ಬೈಕ್ ಕದಿಯುತ್ತಿದ್ದ ಪದವೀಧರರಿಬ್ಬರ ಬಂಧನ

Update: 2019-05-09 16:22 GMT

ಬೆಂಗಳೂರು, ಮೇ 9: ದುಬಾರಿ ಮೌಲ್ಯದ ಬೈಕ್‌ಗಳನ್ನು ಕದ್ದು ಮಾರಿದ ಹಣದಲ್ಲಿ ಡ್ರಗ್ಸ್ ಹಾಗೂ ಮದ್ಯ ಖರೀದಿಸಿ ನಶೆಯಲ್ಲಿ ತೇಲಾಡುತ್ತಿದ್ದ ಬಿ.ಕಾಂ. ಪದವೀಧರರಿಬ್ಬರನ್ನು ಬಂಧಿಸಲಾಗಿದೆ.

ತಿಲಕ್‌ನಗರದ ಮುಹಮದ್ ನಿಹಾಲ್(26) ಹಾಗೂ ಜಯನಗರದ ಮುಹಮದ್ ಇಸಾಕ್(31) ಎಂಬುವವರು ಬುಲೆಟ್, ಅವೆಂಜರ್ ಸೇರಿದಂತೆ ದುಬಾರಿ ಮೌಲ್ಯದ ಬೈಕ್‌ಗಳನ್ನು ಕಳವು ಮಾಡಿ, 10 ಸಾವಿರ ರೂ.ಕ್ಕೆ ಒಂದರಂತೆ ಮಾರಾಟ ಮಾಡುತ್ತಿದ್ದರು. ಆ ಹಣದಲ್ಲಿಯೇ ಡ್ರಗ್ಸ್ ಹಾಗೂ ಮದ್ಯ ಖರೀದಿಸಿ ನಶೆಯಲ್ಲಿ ತೇಲಾಡುತ್ತಿದ್ದರು. ಇದೀಗ ಸಿಸಿಟಿವಿಯ ಸುಳಿವಿನ ಆಧಾರದ ಮೇಲೆ ಬಂಧಿಸಲಾಗಿದೆ.

ಬಂಧಿತ ಆರೋಪಿಗಳು ತಿಲಕ್‌ನಗರ, ಕಮರ್ಷಿಯಲ್ ಸ್ಟ್ರೀಟ್, ವಿಲ್ಸನ್ ಗಾರ್ಡನ್, ಹುಳಿಮಾವು, ಕಬ್ಬನ್‌ಪಾರ್ಕ್, ಬ್ಯಾಟರಾಯನಪುರ, ಅಶೋಕ ನಗರ ಹಾಗೂ ಸುದ್ದಗುಂಟೆಪಾಳ್ಯ ಠಾಣೆಗಳ ವ್ಯಾಪ್ತಿಯಲ್ಲಿ ಬೈಕ್‌ಗಳನ್ನು ಕಳುವು ಮಾಡಿದ್ದರು. ಇದೀಗ ಅಷ್ಟು ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಹೇಳಿದ್ದಾರೆ.

ಭದ್ರಾವತಿಯ ಮೂಲದ ನಿಹಾಲ್ ಎಂಬುವವರು ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು, ಇಲ್ಲಿನ ಕಾಂಗ್ರೆಸ್ ನಾಯಕರೊಬ್ಬರ ಬಳಿ ಕಾರು ಚಾಲಕನಾಗಿ ಸೇರಿಕೊಂಡಿದ್ದ. ಇಸಾಕ್ ಇಲ್ಲಿಯೇ ಕ್ಯಾಬ್ ಓಡಿಸುತ್ತಿದ್ದ. ಇಬ್ಬರೂ ಮಾದಕ ವ್ಯಸನಿಗಳಾಗಿದ್ದು, ಅದರ ಚಟಕ್ಕೆ ಹಣ ಬೇಕಾದ ಸಂದರ್ಭದಲ್ಲಿ ಬೈಕ್‌ಗಳನ್ನು ಕದಿಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಿಕ್ಕಿದ್ದು ಹೇಗೆ: ಕೆಲವು ದಿನಗಳ ಹಿಂದೆ ಜಯನಗರದ 9 ನೆ ಬ್ಲಾಕ್‌ನಲ್ಲಿ ಒಂದು ಪಲ್ಸರ್ ಬೈಕ್ ಕದ್ದಿದ್ದರು. ಈ ಕುರಿತು ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಬೈಕ್ ಮಾಲಕ ದೂರು ದಾಖಲಿಸಿದ್ದರು. ಈ ದೂರಿನನ್ವಯ ನೋಂದಣಿ ಸಂಖ್ಯೆಯನ್ನಾಧರಿಸಿ ಪೊಲೀಸರು ತನಿಖೆಗೆ ಕೈಗೆತ್ತಿಕೊಂಡಿದ್ದರು. 3-4 ದಿನಗಳ ಬಳಿಕ ಆರೋಪಿಗಳು ಅದೇ ಬೈಕ್‌ನಲ್ಲಿ ರಿಚ್ಮಂಡ್ ಟೌನ್‌ಗೆ ಬಂದು, ಇಲ್ಲಿಯೇ ಮತ್ತೊಂದು ಬೈಕ್ ಕದ್ದಿದ್ದಾರೆ.

ಆವೆಂಜರ್ ಬೈಕ್ ಕಳುವಾದ ಕುರಿತು ಖಾಸಗಿ ಸುದ್ದಿವಾಹಿನಿಯೊಂದು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಸುದ್ದಿ ಪ್ರಸಾರ ಮಾಡಲಾಗಿತ್ತು. ಕಳ್ಳರು ಕದ್ದು ತಂದಿದ್ದ ಪಲ್ಸರ್ ಬೈಕ್ ಹಾಗೂ ಅದರ ನೋಂದಣಿ ಸಂಖ್ಯೆಯನ್ನೂ ತೋರಿಸಿದ್ದರು. ಇದರಿಂದ ಎಚ್ಚೆತ್ತುಕೊಂಡ ಪೊಲೀಸರು ಆರೋಪಿಗಳ ಚಹರೆ ಆಧರಿಸಿ ಇಬ್ಬರನ್ನು ಬಂಧಿಸಿ, ವಶಕ್ಕೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News