‘ಬರ’ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ: ಸಚಿವ ಕೃಷ್ಣಭೈರೇಗೌಡ

Update: 2019-05-09 12:44 GMT

ಬೆಂಗಳೂರು, ಮೇ 9: ರಾಜ್ಯದ ಬರ ಪರಿಹಾರಕ್ಕೆ ಕೇಂದ್ರದಿಂದ ಅನುದಾನ ಬಿಡುಗಡೆಯಲ್ಲಿ ಅನ್ಯಾಯ ಮಾಡಲಾಗಿದೆ. ಆದರೆ, ವಿಪಕ್ಷ ಬಿಜೆಪಿ ಕೇಂದ್ರದಲ್ಲಿ ತಮ್ಮ ಪ್ರಭಾವ ಬೀರಿ ಅನುದಾನ ಕೊಡಿಸುವ ಬದಲಿಗೆ ‘ಬರ’ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಟೀಕಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಮುಂಗಾರು ಹಂಗಾಮಿನಲ್ಲಿನ ನಷ್ಟಕ್ಕೆ ಕರ್ನಾಟಕಕ್ಕೆ 949 ಕೋಟಿ ರೂ.ಮಂಜೂರು ಮಾಡಿದೆ. ಆದರೆ, ಮಹಾರಾಷ್ಟ್ರಕ್ಕೆ 4,700 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಅಂಕಿ-ಸಂಖ್ಯೆಗಳನ್ನು ನೀಡಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ಹಿಂಗಾರು ಹಂಗಾಮಿನಲ್ಲಿ ಒಟ್ಟಾರೆ 11ಸಾವಿರ ಕೋಟಿ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದ್ದು, ಮಾರ್ಗಸೂಚಿಯನ್ವಯ 2,064 ಕೋಟಿ ರೂ.ನೆರವು ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರೂ, ಈವರೆಗೂ ಪ್ರತಿಕ್ರಿಯೆಯನ್ನೇ ನೀಡಿಲ್ಲ. ಈ ಬಗ್ಗೆ ಸಂಪುಟ ಸಭೆ ತೀವ್ರ ಬೇಸರ ವ್ಯಕ್ತವಾಯಿತು ಎಂದು ತಿಳಿಸಿದರು.

ಕೂಲಿ ಹಣವೂ ಬಾಕಿ: ಉದ್ಯೋಗ ಖಾತ್ರಿ ಯೋಜನೆಯಡಿ ಕೇಂದ್ರದಿಂದ ಕೂಲಿ ಕಾರ್ಮಿಕರಿಗೆ ನೀಡಬೇಕಿದ್ದ ಕೂಲಿ ಹಣ 1697ಕೋಟಿ ರೂ.ಬಾಕಿ ಉಳಿದಿದ್ದು, ಇದುವರೆಗೂ ಬಿಡುಗಡೆ ಮಾಡಿಲ್ಲ. 15 ದಿನದ ಒಳಗಾಗಿ ಹಣ ಪಾವತಿಸಬೇಕೆಂಬ ಕಾಯ್ದೆ ಇದ್ದರೂ, ಮೂರ್ನಾಲ್ಕು ತಿಂಗಳಿನಿಂದ ಹಣ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

ಕೂಲಿ ಕಾರ್ಮಿಕರಿಗೆ ವಿಳಂಬ ಆಗಬಾರದೆಂಬ ಉದ್ದೇಶದಿಂದ ರಾಜ್ಯ ಸರಕಾರವೇ ಕೂಲಿ ಹಣವನ್ನು ಬಿಡುಗಡೆ ಮಾಡಿದೆ. ಕೇಂದ್ರಕ್ಕೆ ನಿಯೋಗ ಕೊಂಡೊಯ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಉದ್ಯೋಗ ಖಾತ್ರಿ ಯೋಜನೆ ಬಡವರಿಗೆ ಅನುಕೂಲ ಆಗುತ್ತದೆಂಬ ತಾತ್ಸಾರ ಮನೋಭಾವ ಕೇಂದ್ರ ಸರಕಾರಕ್ಕೆ ಇದ್ದಂತಿದೆ ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News