ಯುವ ಸಮುದಾಯ ಜಾತಿ ವ್ಯವಸ್ಥೆ ಕಿತ್ತೊಗೆಯಬೇಕು: ನಟ ದೊಡ್ಡಣ್ಣ

Update: 2019-05-10 12:46 GMT

ಬೆಂಗಳೂರು, ಮೇ 10: ಇಂದಿನ ಯುವ ಸಮುದಾಯ ಸಮಾಜದಲ್ಲಿ ಭದ್ರವಾಗಿ ಬೇರೂರಿರುವ ಜಾತಿ ವ್ಯವಸ್ಥೆಯನ್ನು ಕಿತ್ತು ಹಾಕುವ ಕಡೆಗೆ ಸಾಗಬೇಕು ಎಂದು ಚಿತ್ರನಟ ದೊಡ್ಡಣ್ಣ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ನಗರದ ಸರಕಾರಿ ಕಲಾ ಕಾಲೇಜಿನ 2018-19 ನೆ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್, ಎನ್‌ಸಿಸಿ, ರೇಂಜರ್ಸ್‌ ರೋವರ್ಸ್‌, ರೆಡ್‌ಕ್ರಾಸ್ ಹಾಗೂ ಮತ್ತಿತರೆ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಮಾಜದಲ್ಲಿ ಹುಟ್ಟುವಾಗ ಯಾವ ಜಾತಿಯವರು ಎಂದು ಜನಿಸುವುದಿಲ್ಲ, ಆದರೆ, ಬೆಳೆಯುತ್ತಾ ಜಾತಿಯೆಂಬುದನ್ನು ತುಂಬಲಾಗುತ್ತದೆ. ಹೀಗಾಗಿ, ಮನುಷ್ಯನ ಮೊದಲ ಶತ್ರುವಾಗಿರುವ ಜಾತಿ ಪದ್ಧತಿಯ ಬೇರನ್ನು ಇಂದಿನ ಯುವ ಸಮುದಾಯ ಕಿತ್ತೆಸೆಯಲು ಮುಂದಾಗಬೇಕು. ಆಗ ಮಾತ್ರ ಎಲ್ಲರೂ ವಿಶ್ವಮಾನವರಾಗಿ ಬದುಕಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಹಣ, ಸಂಪತ್ತು, ಕೀರ್ತಿಯಿಂದ ಯಾರೂ ದೊಡ್ಡವರಾಗಲ್ಲ. ಜ್ಞಾನದಿಂದಲೇ ಪ್ರತಿಯೊಬ್ಬರೂ ಬೆಳೆಯಲು ಸಾಧ್ಯವಾಗುತ್ತದೆ. ಆದುದರಿಂದಾಗಿ ಪ್ರಾಮಾಣಿಕವಾಗಿ ತಮ್ಮ ಕೆಲಸವನ್ನು ತಾವು ಮಾಡಿಕೊಳ್ಳಬೇಕು. ಸಾಧ್ಯವಾದರೆ ತಮ್ಮಲ್ಲಿರುವ ಜ್ಞಾನವನ್ನು ಇತರರಿಗೆ ಹಂಚುವ ಮೂಲಕ ನೀವು ಬೆಳೆಯಿರೆ, ಮತ್ತೊಬ್ಬರನ್ನು ಬೆಳೆಸಿರಿ ಎಂದು ಸಲಹೆ ನೀಡಿದರು.

ತಾಯಿ, ತಂದೆ, ಗುರು ಹಾಗೂ ಮನೆ ನಮ್ಮ ಜೀವನದ ಪ್ರಮುಖ ಆಧಾರಸ್ತಂಭಗಳಾಗಿದ್ದು, ಅವುಗಳನ್ನು ಸದಾ ಕಾಪಾಡಬೇಕು. ಮಹಾನ್ ನಾಯಕರು ಓದಿದ ಕಾಲೇಜಿನಲ್ಲಿ ಓದಲು ಅವಕಾಶ ಸಿಕ್ಕಿದ್ದು, ನಮ್ಮ ಅದೃಷ್ಟ. ಈ ಜ್ಞಾನ ದೇಗುಲದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಅವರು ಹರಿಸಿದರು.

ವಿಧಾನ ಪರಿಷತ್ ಸದಸ್ಯ ಪುಟ್ಟಣ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್, ಅಂತರ್ಜಾಲದ ಚಟದಿಂದ ಹೊರಬಂದು ಸೇವಾ ಹಾಗೂ ಹೋರಾಟದ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಮನುಷ್ಯನಾಗಬೇಕು ಎಂದರೆ ಸಮಾಜದೊಂದಿಗೆ ಬೆರೆಯಬೇಕು ಎಂದು ಹೇಳಿದರು.

ಇತ್ತೀಚಿಗೆ ಎಲ್ಲ ರಂಗದಲ್ಲಿಯೂ ಸ್ಪರ್ಧೆ ಏರ್ಪಟ್ಟಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕಾಲೇಜು ಜೀವನದಲ್ಲಿ ಕಾಲಹರಣ ಮಾಡಿ, ಸಮಯವನ್ನು ಹಾಳು ಮಾಡಿಕೊಳ್ಳುವುದು ಬಿಟ್ಟು, ಏನಾದರೂ ಸಾಧಿಸುವ ಕಡೆಗೆ ಕೇಂದ್ರೀಕರಿಸಬೇಕು ಎಂದ ಅವರು, ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳುವುದು ಇಂದಿನ ತುರ್ತು ಅಗತ್ಯವಿದೆ ಎಂದರು.

ಸಮಾರಂಭದಲ್ಲಿ ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರಿ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಡಾ. ಟಿ.ಎಂ. ಮಂಜುನಾಥ, ಅಂತರ್‌ರಾಷ್ಟ್ರೀಯ ಕ್ರೀಡಾಪಟು ಸತ್ಯನಾರಾಯಣ, ಪ್ರಾಂಶುಪಾಲರಾದ ಜೆ.ಸಿ ರಾಧಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News