ವಿಶ್ವಕಪ್: ಭಾರತದ ಮೀಸಲು ಆಟಗಾರನಾಗಿ ಇಶಾಂತ್

Update: 2019-05-07 18:53 GMT

ಮುಂಬೈ, ಮೇ 7: ಭಾರತದ ಲಂಬೂ ವೇಗಿ ಇಶಾಂತ್ ಶರ್ಮಾ ಈ ತನಕ ವಿಶ್ವಕಪ್‌ನಲ್ಲಿ ಆಡಿಲ್ಲ. ಮೇ 30 ರಿಂದ ಇಂಗ್ಲೆಂಡ್ ಹಾಗೂ ವೇಲ್ಸ್‌ನಲ್ಲಿ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್‌ಗೆ ಭಾರತೀಯ ತಂಡಕ್ಕೆ ಮೀಸಲು ಆಟಗಾರನಾಗಿ ಆಯ್ಕೆಯಾಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.

ರಿಷಭ್ ಪಂತ್, ಅಂಬಟಿ ರಾಯುಡು ಹಾಗೂ ನವದೀಪ್ ಸೈನಿ ಜೊತೆಗೆ ಇಶಾಂತ್ ಕೂಡ ವಿಶ್ವಕಪ್‌ಗೆ ಭಾರತ ಆಯ್ಕೆ ಮಾಡಿರುವ ನಾಲ್ವರು ಮೀಸಲು ಆಟಗಾರರ ಗುಂಪಿನಲ್ಲಿ ಸೇರ್ಪಡೆಯಾಗಿದ್ದಾರೆ.

 ಸೈನಿ ಮೀಸಲು ವೇಗದ ಬೌಲರ್ ಆಗಿ ಮೊದಲ ಆಯ್ಕೆಯಾದರೆ, ಇಶಾಂತ್ ಎರಡನೇ ಆಯ್ಕೆಯಾಗಿದ್ದಾರೆ. ಇಶಾಂತ್‌ಗೆ ಇಂಗ್ಲೆಂಡ್‌ನ ವಾತಾವರಣದಲ್ಲಿ ಆಡಿದ ಅನುಭವವಿದೆ. ಅವರು ನಿಖರವಾಗಿ ಬೌಲಿಂಗ್ ಮಾಡಬಲ್ಲರು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಈಗ ನಡೆಯುತ್ತಿರುವ 12ನೇ ಆವೃತ್ತಿಯ ಐಪಿಎಲ್ ಟಿ-20 ಟೂರ್ನಿಯಲ್ಲಿ ಇಶಾಂತ್ ಡೆಲ್ಲಿ ಕ್ಯಾಪಿಟಲ್ಸ್ ಪರ 7.65ರ ಸಾಧಾರಣ ಇಕಾನಮಿ ರೇಟ್‌ನಲ್ಲಿ 10 ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನು ಉರುಳಿಸಿದ್ದಾರೆ.

ದಿಲ್ಲಿಯ ವೇಗದ ಬೌಲರ್ ಇಶಾಂತ್ 80 ಏಕದಿನ ಪಂದ್ಯಗಳಲ್ಲಿ 115 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರಭಾವಿ ಪ್ರದರ್ಶನ ನೀಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News