ಬಿಬಿಎಂಪಿಯ ಒಂದು ಸಾವಿರ ಕ್ಲಾಸ್ ರೂಮ್‌ಗಳು ಡಿಜಿಟಲೀಕರಣ: ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

Update: 2019-05-10 16:32 GMT

ಬೆಂಗಳೂರು, ಮೇ 10: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 156 ಸರಕಾರಿ ಶಾಲಾ-ಕಾಲೇಜುಗಳ 1 ಸಾವಿರ ಕ್ಲಾಸ್ ರೂಮ್‌ಗಳು ಡಿಜಿಟಲ್ ಕ್ಲಾಸ್‌ಗಳಾಗಿ ಪರಿವರ್ತನೆಯಾಗಲಿವೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದರು.

ಶುಕ್ರವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಕ್ರೋಸ್‌ಟಾ ಮತ್ತು ಟೆಕ್ ಅವಂತ್ ಸಂಸ್ಥೆಗಳು ರೋಶಿನಿ ಯೋಜನೆಯಡಿ, ಸೆಪ್ಟಂಬರ್ ತಿಂಗಳೊಳಗೆ ಪ್ರತಿ ಕ್ಲಾಸ್ ರೂಮ್‌ಗೆ 64 ಇಂಚಿನ ಟಿವಿ ಅಳವಡಿಸಲಿದೆ. ಇಡೀ ಕ್ಲಾಸ್ ರೂಮ್ ಡಿಜಟಲೀಕರಣವಾಗಲಿದೆ. ಟಿವಿ ಮೂಲಕವೇ ಶಿಕ್ಷಕರು ಪಾಠ ಮಾಡಲಿದ್ದು, ಬಿಬಿಎಂಪಿ ಶಿಕ್ಷಕರು ಮಾತ್ರವಲ್ಲದೇ, ಖಾಸಗಿ ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಮಾಡಲಿದ್ದಾರೆ ಎಂದು ತಿಳಿಸಿದರು.

ಬಿಬಿಎಂಪಿ 156 ಶಾಲಾ- ಕಾಲೇಜುಗಳ 16 ಸಾವಿರ ವಿದ್ಯಾರ್ಥಿಗಳಿಗೆ ರೋಶಿನಿ ಯೋಜನೆಯಡಿ 2020ರಲ್ಲಿ ಮೈಕ್ರೋಸ್ಟಾ ಟ್ಯಾಬ್ ನೀಡಲಿದೆ. ಈ ಟ್ಯಾಬ್ ಮೂಲಕ ಶಿಕ್ಷಣ ನೀಡುವ ವ್ಯವಸ್ಥೆ ಮಾಡಲಾಗಿದ್ದು, ಮಕ್ಕಳಿಗೆ ಉಚಿತವಾಗಿಯೇ ಟ್ಯಾಬ್ ನೀಡಲಿದ್ದಾರೆ. ಮೈಕ್ರೋಸ್‌ಟಾ ಕಂಪನಿ ಕೆಲ ಕನಿಷ್ಠ ಗ್ರೇಷನ್‌ಗಳನ್ನು ಅಳವಡಿಸಲಿದೆ. ವಿದ್ಯಾರ್ಥಿಗೆ ಸಂಬಂಧಿಸಿದ ಪಠ್ಯದ ವಿಷಯಗಳು ಟ್ಯಾಬ್‌ನಲ್ಲಿಯೇ ತಿಳಿಯಬಹುದು.

ಮೈಕ್ರೋಸ್‌ಟಾ ಸಂಸ್ಥೆಯವರು ಬಿಬಿಎಂಪಿ ಶಾಲಾ- ಕಾಲೇಜುಗಳ ಕಟ್ಟಡ ರಿಪೇರಿ ಮತ್ತು ಬಣ್ಣ ಬಳಿಯಲು ತಿಳಿಸಿದ್ದಾರೆ. ಅದರಂತೆ ರಿಪೇರಿ ಕೆಲಸ ಮಾಡಲಾಗುವುದು. ಟಿ.ವಿ. ಅಳವಡಿಕೆ, ಡಿಜಿಟಲ್ ಕ್ಲಾಸ್ ನಿರ್ಮಾಣದ ಸಂಪೂರ್ಣ ವೆಚ್ಚ ಮೈಕ್ರೋಸ್‌ಟಾ ಮತ್ತು ಟೆಕ್ ಅವಂತ್ ಸಂಸ್ಥೆಗಳೇ ಭರಿಸಲಿವೆ. ಕ್ಲಾಸ್ ರೂಮ್‌ಗಳಲ್ಲಿ ರಿಮೋಟ್ ಮೂಲಕ ಬಾಗಿಲು ತೆರೆಯುವ ಮತ್ತು ಮುಚ್ಚವ ವ್ಯವಸ್ಥೆ ಮಾಡಲು ತೀರ್ಮಾನಿಸಿದೆ ಎಂದರು.

ರೋಶನಿ ಯೋಜನೆಯಡಿ ಪಾಲಿಕೆ ವ್ಯಾಪ್ತಿಯಲ್ಲಿ ಮೂರು ಶಾಲಾ-ಕಾಲೇಜು ಕಟ್ಟಡ ನಿರ್ಮಾಣವಾಗಲಿವೆ. ಒಂದೊಂದು ಕಟ್ಟಡ 40 ಕ್ಲಾಸ್ ರೂಮ್‌ಗಳನ್ನು ಒಳಗೊಂಡಿದ್ದು, ಕಟ್ಟಡದಲ್ಲಿ 1600 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಬಹುದು. ಕಟ್ಟಡ ನಿರ್ಮಾಣದ ಸಂಪೂರ್ಣ ವೆಚ್ಚ ಮೈಕ್ರೋಸ್‌ಟಾ ಸಂಸ್ಥೆಯವರೇ ಭರಿಸಲಿದ್ದಾರೆ. ಅತ್ಯಾಧುನಿಕ ಉಪಕರಣ ಅಳವಡಿಕೆ, 21ನೇ ಶತಮಾನದ ಶಿಕ್ಷಣಕ್ಕೆ ಬೇಕಾದ ಪರಿಕರ ಒಳಗೊಂಡಿರುತ್ತದೆ ಎಂದರು.

ಮೂರು ತಿಂಗಳಿಗೊಮ್ಮೆ ಮೇಯರ್, ಉಪಮೇಯರ್, ಆಡಳಿತ ಪಕ್ಷದ ನಾಯಕ, ವಿಪಕ್ಷ ನಾಯಕರ ಸಮ್ಮುಖದಲ್ಲಿ ಸಭೆ ನಡೆಯಲಿದೆ. ಯೋಜನೆಯಡಿ ಯಾವ-ಯಾವ ಕಾರ್ಯಗಳಾಗಿವೆ ಎಂಬ ಮಾಹಿತಿ ನೀಡಲಿದ್ದಾರೆ.

-ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News