ಸರಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಶುಭಾಶಯಗಳು

Update: 2019-05-10 05:33 GMT

ಕೊನೆಗೂ ಸರಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಹಸಿರು ನಿಶಾನೆ ದೊರಕಿದೆ. ಪ್ರತಿ ತಾಲೂಕಿಗೆ ಎರಡು ಶಾಲೆಯಂತೆ ಒಂದು ಸಾವಿರ ಸರಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರಂಭಿಸಲು ಸರಕಾರ ಮುಂದಾಗಿದೆ. ಮೇ 13ರೊಳಗೆ ಶಾಲೆಗಳ ಪಟ್ಟಿ ಹೊರ ಬೀಳುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳುತ್ತಿವೆ. ಇದು ನಿಜವಾದರೆ, ಕರ್ನಾಟಕದಲ್ಲಿ ಮೈತ್ರಿ ಸರಕಾರ ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದಂತೆ ಒಂದು ಕ್ರಾಂತಿಕಾರಕವಾದ ಹೆಜ್ಜೆಯಿಟ್ಟಂತೆಯೇ ಸರಿ. ಈವರೆಗೆ ಸರಕಾರಿ ಶಾಲೆಗಳು ಕನ್ನಡವನ್ನು ಕಟ್ಟಿ ಬೆಳೆಸಿದೆಯೆನ್ನುವುದು ಎಷ್ಟು ನಿಜವೋ, ಸರಕಾರಿ ಶಾಲೆಗಳಿಂದ ಜನರು ವಿಮುಖರಾಗುವುದಕ್ಕೆ ಅಲ್ಲಿ ಇಂಗ್ಲಿಷ್ ಕಲಿಕೆಯ ಕೊರತೆ ಕಾರಣ ಎನ್ನುವುದೂ ಅಷ್ಟೇ ನಿಜ. ಸರಕಾರಿ ಶಾಲೆಗಳಿರುವುದು ಭಾಷೆಯನ್ನು ಬೆಳೆಸುವುದಕ್ಕಲ್ಲ, ಬದಲಿಗೆ ಶಿಕ್ಷಣವನ್ನು ಸಾಮಾಜಿಕವಾಗಿ ಸರ್ವರಿಗೂ ಲಭ್ಯವಾಗುವಂತೆ ಮಾಡುವುದಕ್ಕೆ ಎನ್ನುವ ವಾಸ್ತವವನ್ನು ಅರಿತಾಗ, ಇಂಗ್ಲಿಷ್ ಮಾಧ್ಯಮ ಶಾಲೆಗಳ ಅಗತ್ಯ ನಮಗೆ ಮನವರಿಕೆಯಾಗಿ ಬಿಡುತ್ತದೆ.

ಸಾಮಾಜಿಕ ನ್ಯಾಯದ ಉದ್ದೇಶದಿಂದ ಆರಂಭವಾದ ಸರಕಾರಿ ಶಾಲೆಗಳು ಒಂದೊಂದಾಗಿ ಮುಚ್ಚುತ್ತಿವೆ. ಮೂಲಭೂತ ಸೌಕರ್ಯದ ಕೊರತೆ ಮಾತ್ರವಲ್ಲ, ನಿಧಾನಕ್ಕೆ ಜನರ ಬದುಕುವ ಭಾಷೆ ಇಂಗ್ಲಿಷ್ ಆಗಿ ಪರಿವರ್ತನೆಗೊಂಡಿರುವುದೂ ಇದಕ್ಕೆ ಕಾರಣ. ಇಂಗ್ಲಿಷ್ ಇಲ್ಲದೆ ಭವಿಷ್ಯವೇ ಇಲ್ಲ ಎನ್ನುವಂತಹ ವಾತಾವರಣ ನಮ್ಮ ಪರಿಸರದಲ್ಲಿ ಇದೆ. ಕಂಪ್ಯೂಟರ್‌ಯುಗದ ಈ ಕಾಲ ಘಟ್ಟದಲ್ಲಿ ವಿಜ್ಞಾನ, ಡಿಜಿಟಲೀಕರಣ ಎಲ್ಲ ವಿಭಾಗಗಳೂ ಇಂಗ್ಲಿಷ್ ಭಾಷೆಯನ್ನೇ ನೆಚ್ಚಿಕೊಂಡಿದೆ. ಈ ಕಾರಣಕ್ಕಾಗಿ ಹೊಸತಲೆಮಾರು ಅನಿವಾರ್ಯವಾಗಿ ಇಂಗ್ಲಿಷ್ ಮಾಧ್ಯಮದ ಮೊರೆ ಹೋಗುತ್ತಿದೆ. ಕೆಳ ಮಧ್ಯಮ ವರ್ಗದ ಜನರೂ ಹೊಟ್ಟೆ ಬಟ್ಟೆ ಕಟ್ಟಿ ಇಂಗ್ಲಿಷ್ ಮಾಧ್ಯಮಕ್ಕೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ. ಇತ್ತ ಸರಕಾರಿ ಶಾಲೆಗಳನ್ನು ನೆಚ್ಚಿಕೊಂಡ ಬಡ ಮಕ್ಕಳು ಕಂಗಾಲಾಗಿದ್ದಾರೆ. ಯಾಕೆಂದರೆ ವಿದ್ಯಾರ್ಥಿಗಳ ಕೊರತೆಯ ಕಾರಣವನ್ನು ಮುಂದೊಡ್ಡಿ ಒಂದೊಂದೇ ಶಾಲೆಗಳು ಮುಚ್ಚುಗಡೆಯಾಗುತ್ತಿವೆ. ಖಾಸಗಿ ಶಾಲೆಗಳಿಗೆ ಹೋಗಲು ಇವರು ಅಶಕ್ತರು. ಅರ್ಧದಲ್ಲೇ ಶಿಕ್ಷಣ ಮೊಟಕುಗೊಳಿಸಬೇಕಾದ ಸ್ಥಿತಿ ಇವರದು. ಇಂತಹ ಸಂದರ್ಭದಲ್ಲಿ ಸರಕಾರ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯಲು ಮುಂದಾಗಿರುವುದು ಬಡ ಮಕ್ಕಳ ಪಾಲಿಗೆ ಒಂದು ಆಶಾಕಿರಣವಾಗಿದೆ. ಇದರಿಂದಾಗಿ ಇಂಗ್ಲಿಷ್ ಮಾಧ್ಯಮದ ಬೆನ್ನು ಹತ್ತಿ ಖಾಸಗಿ ಶಾಲೆ ಸೇರಿದ ಕೆಳ ಮತ್ತು ಮಧ್ಯಮ ವರ್ಗದಿಂದ ಬಂದ ವಿದ್ಯಾರ್ಥಿಗಳು ಸರಕಾರಿ ಶಾಲೆಯ ಕಡೆಗೆ ಮುಖ ಮಾಡುವ ಎಲ್ಲ ಸಾಧ್ಯತೆಗಳಿವೆ.

ಸರಕಾರಿ ಶಾಲೆಗಳ ಅಸಹಾಯಕತೆಯನ್ನು ಬಳಸಿಕೊಂಡು ಖಾಸಗಿ ಶಾಲೆಗಳು ಪೋಷಕರ ಮೇಲೆ ಸವಾರಿ ಮಾಡುತ್ತಿವೆ. ‘ಇಂಗ್ಲಿಷ್ ಮಾಧ್ಯಮ’ದ ಹೆಸರಲ್ಲಿ ಶಿಕ್ಷಣವನ್ನು ಉದ್ಯಮವಾಗಿ ಪರಿವರ್ತನೆ ಮಾಡಲಾಗಿದೆ. ಗಲ್ಲಿ ಗಲ್ಲಿಗಳಲ್ಲಿ ಅಣಬೆಗಳಂತೆ ಇಂಗ್ಲಿಷ್ ಮಾಧ್ಯಮ ಶಾಲೆಗಳು ತೆರೆಯುತ್ತಿವೆ. ಈ ಖಾಸಗಿ ಶಾಲೆಗಳಿಗೆ ಸರಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ಒಂದು ದೊಡ್ಡ ಮೂಗುದಾರವಾಗಿವೆ. ಖಾಸಗಿ ಶಾಲೆಗಳಿಗಿಂತ ಸರಕಾರಿ ಶಾಲೆಗಳಿಗೆ ಅವಕಾಶಗಳು ಹೆಚ್ಚು. ಸರಕಾರದ ಬಳಿ ಖಾಸಗಿಯವರಿಗಿಂತ ಹೆಚ್ಚು ಸಂಪನ್ಮೂಲಗಳಿರುತ್ತವೆ. ಜಮೀನು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹೆಚ್ಚು ಕಷ್ಟಪಡಬೇಕಾಗಿಲ್ಲ. ಇದೇ ಸಂದರ್ಭದಲ್ಲಿ ಅತ್ಯುತ್ತಮ ಶಿಕ್ಷಣವನ್ನು ಒದಗಿಸುವುದು ಸರಕಾರದ ಕರ್ತವ್ಯವೂ ಹೌದು. ಸರಕಾರಿ ಇಂಗ್ಲಿಷ್ ಮಾಧ್ಯಮ ಯಶಸ್ವಿಯಾದರೆ ಖಾಸಗಿ-ಸರಕಾರಿ ಶಾಲೆಗಳ ವಿದ್ಯಾರ್ಥಿಗಳ ನಡುವಿನ ಕಂದಕ  ಒಂದಿಷ್ಟಾದರೂ ತುಂಬಬಹುದು.

ಇದೇ ಸಂದರ್ಭದಲ್ಲಿ ಇಂಗ್ಲಿಷ್ ಮತ್ತು ಕನ್ನಡವನ್ನು ಜೊತೆ ಜೊತೆಯಾಗಿ ಕಲಿಸುವ ಅವಕಾಶವೂ ಸರಕಾರಕ್ಕಿದೆ. ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ಕನ್ನಡಕ್ಕೆ ಆದ್ಯತೆ ನೀಡುವುದು ಕಡಿಮೆ. ಹೆಚ್ಚಿನ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಕನ್ನಡ ಓದುವುದು, ಬರೆಯುವುದು ತೀರಾ ಕಷ್ಟ ಎನ್ನುವಂತಹ ಸ್ಥಿತಿಯಿದೆ. ಇಂಗ್ಲಿಷ್‌ನ ಹೆಸರಲ್ಲಿ ಸರಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಆಹ್ವಾನಿಸಿ, ಆದ್ಯತೆಯ ಮೇಲೆ ಕನ್ನಡವನ್ನು ಕಲಿಸಿದರೆ ಇಂಗ್ಲಿಷ್‌ನ ಜೊತೆಗೆ ಕನ್ನಡವೂ ಉಳಿಯುತ್ತದೆ. ಖ್ಯಾತ ಚಿಂತಕ ಯು. ಆರ್. ಅನಂತಮೂರ್ತಿ ಅವರ ‘ಇಂಗ್ಲಿಷ್-ಕನ್ನಡ ಜೊತೆ ಜೊತೆಗೆ’ ಆಶಯ ಈಡೇರುತ್ತದೆ. ಬಹುಶಃ ಇಂದು ಕನ್ನಡವನ್ನು ನಾವು ಪ್ರಾಥಮಿಕವಾಗಿ ಉಳಿಸಿ ಬೆಳೆಸುವುದಕ್ಕಿರುವ ಒಂದೇ ಒಂದು ದಾರಿ, ಸರಕಾರವೇ ಇಂಗ್ಲಿಷ್ ಶಾಲೆಗಳನ್ನು ಆರಂಭಿಸಿ, ಅಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಷ್‌ನೊಂದಿಗೆ ಕನ್ನಡವನ್ನು ಜೊತೆ ಜೊತೆಯಾಗಿ ಹೇಳಿಕೊಡುವುದು. ಯಾಕೆಂದರೆ, ಇಂಗ್ಲಿಷನ್ನು ಪರಕೀಯ ಎಂದು ಕರೆಯುವ ವಾತಾವರಣ ಇಂದಿಲ್ಲ. ಜಾಗತೀಕರಣದ ಬಳಿಕ ಭಾರತ ಇಂಗ್ಲಿಷ್‌ನ್ನು ತನ್ನ ಭಾಷೆಯಾಗಿ ಒಪ್ಪಿಕೊಂಡಿದೆ. ಎಲ್ಲ ವಿಭಾಗಗಳಲ್ಲೂ ಇಂಗ್ಲಿಷ್ ಅನಿವಾರ್ಯವಾಗಿರುವುದೇ ಇದಕ್ಕೆ ಉದಾಹರಣೆ.

ಹೀಗಿರುವಾಗ ಬಡ, ಹಿಂದುಳಿದ ವರ್ಗಗಳ ಮಕ್ಕಳು ಬರೀ ಕನ್ನಡವನ್ನು ನೆಚ್ಚಿಕೊಂಡರೆ ಸಾಮಾಜಿಕವಾಗಿ, ಆರ್ಥಿಕವಾಗಿ ಇತರರ ಜೊತೆಗೆ ಸ್ಪರ್ಧಿಸುವುದು ಸಾಧ್ಯವಿಲ್ಲ. ಕನ್ನಡ ಮತ್ತು ಇಂಗ್ಲಿಷ್ ಜೊತೆ ಜೊತೆಯಾಗಿ ಕಲಿತರೆ ಆ ವಿದ್ಯಾರ್ಥಿಗಳು ಯಾವುದೇ ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗೆ ಸಡ್ಡು ಹೊಡೆಯುವ ಶಕ್ತಿಯನ್ನು ತನ್ನದಾಗಿಸಿಕೊಳ್ಳುತ್ತಾರೆ. ಇದೇ ಸಂದರ್ಭದಲ್ಲಿ ಇನ್ನೊಂದು ಮಹತ್ವದ ಅಂಶವನ್ನು ಸರಕಾರ ಗಮನದಲ್ಲಿಟ್ಟುಕೊಳ್ಳಬೇಕು. ಭಾಷೆಯೇ ಜ್ಞಾನವಲ್ಲ. ಆದುದರಿಂದ ಇಂಗ್ಲಿಷ್ ಮಾಧ್ಯಮವಾಗಿ ಸರಕಾರಿ ಶಾಲೆಗಳನ್ನು ಪರಿವರ್ತಿಸಿದಾಕ್ಷಣ ಮಕ್ಕಳು ಪ್ರತಿಭಾವಂತರಾಗುವುದಿಲ್ಲ. ಆ ಶಾಲೆಗಳು ಪ್ರತಿಭಾವಂತ ಶಿಕ್ಷಕರನ್ನೂ ಒಳಗೊಂಡಿರಬೇಕಾಗುತ್ತದೆ. ಸರಕಾರಿ ಇಂಗ್ಲಿಷ್ ಶಾಲೆಗಳು ಶಿಕ್ಷಕರು ಮತ್ತು ಮೂಲಭೂತ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿದ್ದರೆ ಅಂತಹ ಶಾಲೆಗಳಿಂದ ಯಾವ ಪ್ರಯೋಜನವೂ ಇಲ್ಲ. ಇಂದು ಸರಕಾರಿ ಶಾಲೆಗಳು ಖಾಸಗಿ ಶಾಲೆಗಳ ಜೊತೆಗೆ ಎಲ್ಲ ವಿಷಯಗಳಲ್ಲೂ ಸ್ಪರ್ಧೆಗಿಳಿಯಬೇಕು. ಸರಕಾರಿ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳು ಹೆಚ್ಚು ಸೃಜನಶೀಲರಾಗುತ್ತಾರೆ ಎನ್ನುವುದು ಸಮಾಜಕ್ಕೆ ಮನದಟ್ಟಾಗುತ್ತಾ ಹೋದಂತೆಯೇ ಖಾಸಗಿ ಶಾಲೆಗಳ ವ್ಯಾಮೋಹ ಇಳಿಯುತ್ತದೆ. ಜೊತೆಗೆ, ಬಡವರು, ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ನ್ಯಾಯವನ್ನು ಪಡೆಯುತ್ತಾರೆ. ಭವಿಷ್ಯದಲ್ಲಿ ಅವರು ಎದುರಿಸಬಹುದಾದ ಕೀಳರಿಮೆಗಳಿಂದ ಮುಕ್ತರಾಗುತ್ತಾರೆ. ಜೊತೆಗೆ ನಿಜವಾದ ಕನ್ನಡದ ಹರಿಕಾರರಾಗಿ ಸಮಾಜದಲ್ಲಿ ಹರಡಿಕೊಳ್ಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News