ವಾಹನ ನಿಲುಗಡೆ ವಿಚಾರದ ಜಗಳ ಕೊಲೆಯಲ್ಲಿ ಅಂತ್ಯ
ಬೆಂಗಳೂರು, ಮಾ 10: ವಾಹನ ನಿಲುಗಡೆ ವಿಚಾರವಾಗಿ ಜಗಳ ನಡೆದು, ವ್ಯಕ್ತಿಯೋರ್ವನ ಕೊಲೆಗೈದಿರುವ ಘಟನೆ ಇಲ್ಲಿನ ಭಾರತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಆ್ಯಸ್ಟಿನ್ ಟೌನ್ ನಿವಾಸಿ ಭರಣಿಧರನ್(36) ಕೊಲೆಯಾಗಿರುವ ವ್ಯಕ್ತಿ ಎಂದು ತಿಳಿದುಬಂದಿದೆ.
ಏನಿದು ಘಟನೆ?: ಮನೆಯ ನೆಲಕ್ಕೆ ಟೈಲ್ಸ್ ಜೋಡಣೆ ಕೆಲಸ ಮಾಡುತ್ತಿದ್ದ ಭರಣಿ ಗುರುವಾರ ಸಂಜೆ 4:30ರ ಸುಮಾರಿಗೆ ಇಲ್ಲಿನ ಲಾವಣ್ಯ ಚಿತ್ರಮಂದಿರ ಸಮೀಪದ ವಾಹನ ನಿಲುಗಡೆ ಜಾಗದಲ್ಲಿ ಬೈಕ್ ನಿಲ್ಲಿಸಿದ್ದರು. ಈ ವೇಳೆ ಸ್ಥಳದಲ್ಲಿದ್ದ ಸೆಲ್ವಂ ಎಂಬಾತ ಪಾರ್ಕಿಂಗ್ ಶುಲ್ಕ 10 ರೂ. ನೀಡುವಂತೆ ಕೇಳಿದ್ದಾನೆ. ಇದಕ್ಕೆ ಒಪ್ಪದ ಭರಣಿ ಆತನೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಇವರಿಬ್ಬರ ನಡುವೆ ಜಗಳ ವಿಕೋಪಕ್ಕೆ ತಿರುಗಿದಾಗ ಸೆಲ್ವಂ ಬಲವಾಗಿ ತಳ್ಳಿದ ಪರಿಣಾಮ, ಕೆಳಗೆ ಬಿದ್ದು ಭರಣಿ ಗಂಭೀರ ಗಾಯಗೊಂಡರು ಎಂದು ಹೇಳಲಾಗುತ್ತಿದೆ.
ತಕ್ಷಣ ಭರಣಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಮೃತದೇಹವನ್ನು ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯಲ್ಲಿಡಲಾಗಿದೆ. ವಿಷಯ ತಿಳಿದು ಭಾರತಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಆರೋಪಿ ಸೆಲ್ವಂನನ್ನು ಬಂಧಿಸಿದ್ದಾರೆ.