಾನ್ಯವಾಗಿ ಜನ ಸಾಮಾನ್ಯರು ದೂರಬೇಕಾದುದು ಜನ ಪ್ರತಿನಿಧಿಗಳನ್ನೇ ಅಲ್ಲವೇ? ಅಗಸ್ಟ್ 11, 2017ರ ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯಲ್ಲಿ, ಕಾನೂನು ವೈಫಲ್ಯದಿಂದಾಗಿ ಮರ್ದನಕ್ಕೊಳಪಟ್ಟ ಕೆಲವು ಭಾರತೀಯರ ಹೆಸರುಗಳ ಪಟ್ಟಿಯನ್ನು ನಾವು ಈ ರೀತಿ ಕಾಣಬಹುದು.


ಹೆಸರು: ನಾಸಿರುದ್ದೀನ್ ಅಹ್ಮದ್ ಜೈಲುವಾಸ; 23 ವರ್ಷ ಬಂಧನ: 1994, ಬಿಡುಗಡೆ: 2016 ವಿದ್ಯಾರ್ಥಿ; 2ನೇ ವರ್ಷದ ಫಾರ್ಮಸಿ ಆರೋಪ: ಬಾಬರಿ ಮಸೀದಿ ಕೆಡವಿದ ಸಂದರ್ಭ ರೈಲಿನಲ್ಲಿ ಸ್ಫೋಟ ನಡೆಸಿರುವ ಕುರಿತು


ಹೆಸರು; ಗುಲ್ಝಾರ್ ಅಹ್ಮದ್ ಬನಿ ಜೈಲುವಾಸ: 16 ವರ್ಷ
ಬಂಧನ: 2001 ಬಿಡುಗಡೆ: 2017


 ಆರೋಪ: ಸಾಬರ್ಮತಿ ಎಕ್ಸ್‌ಪ್ರೆಸ್ ಸ್ಫೋಟ ಕೇಸ್ ಹೆಸರು: ಝಹೀರುದ್ದೀನ್ ಅಹ್ಮದ್
ಜೈಲುವಾಸ: 23ವರ್ಷ
ಬಂಧನ: 1994 ಬಿಡುಗಡೆ: 2016

ಹೆಸರು; ಹಬೀಬ್ ಮತ್ತು ಹನೀಫ್ ಜೈಲುವಾಸ: 14ವರ್ಷ ಬಂಧನ: 2003 ಬಿಡುಗಡೆ: 2017.... ಹೇಗೆ ನೂರಾರು ಮುಗ್ಧ ಭಾರತೀಯ ನಾಗರಿಕರು ಎರಡೆರಡು ದಶಕಗಳಷ್ಟು ಕಾಲ ತಾವು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದ್ದಾರೆ. ಇಷ್ಟು ದೀರ್ಘ ಕಾಲ ಅವರು ಶಿಕ್ಷೆ ಅನುಭವಿಸಲು ಕಾರಣವಾದರೂ ಏನು ? ಎಂದು ಕೇಳುವವರು ನೂರಾರು ಜನರಿದ್ದಾರೆ.
  ನಮ್ಮ ದೇಶದಲ್ಲಿ ಎಲ್ಲಾದರೂ ಸ್ಫೋಟಗೊಂಡರೆ, ಇಲ್ಲಿನ ರಕ್ಷಣಾ ಏಜೆನ್ಸಿಗಳು ಆದಷ್ಟು ಬೇಗ ಅಪರಾಧಿಗಳನ್ನು ಬಂಧಿಸುವ ಭರದಲ್ಲಿ, ಹಲವಾರು ಅಮಾಯಕರನ್ನು ಆರೋಪಿಗಳೆಂದು ಬಂಧಿಸಿ ಮಾಧ್ಯಮಗಳ ಮುಂದಿಡುತ್ತದೆ. ಮಾಧ್ಯಮಗಳು ಆತ ಆರೋಪಿಯೆಂದಾಗ ಆತನನ್ನು ಆರೋಪಿಯೆಂತಲ್ಲ ಬದಲಾಗಿ ಒಬ್ಬ ಪಕ್ಕಾ ಕ್ರಿಮಿನಲ್, ಅಂದರೆ ಆತನ ಮೇಲಿರುವ ಆರೋಪವು ಸಾಬೀತಾಗಿ ಬಿಟ್ಟಿದೆ ಎಂಬಂತೆ ಇಲ್ಲ ಸಲ್ಲದ ಕಥೆಗಳನ್ನು ಕಟ್ಟಿ, ಆ ಕಥೆಗಳನ್ನು ವರ್ಣರಂಜಿತವಾಗಿ ವಿವರಿಸುತ್ತವೆೆ. ಇದನ್ನು ನೋಡಿದ ದೇಶದ ಯಾವನೇ ವ್ಯಕ್ತಿಗೂ, ಆತ ಒಬ್ಬ ಆರೋಪಿಯಲ್ಲ ಬದಲಾಗಿ ಆತನೇ ಅಪರಾಧಿ ಎಂದು ಕಾಣ ತೊಡಗುತ್ತಾನೆ. ಇನ್ನು ಭದ್ರತಾ ಏಜನ್ಸಿಗಳು ಆತನಿಗೆ ಆ ಸಂಘಟನೆಯೊಂದಿಗೆ ನಂಟಿದೆ, ಈ ಸಂಘಟನೆಯೊಂದಿಗೆ ಸಂಬಂಧವಿದೆ ಎಂದರೆ ಸಾಕು, ಜನರು ಮತ್ತೆ ಆ ಕೇಸ್‌ನಲ್ಲಿ ಏನಾಯಿತು? ಎಂದು ತಿರುಗಿ ನೋಡುವುದಿಲ್ಲ. ಈ ರೀತಿ ಅಪರಾಧಿಯಾಗಿ, ಬಂಧಿತರಾಗಿ ಎಷ್ಟೋ ವರ್ಷಗಳವರೆಗೆ ಮಾನವಕುಲಕ್ಕೆ ಕಳಂಕ ಎಂದು ಸಮಾಜದಲ್ಲಿ ಗುರುತಿಸಲ್ಪಟ್ಟು, ಆರೋಪಿ ಮತ್ತು ಅವರ ಮನೆಯವರು ಆರ್ಥಿಕ ಸಂಕಷ್ಟ ಮತ್ತು ಸಾಮಾಜಿಕ ಬಹಿಷ್ಕ್ಕಾರಕ್ಕೆ ಒಳಗಾಗಿ, ಯಾತನಾಮಯ ಬದುಕನ್ನು ಅನುಭವಿಸುತ್ತಾರೆ. ಈ ಆರೋಪಿಗಳಿಗಾದ ಮಾನಹಾನಿ, ಅವರು ಕಳೆದುಕೊಂಡ ಉದ್ಯೋಗ, ಶಿಕ್ಷಣ ಮತ್ತು ಸಮಾಜದಲ್ಲಿ ಅವರು ಅನುಭವಿಸಿದ ನೋವಿಗೆ ಪರಿಹಾರ ನೀಡುವವರು ಯಾರು ? ಅವರ ಕುಟುಂಬವನ್ನು ನೋಡುವವರಾರು? ಅವರ ಜೀವಕ್ಕೂ, ಮನಸ್ಸಿಗೂ ಬೆಲೆ ಇಲ್ಲವೇ ? ಈಗಾಗಲೇ ಹತ್ತಿಪ್ಪತ್ತು ವರ್ಷ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿರುವವರಿಗೆ ಪರಿಹಾರ ನೀಡದಿರುವುದು ಅವರಿಗಾಗುವ ಘೋರ ಅನ್ಯಾಯವಲ್ಲವೇ ?
 

  ಮುಫ್ತಿ ಅಬ್ದುಲ್ ಖಯ್ಯೂಮ್ ಎನ್ನುವ ಭಾರತೀಯ ನಾಗರಿಕ, ಸುಪ್ರೀಮ್ ಕೋರ್ಟ್‌ಗೆ ಹೋಗಿ, ತನ್ನನ್ನು ದೇಶದ ರಕ್ಷಣಾ ಏಜೆನ್ಸಿಗಳು ‘ಅಕ್ಷರಧಾಮ ಟೆಂಪಲ್’ ಸ್ಫೋಟದ ಆರೋಪಿಯೆಂದು ಹೇಳಿ ಸುಮಾರು 11 ವರ್ಷಗಳ ಕಾಲ ಜೈಲಿನಲ್ಲಿಟ್ಟು, ವಿಚಾರಣೆ ಮುಗಿದ ನಂತರ, ನಿರಪರಾಧಿ ಎಂದು ಬಿಡುಗಡೆಗೊಳಿಸಲಾಗಿದೆ. ಇದರಿಂದಾಗಿ ತಾನು ಬಹಳಷ್ಟು ತೊಂದರೆ ಅನುಭವಿಸಬೇಕಾಗಿ ಬಂದಿದೆ, ತನ್ನ ಸಾಮಾಜಿಕ ಜೀವನವೇ ಹಾಳಾಗಿಬಿಟ್ಟಿದೆ, ದಯವಿಟ್ಟು ತನಗೆ ಸೂಕ್ತ ಪರಿಹಾರ ಕೊಡಬೇಕೆಂದು ವಿನಂತಿಸಿದಾಗ, ಸುಪ್ರೀಂ ಕೋರ್ಟ್‌ನ ನ್ಯಾಯ ಮೂರ್ತಿಗಳು, ‘‘ನಿನಗೆ ಪರಿಹಾರ ಕೊಡಲು ನಮ್ಮ ಬಳಿ ಯಾವುದೇ ಕಾನೂನಿಲ್ಲ’’ ಎಂದು ಆತನ ಪುನರ್ವಸತಿಗೆ ಯಾವ ಸಹಾಯವನ್ನೂ ನೀಡಲಿಲ್ಲ. ಕೇವಲ ಇದೊಂದು ಉದಾಹರಣೆ ಮಾತ್ರವಲ್ಲ, ಭಯೋತ್ಪಾದನೆಯ ಕೇಸಿನಲ್ಲಿ ಆರೋಪಿಯೆಂದು ಸೆರೆವಾಸ ಅನುಭವಿಸಿ, ಕೊನೆಗೆ ನಿರಪರಾಧಿ ಎಂದು ಘೋಷಿತರಾದವರಾರಿಗೂ ಕೋರ್ಟ್‌ನಿಂದ, ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಯಾವುದೇ ಸಹಾಯ ಸಿಗಲಿಲ್ಲ. ಏಕೆಂದರೆ ಅದಕ್ಕಾಗಿ ಯಾವುದೇ ಕಾನೂನುಗಳಿಲ್ಲ. ಹೀಗಾಗಿ, ಇಂತಹ ಘೋರ ಅನ್ಯಾಯಕ್ಕೆ ಬಲಿಯಾದ ಜನರಿಗೆ ಸೂಕ್ತ ಪರಿಹಾರವೊದಗಿಸುವ ಕಾನೂನನ್ನು ಇನ್ನಾದರೂ ಜಾರಿಗೆ ತರಬೇಕಾಗಿದೆ. ಇಲ್ಲವಾದಲ್ಲಿ ದೇಶದ ಪ್ರಜಾಪ್ರಭುತ್ವದ ಮೇಲೆ ಇದೊಂದು ಕಪ್ಪುಚುಕ್ಕೆಯಾಗಿ ಪರಿಣಾಮ ಬೀರಲಿದೆ ಮತ್ತು ಇದು ದೇಶದ ಕಾನೂನು ವ್ಯವಸ್ಥೆಯಲ್ಲಿ ಒಂದು ರೀತಿಯ ಅರಾಜಕತೆಯನ್ನು ಸೃಷ್ಟಿಸುತ್ತದೆಯೆನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

Writer - ತಲ್ಹ ಇಸ್ಮಾಯಿಲ್ ಬೆಂಗ್ರೆ

contributor

Editor - ತಲ್ಹ ಇಸ್ಮಾಯಿಲ್ ಬೆಂಗ್ರೆ

contributor

Similar News