ಬರ ಪರಿಹಾರ ವಿತರಣೆಯಲ್ಲಿ ಕೇಂದ್ರದಿಂದ ತಾರತಮ್ಯವಾಗಿಲ್ಲ: ಶೋಭಾ ಕರಂದ್ಲಾಜೆ

Update: 2019-05-10 14:09 GMT

ಬೆಂಗಳೂರು, ಮೇ 10: ಬರ ಪರಿಹಾರ ನಿಗದಿ ಹಾಗೂ ವಿತರಣೆಯಲ್ಲಿ ಕೇಂದ್ರ ಸರಕಾರವು ಕರ್ನಾಟಕಕ್ಕೆ ತಾರತಮ್ಯ ತೋರಿದೆ ಎನ್ನುವ ರಾಜ್ಯ ಸರಕಾರದ ಹೇಳಿಕೆ ಸಂಪೂರ್ಣ ನಿರಾಧಾರವಾದುದು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಕೃಷಿ ಸಚಿವ ಕೃಷ್ಣಭೈರೇಗೌಡ ಹೇಳುವಂತೆ ಮುಂಗಾರು ಬೆಳೆ ನಷ್ಟಕ್ಕೆ ಕಳೆದ ಅಕ್ಟೋಬರ್‌ನಲ್ಲಿ ಸಲ್ಲಿಸಿದ್ದ ಪ್ರಸ್ತಾವನೆ ಅನ್ವಯ 949 ಕೋಟಿ ರೂ.ಗಳ ಪರಿಹಾರ ನಿಗದಿಯಾಗಿದ್ದು, 434.62 ಕೋಟಿ ರೂ.ಬಿಡುಗಡೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಂಜೂರಾದ ಇನ್ನುಳಿದ ಮೊತ್ತವನ್ನು ಬಿಡುಗಡೆ ಮಾಡಿಸಿಕೊಳ್ಳಬೇಕಾದ ಜವಾಬ್ದಾರಿ ರಾಜ್ಯ ಸರಕಾರದ್ದಾಗಿದೆ. ಆದರೆ, ರಾಜ್ಯ ಸರಕಾರ ತನ್ನ ಜವಾಬ್ದಾರಿ ನಿರ್ವಹಣೆಯಲ್ಲಿ ವಿಫಲವಾಗಿದ್ದು, ಕೇಂದ್ರ ಸರಕಾರವನ್ನು ದೂರುತ್ತಿದೆ ಎಂದು ಅವರು ಹೇಳಿದ್ದಾರೆ.

ಹಿಂಗಾರು ಹಂಗಾಮಿಗೆ ಸಂಬಂಧಪಟ್ಟಂತೆ 2064 ಕೋಟಿ ರೂ.ಪರಿಹಾರಕ್ಕೆ ಕಳೆದ ಫೆಬ್ರವರಿಯಲ್ಲಿ ಸಲ್ಲಿಸಲಾದ ಪ್ರಸ್ತಾವನೆಯ ಪ್ರಕಾರ, ಪರಿಹಾರವೇ ನಿಗದಿಯಾಗಿಲ್ಲ ಎಂದು ಕೃಷಿ ಸಚಿವರು ಮೇ ಮಧ್ಯಭಾಗದಲ್ಲಿ ಹೇಳಿಕೆ ನೀಡುತ್ತಾರೆಂದರೆ ಬರ ಪರಿಹಾರ ಕಾಮಗಾರಿಯ ಬಗ್ಗೆ ರಾಜ್ಯ ಸರಕಾರದ ಕಾಳಜಿಯೇನು ಎನ್ನುವುದು ಅರ್ಥವಾಗುತ್ತದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ರಾಜ್ಯದ ದೋಸ್ತಿ ಸರಕಾರದಲ್ಲಿನ ಗೊಂದಲದ ಕಾರಣಕ್ಕೆ ಸರಕಾರ ರಾಜ್ಯದಲ್ಲಿನ ಬರ ಪರಿಸ್ಥಿತಿಯ ಬಗ್ಗೆ ಲೋಕಸಭಾ ಚುನಾವಣೆ ಮುಗಿಯುವವರೆಗೂ ಕಣ್ಣುಮುಚ್ಚಿ ಕುಳಿತಿತ್ತು. ಇದೀಗ, ರಾಜ್ಯ ಸಂಪುಟ ಸಭೆಯಲ್ಲಿ ನಡೆದ ಚರ್ಚೆಯು ಒಂದು ತಿಂಗಳ ಹಿಂದೆಯೇ ನಡೆಯಬೇಕಾಗಿತ್ತು ಎಂದು ಅವರು ಹೇಳಿದ್ದಾರೆ.

ಚುನಾವಣಾ ಆಯೋಗದ ಅನುಮತಿ ಪಡೆದು ತುರ್ತು ಕಾಮಗಾರಿಗಳನ್ನು ಕೈಗೊಳ್ಳಲು ಸಮ್ಮಿಶ್ರ ಸರಕಾರಕ್ಕೆ ಅವಕಾಶವಿತ್ತು. ಆದರೆ, ಕೃಷಿ ಸಚಿವರು ಸೇರಿದಂತೆ ಎಲ್ಲ ಮಂತ್ರಿಗಳು ಚುನಾವಣಾ ರಾಜಕೀಯದಲ್ಲೇ ಮುಳುಗಿದ್ದರು, ಇದೀಗ ಎಚ್ಚೆತ್ತುಕೊಂಡು ಹೇಳಿಕೆ ನೀಡಲಾರಂಭಿಸಿದ್ದಾರೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

2014-19ರ ವರೆಗೆ ರಾಷ್ಟ್ರೀಯ ಪ್ರಕೃತಿ ವಿಪತ್ತು ನಿರ್ವಹಣಾ ನಿಧಿಯಿಂದ 6082.29 ಕೋಟಿ ರೂ.ಹಾಗೂ ರಾಜ್ಯ ಪ್ರಕೃತಿ ವಿಪತ್ತು ನಿರ್ವಹಣಾ ನಿಧಿಯಿಂದ 1087.99 ಕೊಟಿ ರೂ.ಗಳನ್ನು(ಒಟ್ಟು 7170.28 ಕೊಟಿ ರೂ.) ರಾಜ್ಯಕ್ಕೆ ಬಿಡುಗಡೆ ಮಾಡಲಾಗಿದೆ. ಆದರೆ, 2004 ರಿಂದ 2014ರ ಅವಧಿಯಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ಬಿಡುಗಡೆ ಮಾಡಿದ್ದು ಕೇವಲ 4822.13 ಕೋಟಿ ರೂ.ಗಳ ಮಾತ್ರ ಎಂದು ಅವರು ವಿವರಣೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News