×
Ad

ಮಾನವ ಕಳ್ಳ ಸಾಗಣೆ ಆರೋಪ: ಆರೋಪಿಗೆ ಜಾಮೀನು ನೀಡಲು ಹೈಕೋರ್ಟ್ ನಕಾರ

Update: 2019-05-10 22:15 IST

ಬೆಂಗಳೂರು, ಮೇ 10: ಮಾನವ ಕಳ್ಳ ಸಾಗಣೆ ಆರೋಪದಡಿ ಬಂಧಿತನಾಗಿರುವ ಮುಂಬೈನ ಅಬ್ದುಲ್ ಕರೀಂ ರೆಹಮಾನ್ ಖುರೇಷಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ. ಈ ಕುರಿತಂತೆ ಕಾಯ್ದಿರಿಸಲಾಗಿದ್ದ ಆದೇಶವನ್ನು ನ್ಯಾಯಮೂರ್ತಿ ಬಿ.ಎ.ಪಾಟೀಲ್ ಅವರು ಶುಕ್ರವಾರ ಪ್ರಕಟಿಸಿದರು. 

ಆರೋಪಿಯು ಕಮಿಷನ್ ಆಧಾರದಲ್ಲಿ ನಿರುದ್ಯೋಗಿ ಯುವಕರನ್ನು ಕೆನಡಾಕ್ಕೆ ಕಳುಹಿಸಿ ಹಣ ಸುಲಿಗೆ ಮಾಡುತ್ತಿದ್ದರು. ಹಾಗೊಂದು ಬಾರಿ ಹಣ ನೀಡದಿದ್ದರೆ, ಅವರನ್ನು ಕೊಂದು ಹಾಕುತ್ತಿದ್ದರು. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2017ರ ಡಿ.6ರಂದು ಪೊದೆಯಲ್ಲಿ ಪತ್ತೆಯಾಗಿದ್ದ ಅಮೃತಸರದ ಸುರಿಂದರ್‌ಸಿಂಗ್ ಎಂಬ ಯುವಕನ ಶವ ಪತ್ತೆ ಪ್ರಕರಣದಲ್ಲಿ ಖುರೇಷಿ ಆರೋಪಿಯಾಗಿದ್ದಾರೆ. ಕೆನಡಾದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 2017ರ ಡಿಸೆಂಬರ್‌ನಲ್ಲಿ ಖುರೇಷಿ ನೇತೃತ್ವದ ಗ್ಯಾಂಗ್ ಪಂಜಾಬ್‌ನ ಸುರಿಂದರ್ ಸಿಂಗ್, ಗುರುಪ್ರೀತ್‌ಸಿಂಗ್ ಹಾಗೂ ಮನಪ್ರೀತ್ ಸಿಂಗ್ ಎಂಬುವರನ್ನು ಬೆಂಗಳೂರಿಗೆ ಕರೆತಂದಿತ್ತು. ಇಲ್ಲಿ ಕೆಐಎಎಲ್ ಸಮೀಪದ ಖಾಸಗಿ ಹೊಟೇಲ್‌ವೊಂದರಲ್ಲಿ ಮೂವರನ್ನು ಕೂಡಿ ಹಾಕಿ ಚಿತ್ರಹಿಂಸೆ ನೀಡಿತ್ತು. ಅಲ್ಲದೆ, ಆರೋಪಿಗಳ ಸೂಚನೆಯಂತೆ ತಮ್ಮ ಪೋಷಕರಿಗೆ ಕರೆ ಮಾಡಿದ್ದ ಗುರುಪ್ರೀತ್ ಸಿಂಗ್ ಹಾಗೂ ಮನಪ್ರೀತ್‌ಸಿಂಗ್, ನಾವು ಸುರಕ್ಷಿತವಾಗಿ ಕೆನಡಾ ತಲುಪಿದ್ದೇವೆ. ಟ್ರಾವೆಲ್ ಏಜೆಂಟರಿಗೆ 44 ಲಕ್ಷ ಕೊಡಬೇಕು. ಈ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿ ಎಂದು ಖಾತೆ ಸಂಖ್ಯೆಯನ್ನು ಹೇಳಿದ್ದರು. ಅವರು ಹಣ ಹಾಕುತ್ತಿದ್ದಂತೆಯೇ ಇಬ್ಬರನ್ನೂ ಬಂಧಮುಕ್ತಗೊಳಿಸಿದ್ದ ಆರೋಪಿಗಳು, ವಿಷಯ ಬಹಿರಂಗಪಡಿಸಿದರೆ ಜೀವ ತೆಗೆಯುವುದಾಗಿ ಬೆದರಿಸಿ ಕಳುಹಿಸಿದ್ದರು. ಆದರೆ, ಸುರಿಂದರ್ ಸಿಂಗ್, ಪೋಷಕರಿಗೆ ಕರೆ ಮಾಡಲು ಒಪ್ಪಿರಲಿಲ್ಲ ಎನ್ನಲಾಗಿದ್ದು, ಇದರಿಂದ ಕುಪಿತಗೊಂಡ ಖುರೇಷಿ ಗ್ಯಾಂಗ್, ಅವರನ್ನು ಹೊಡೆದು ಕೊಂದು ರಾಮನಗರದಲ್ಲಿ ಶವ ಬಿಸಾಡಿ ಪರಾರಿಯಾಗಿತ್ತು ಎಂದು ಆರೋಪಿಸಲಾಗಿದೆ. 

ಪ್ರಕರಣ ದಾಖಲಿಸಿಕೊಂಡ ರಾಮನಗರ ಠಾಣಾ ಪೊಲೀಸರು ಅಪರಿಚಿತ ಶವವೊಂದು ಪತ್ತೆಯಾಗಿರುವ ಬಗ್ಗೆ ವೆಬ್‌ಸೈಟ್‌ನಲ್ಲಿ ಚಿತ್ರ ಸಮೇತ ವಿವರ ಪ್ರಕಟಿಸಿದ್ದರು. ಹೊಸದಿಲ್ಲಿ, ಪಂಜಾಬ್ ಹಾಗೂ ಬೆಂಗಳೂರಿನ ಸಿಐಡಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮುಂಬೈನ ಅಬ್ದುಲ್ ಕರೀಂ ಖುರೇಷಿ ಹಾಗೂ ಆತನ ಒಂಬತ್ತು ಮಂದಿ ಸಹಚರರನ್ನು ಬಂಧಿಸಿ ಪರಪ್ಪನ ಅಗ್ರಾರ ಕಾರಾಗೃಹಕ್ಕೆ ಕಳುಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News