ನಮ್ಮ ನೈಜ ಪರಂಪರೆ ಯಾವುದು?

Update: 2019-05-09 18:26 GMT

ಈ ದೇಶದ ಎಲ್ಲಾ ಕ್ರಾಂತಿಕಾರರು ವ್ಯಕ್ತಪಡಿಸಿದ ಸಮಾನತೆ, ಸಹಬಾಳ್ವೆ, ದೇಶದ ಏಕತೆ ಮುಂತಾದವುಗಳನ್ನು ಸಂವಿಧಾನವು ಶಾಸನ ರೂಪದಲ್ಲಿ ಅನುಷ್ಠಾನಗೊಳಿಸುತ್ತಿದೆ. ಇದನ್ನೇ ಈ ದೇಶದ ಜನರು ಪರಂಪರೆಯನ್ನಾಗಿ ಒಪ್ಪಿಕೊಂಡಿದ್ದಾರೆ. ಆದರೆ ಎಸ್. ಎಲ್. ಭೈರಪ್ಪನವರು ನಮ್ಮ ಸಂವಿಧಾನದಲ್ಲಿ ಪರಂಪರೆಯಿಲ್ಲ ಎನ್ನುತ್ತಿದ್ದಾರೆ. ಹಾಗಾದರೆ ಅವರು ಬಯಸುತ್ತಿರುವ ಪರಂಪರೆ ಯಾವುದು?



ನಮ್ಮ ದೇಶವು ಹಲವು ಸಂಸ್ಕೃತಿ, ಭಾಷೆ ಮತ್ತು ಧರ್ಮಗಳಿಂದ ತೆರೆದುಕೊಂಡಿದೆ. ಪ್ರತಿಯೊಂದೂ ತನ್ನದೇ ಆದ ಪರಂಪರೆಗಳನ್ನು ಹೇಳುತ್ತವೆ. ಕೆಲವು ಜನಮುಖಿ ಪರಂಪರೆಗಳಿದ್ದರೆ, ಜನವಿರೋಧಿ ಪರಂಪರೆಗಳೂ ಕೂಡ ಇವೆ. ಇದೀಗ ಕಾದಂಬರಿಕಾರ ಎಸ್.ಎಲ್. ಭೈರಪ್ಪನವರು ‘‘ಸಂವಿಧಾನದಲ್ಲಿ ನಮ್ಮ ಪರಂಪರೆಯಿಲ್ಲ. ಹೆಣ್ಣನ್ನು ಮುಟ್ಟುವುದಕ್ಕೂ ರಿಜಿಸ್ಟರ್‌ನಲ್ಲಿ ಸಹಿ ಮಾಡಿಕೊಂಡು, ಒಪ್ಪಿಗೆ ಪಡೆದು ಮುಟ್ಟುವ ಸಂದರ್ಭ ಬಂದರೂ ಬರಬಹುದು’’ ಎಂದು ನೀಡಿದ್ದ ಹೇಳಿಕೆ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.

ಧರ್ಮ ಪರಂಪರೆಗೂ, ಭಾರತದ ಪರಂಪರೆಗೂ ಸಾಕಷ್ಟು ಅಂತರವಿದೆ. ಧರ್ಮ ಮತ್ತು ಧರ್ಮಶಾಸ್ತ್ರಗಳು ಸೀಮಿತ ಚೌಕಟ್ಟಿನಲ್ಲಷ್ಟೆ ಚಾಲ್ತಿಯಲ್ಲಿವೆ. ಅದಲ್ಲದೆ ಅವುಗಳು ಕೇವಲ ಒಂದು ವರ್ಗದ ಹಿತಾಸಕ್ತಿಗಷ್ಟೆ ಬಳಕೆಯಾಗುತ್ತಿವೆ. ಆದರೆ ಭಾರತದ ಪರಂಪರೆ ದೇಶದ ಸಾರ್ವಭೌಮತ್ವದ ಬೆಳವಣಿಗೆ ಮತ್ತು ‘‘ಸರ್ವಜನ ಹಿತಾಯ ಸರ್ವಜನ ಸುಖಾಯ’’ ಎಂಬ ಮೂಲಮಂತ್ರವನ್ನು ಒಳಗೊಂಡಿದೆ. ಆದರೆ ಭೈರಪ್ಪನವರು ಧರ್ಮ ಪರಂಪರೆಯನ್ನೆ ಭಾರತದ ಪರಂಪರೆ ಎಂದು ಬಿಂಬಿಸಲು ಹೊರಟಿದ್ದಾರೆ.

ಲೋಕಾಯತರು, ನಾಥಪಂಥೀಯರು, ಬುದ್ಧ ಮಾಡಿದ ಜನಕ್ರಾಂತಿ, ಭಕ್ತಿಚಳವಳಿಯ ಸಹಬಾಳ್ವೆ, ವಚನ ಚಳವಳಿಯ ಸಂಸತ್ತು ಮತ್ತು ಪ್ರಜಾಪ್ರಭುತ್ವ ಮಾದರಿ ನಿಲುವುಗಳೆಲ್ಲವೂ ಭಾರತದ ಪರಂಪರೆಗಳೇ ಆಗಿವೆ. ಅಲ್ಲಿನ ಆಶಯಗಳೆಲ್ಲವೂ ನಮ್ಮ ಸಂವಿಧಾನದಲ್ಲಿ ಶಾಸನಗಳಾಗಿವೆ. ಈ ದೇಶದ ಎಲ್ಲಾ ಕ್ರಾಂತಿಕಾರರು ವ್ಯಕ್ತಪಡಿಸಿದ ಸಮಾನತೆ, ಸಹಬಾಳ್ವೆ, ದೇಶದ ಏಕತೆ ಮುಂತಾದವುಗಳನ್ನು ಸಂವಿಧಾನವು ಶಾಸನ ರೂಪದಲ್ಲಿ ಅನುಷ್ಠಾನಗೊಳಿಸುತ್ತಿದೆ. ಇದನ್ನೇ ಈ ದೇಶದ ಜನರು ಪರಂಪರೆಯನ್ನಾಗಿ ಒಪ್ಪಿಕೊಂಡಿದ್ದಾರೆ. ಆದರೆ ಎಸ್. ಎಲ್. ಭೈರಪ್ಪನವರು ನಮ್ಮ ಸಂವಿಧಾನದಲ್ಲಿ ಪರಂಪರೆಯಿಲ್ಲ ಎನ್ನುತ್ತಿದ್ದಾರೆ. ಹಾಗಾದರೆ ಅವರು ಬಯಸುತ್ತಿರುವ ಪರಂಪರೆ ಯಾವುದು? ಭೈರಪ್ಪನವರು ಬಯಸುತ್ತಿರುವ ಪರಂಪರೆ ಧರ್ಮಶಾಸ್ತ್ರಗಳ ಪರಂಪರೆ. ಇಂದಿಗೂ ಕೂಡ ಅವರು ಧರ್ಮಶಾಸ್ತ್ರಗಳೇ ನಮ್ಮ ಪರಂಪರೆ ಎಂಬುದನ್ನು ಒಪ್ಪುತ್ತಾರೆ. ಆದರೆ ಈ ನೆಲದ ಬಹುಸಂಖ್ಯಾತ ಜನವರ್ಗವು ಧರ್ಮಶಾಸ್ತ್ರಗಳ ಪರಂಪರೆಯೇ ಸಂವಿಧಾನ ಎಂಬುದನ್ನು ಒಪ್ಪುವುದಿಲ್ಲ. ಸೀಮಿತ ಜನರ ರಕ್ಷಣೆಗಷ್ಟೆ ನಿಲ್ಲುವ ಶಾಸ್ತ್ರಗಳನ್ನು ಪರಂಪರೆ ಎಂದಾಗಲಿ ಸಂವಿಧಾನ ಎಂದಾಗಲಿ ಯಾರೂ ಒಪ್ಪಲಾರರು. ಭಾರತದಲ್ಲಿ ಜನರನ್ನು ಅನಕ್ಷರಸ್ಥರನ್ನಾಗಿಸಿ, ಮೌಢ್ಯ ತುಂಬಿ, ಅಧಿಕಾರ ಮತ್ತು ಸಂಪತ್ತನ್ನು ದೋಚಲು ಧರ್ಮಶಾಸ್ತ್ರಗಳು ರಚನೆಗೊಂಡವು. ಆನಂತರ ವರ್ಣವ್ಯವಸ್ಥೆಯ ಮೂಲಕ ಜಾತಿವ್ಯವಸ್ಥೆಯ ಬೀಜ ನೆಟ್ಟು ಒಟ್ಟಾರೆ ದೇಶದಲ್ಲಿನ ಜಾತಿ ತಾರತಮ್ಯತೆ ಅಸ್ಪಶ್ಯತೆಯಂತಹ ಭೀಕರ ಆಚರಣೆಗೆ ಧರ್ಮಶಾಸ್ತ್ರಗಳು ಬೇರುಗಳಾಗಿವೆ. ಇಂತಹ ಅಸಮಾನತೆಯ ಪರಂಪರೆಯನ್ನು ಇಂದಿಗೂ ಕೂಡ ಶ್ರೇಷ್ಠವಾದ ಜನಮುಖಿ ಪರಂಪರೆ, ಇದೇ ದೇಶದ ದೊಡ್ಡ ಸಾಂಸ್ಕೃತಿಕ ನಡೆ ಎಂದು ನಂಬಲಾಗುತ್ತಿದೆ. ಜನಸಾಮಾನ್ಯರ ಮೇಲೆ ಇದನ್ನು ಹೇರಲಾಗುತ್ತಿದೆ. ಧರ್ಮ ತಂದೊಡ್ಡಿದ ತಾರತಮ್ಯವನ್ನು ದೇಶದ ಪರಂಪರೆ ಎಂದು ಹೇಳುವ ಮೂಲಕ ಈ ನೆಲದ ಸಹಬಾಳ್ವೆ ಮತ್ತು ಸಮಾನತೆಗೆ ಬೀಗ ಜಡಿಯಲು ಬೌದ್ಧಿಕ ಚಾತುರ್ಯತೆಯನ್ನು ಬಳಸಿಕೊಳ್ಳಲಾಗುತ್ತಿದೆ. ಒಂದು ಧರ್ಮ ಎಂದಿಗೂ ಒಂದು ದೇಶದ ಸಾರ್ವತ್ರಿಕ ಪರಂಪರೆಯಾಗಲಾರದು. ಪ್ರತಿಯೊಬ್ಬನೂ ಜಾತಿ, ಮತಗಳ ಹಂಗಿಲ್ಲದೆ ಒಪ್ಪಿಕೊಳ್ಳುವ ಏಕೈಕ ಪರಂಪರೆ ಎಂದರೆ ಅದು ಸಂವಿಧಾನ ಮಾತ್ರ.

ಭಾರತದ ಪರಂಪರೆಯೊಳಗೆ ಮತ್ತು ನಮ್ಮ ಸಂವಿಧಾನದಲ್ಲಿ ಹೆಣ್ಣಿಗೆ ವಿಶೇಷ ಸ್ಥಾನಮಾನ, ಗೌರವ ಹಾಗೂ ಕಾನೂನುಗಳು ರೂಪುಗೊಂಡಿವೆ. ಹರಪ್ಪ-ಮಹೆಂಜೋದಾರೋ ನಾಗರಿಕತೆಯ ಉದಯಕಾಲದಲ್ಲಿ ಮಾತೃಪ್ರಧಾನ ಕುಟುಂಬ ವ್ಯವಸ್ಥೆ ನಮ್ಮಲ್ಲಿ ಜಾರಿಯಲ್ಲಿತ್ತು. ಹೆಣ್ಣು ಗಂಡಿಗಿಂತ ವಿಶೇಷ ಸ್ಥಾನಮಾನ ಹೊಂದಿದ್ದಳು. ಗ್ರಾಮಗಳಲ್ಲಿ ಯಾರಾದರೊಬ್ಬ ತಪ್ಪುಎಸಗಿದರೆ ಹೆಣ್ಣೇ ಪಂಚಾಯ್ತಿಯ ಯಜಮಾನಿಕೆ ವಹಿಸಿ ತಪ್ಪಿಗೆ ತಕ್ಕ ತೀರ್ಪು ನೀಡುತ್ತಿದ್ದಳು. ಆದರೆ ಧರ್ಮಶಾಸ್ತ್ರಗಳು ರಚನೆಯಾಗಿ ಅವುಗಳು ರಾಜಾಶ್ರಯ ಪಡೆದುಕೊಂಡ ನಂತರ ಮಹಿಳೆಗೆ ಇದ್ದ ಸ್ವಾತಂತ್ರ್ಯ, ಆಕೆಗೆ ಇದ್ದ ಅಧಿಕಾರ ಎಲ್ಲವೂ ಮೊಟಕಾದವು. ಮಾತೃ ಪ್ರಧಾನ ಸಂಸ್ಕೃತಿ ನಾಶವಾಗಿ, ಪುರುಷ ಪ್ರಧಾನ ಸಂಸ್ಕೃತಿ ಜಾರಿಯಾಯಿತು. ಹೆಣ್ಣು, ವಿದ್ಯೆ, ಅಧಿಕಾರ, ಸಂಪತ್ತು ಎಲ್ಲಕ್ಕಿಂತ ಮಿಗಿಲಾಗಿ ಆಕೆಯು ವ್ಯಕ್ತಿ ಸ್ವಾತಂತ್ರ್ಯವನ್ನು ಕಳೆದುಕೊಂಡು ಕೇವಲ ಗಂಡಸು ಬೇಕೆಂದಾಗ ಬಳಸಿಕೊಳ್ಳುವ ಭೋಗದ ವಸ್ತುವಾಗಿ ಉಳಿದುಕೊಂಡಳು. ಇದಕ್ಕೆ ಧರ್ಮಶಾಸ್ತ್ರಗಳು ತಂದ ಕಾನೂನು ಸಂಹಿತೆ, ಲಿಂಗತಾರತಮ್ಯತೆಯ ವ್ಯಾಖ್ಯಾನಗಳು ಕಾರಣ. ಹೆಣ್ಣು ಕೇವಲ ಮನೆಕೆಲಸ, ಮಕ್ಕಳನ್ನು ಹೆರುವುದು ಮತ್ತು ಗಂಡಸು ಬೇಕೆಂದಾಗ ಇಷ್ಟವಿರಲಿ, ಇಲ್ಲದಿರಲಿ, ಮಲಗಬೇಕು ಎಂಬಷ್ಟಕ್ಕೆ ಮಿತಿಗೊಳಿಸಲಾಯಿತು. ಅದರಿಂದಾಚೆಗೆ ಆಕೆಗೆ ತನ್ನದೇ ಆದ ಯಾವ ಹಕ್ಕುಗಳೂ ಉಳಿಯಲಿಲ್ಲ. ಅದನ್ನೇ ಧರ್ಮ ಎನ್ನಲಾಯಿತು. ಅದನ್ನೇ ಸಂಸ್ಕೃತಿ, ಇದೇ ಭಾರತದ ಪರಂಪರೆ ಎಂದು ಈ ಜಾಗತಿಕ ಯುಗದಲ್ಲಿಯೂ ಹೆಣ್ಣನ್ನು ವಂಚಿಸುತ್ತಲೇ ಬರುತ್ತಿದ್ದಾರೆ. ಹರಪ್ಪನಾಗರಿಕತೆ, ಲೋಕಾಯತ ಪರಂಪರೆಗಳ ನಂತರ ಹೆಣ್ಣಿಗೆ ಸಮಾನ ಹಕ್ಕು ಮತ್ತು ಗೌರವ ಸಿಗುವಂತೆ ಮಾಡಿದ್ದು ಬುದ್ಧರ ಕ್ರಾಂತಿಯಲ್ಲಿ. ಆನಂತರ ಬಸವಣ್ಣನವರ ಕಲ್ಯಾಣ ಕ್ರಾಂತಿಯ ನಂತರ ಹೆಣ್ಣು ಎಲ್ಲಾ ಸಮಾನ ಗೌರವ ಹಕ್ಕುಗಳನ್ನು ಪಡೆದುಕೊಂಡಳು. ಇಂದು ಹೆಣ್ಣು ತನ್ನೆಲ್ಲಾ ಹಕ್ಕು ಸ್ಥಾನಮಾನಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಪಡೆದುಕೊಳ್ಳುತ್ತಿದ್ದಾಳೆಂದರೆ ಅದಕ್ಕೆ ಪ್ರಮುಖ ಕಾರಣ ಡಾ. ಬಿ. ಆರ್.ಅಂಬೇಡ್ಕರ್ ರಚಿತ ಭಾರತದ ಸಂವಿಧಾನದಿಂದ. ಆದರೆ ಇಂದು ಭೈರಪ್ಪನವರು ಹೆಣ್ಣನ್ನು ಮುಟ್ಟುವುದಕ್ಕೆ ಅನುಮತಿ ಬೇಕಾಗಿಲ್ಲ ಎಂಬ ವಾದವನ್ನು ಬಲಪಡಿಸಲು ಮತ್ತು ಭಾರತದ ತಲೆತಲಾಂತರಗಳ ಹಿಂದೆ ಕಸಿದುಕೊಂಡ ಹೆಣ್ಣಿನ ಹಕ್ಕನ್ನು ಮತ್ತೆ ಕಸಿದುಕೊಳ್ಳುವ ಕಾರ್ಯತಂತ್ರಕ್ಕೆ ಶಾಸ್ತ್ರಗಳನ್ನು ಮುಂದಿಟ್ಟುಕೊಂಡು ಪುನರ್ ವ್ಯಾಖ್ಯಾನಕ್ಕೆ ನಿಂತಿದ್ದಾರೆ.

ಅನಾದಿ ಕಾಲದಲ್ಲಿ ಮನುಷ್ಯನಿಗೆ ಯಾವುದೇ ಜಾತಿ ತಾರತಮ್ಯತೆಯ ಅರಿವೇ ಇರಲಿಲ್ಲ. ಬುಡಕಟ್ಟುಗಳಾಗಿ ಜೀವಿಸುತ್ತಿದ್ದ ಕಾಲದಲ್ಲಿ ಯಾರು ಯಾರನ್ನು ಬೇಕಾದರೂ ಮದುವೆ ಆಗಬಹುದಿತ್ತು. ಅಂತಹ ಒಂದು ಸ್ವಾತಂತ್ರ್ಯ ಹೆಣ್ಣಿನಲ್ಲಿಯೂ ಇತ್ತು, ಗಂಡಿನಲ್ಲಿಯೂ ಇತ್ತು.

ಆದರೆ ಭಾರತದ ನೆಲದಲ್ಲಿ ಹುಟ್ಟಿಕೊಂಡ ವೈದಿಕ ಧರ್ಮಶಾಸ್ತ್ರಗಳ ನಂತರ ಸತಿಸಹಗಮನ ಪದ್ಧತಿ, ಆನಂತರ ವಿಧವೆಯಾದವಳು ಮತ್ತೆ ಪುನರ್ ವಿವಾಹವಾಗದೆ ತಲೆ ಬೋಳಿಸಿಕೊಂಡು ಹಾಗೆಯೇ ಬದುಕುವ ರೀತಿ ಇತ್ಯಾದಿ ಶೋಷಣೆಗಳು ಹುಟ್ಟಿಕೊಂಡವು. ಎರಡು ಸಾವಿರ ವರ್ಷಗಳ ಕಾಲ ಸಂವಿಧಾನ ಬರುವ ತನಕ ಇಂತಹ ಕ್ರೂರ ಶೋಷಣೆಗೆ ಹೆಣ್ಣು ಒಳಗಾಗಿದ್ದಾಳೆ. ಇದು ಶೋಷಣೆಯಲ್ಲ, ಇದು ನಮ್ಮ ಸಂಸ್ಕೃತಿ, ಧರ್ಮ ಎಂದು ನಂಬಿಸಿ, ಹೆಣ್ಣಿಗೆ ಎಂದಿಗೂ ಕೂಡ ಅದು ಶೋಷಣೆ ಎಂದು ಅನಿಸಬಾರದು ಅಂತಹ ರೀತಿಯಲ್ಲಿ ಧರ್ಮ ಮತ್ತು ಭಾವನಾತ್ಮಕ ಸಂಬಂಧವನ್ನು ವಿಲೀನಗೊಳಿಸಿ ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳಲಾಗಿದೆ.

ಸಂವಿಧಾನೋತ್ತರದಲ್ಲಿ ಹೆಣ್ಣು ಸಂಪೂರ್ಣ ಸ್ವತಂತ್ರಳಾದಳು, ವಿದ್ಯೆ, ಅಧಿಕಾರ, ಆಸ್ತಿಯಲ್ಲಿ ಹಕ್ಕು, ಇಷ್ಟವಾದರಷ್ಟೆ ವಿವಾಹ, ಮದುವೆಯ ನಂತರ ಗಂಡನೊಡನೆ ಇಷ್ಟವಾದರಷ್ಟೆ ಇರಬಹುದು, ಇಲ್ಲವಾದರೆ ಬಿಟ್ಟು ಹೋಗಬಹುದು. ಗಂಡ ಹೆಂಡತಿಗೆ ವಿಚ್ಛೇದನ ನೀಡಿದರೆ ಪರಿಹಾರ ಕೊಡುವುದು, ವಿಧವೆಯಾದರೆ ಮರುವಿವಾಹ ಹೀಗೆ ಹಲವು ಹಕ್ಕುಗಳನ್ನು ಪಡೆದುಕೊಂಡಳು. ಇದು ನಿಜವಾದ ಭಾರತದ ಪರಂಪರೆ. ಹೆಣ್ಣು ತನಗಿಷ್ಟವಾದರೆ ಮಾತ್ರ ಒಬ್ಬ ಪುರುಷನೊಡನೆ ಇರಬಹುದು. ಬಲವಂತಕ್ಕೆ ಇಲ್ಲಿ ಅವಕಾಶವಿಲ್ಲ ಎಂದು ಭಾರತದ ಉಚ್ಚ ನ್ಯಾಯಾಲಯ ಆದೇಶ ಮಾಡಿದೆ. ಈ ಮೂಲಕ ಹೆಣ್ಣಿನ ವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ನ್ಯಾಯಾಲಯಗಳೇ ದನಿ ಎತ್ತಿವೆ. ಆದರೆ ಇಂದು ಮಹಿಳಾ ಸ್ವಾತಂತ್ರ್ಯ ಮತ್ತು ಪ್ರಸ್ತುತ ಕಾನೂನನ್ನು ಹುಸಿಗೊಳಿಸಿ ಮನುಧರ್ಮಶಾಸ್ತ್ರವನ್ನೇ ಪರಂಪರೆ ಮಾಡಿ ಹೆಣ್ಣನ್ನು ದಾಸ್ಯಕ್ಕೆ ಕರೆದೊಯ್ಯುವ ಮೂಲಕ ಮತ್ತೆ ಸಾಂಸ್ಕೃತಿಕ ಯಜಮಾನಿಕೆ ತರಲು ಭೈರಪ್ಪರಂತಹವರು ತಾಲೀಮು ನಡೆಸುತ್ತಿದ್ದಾರೆ.

Writer - ಹಾರೋಹಳ್ಳಿ ರವೀಂದ್ರ

contributor

Editor - ಹಾರೋಹಳ್ಳಿ ರವೀಂದ್ರ

contributor

Similar News