×
Ad

ಹಡ್ಸನ್ ಸರ್ಕಲ್‌ನಲ್ಲಿ ‘ಏರ್ ಪ್ಯೂರಿಫೈಯರ್’

Update: 2019-05-10 22:30 IST

ಬೆಂಗಳೂರು, ಮೇ 10: ದಿನೇ ದಿನೇ ಅಧಿಕವಾಗುತ್ತಿರುವ ವಾಯುಮಾಲಿನ್ಯ ತಡೆಗಟ್ಟಿ, ಶುದ್ಧ ಗಾಳಿ ಹೊರಬಿಡುವ ಯಂತ್ರಗಳು (ಏರ್ ಪ್ಯೂರಿಫೈಯರ್) ರಾಜ್ಯ ರಾಜಧಾನಿ ಬೆಂಗಳೂರಿಗೆ ಲಗ್ಗೆ ಇಟ್ಟಿವೆ.

ಇವು ಮಾಲಿನ್ಯವನ್ನು ಹೀರಿಕೊಂಡು ಶುದ್ಧೀಕರಿಸಿದ ಬಳಿಕ ಶುದ್ಧ ಗಾಳಿಯನ್ನು ಹೊರ ಹಾಕಲಿವೆ. ಈಗಾಗಲೇ ಕಬ್ಬನ್‌ಪಾರ್ಕ್‌ನಲ್ಲಿ ಎರಡು ಗಾಳಿ ಶುದ್ಧೀಕರಣ ಘಟಕಗಳನ್ನು ತೋಟಗಾರಿಕೆ ಇಲಾಖೆಯು ಎರಡು ತಿಂಗಳ ಹಿಂದೆಯೇ ಅಳವಡಿಸಿದೆ. ಈಗ ‘ಎ ಟೆಕ್ ಟ್ರೊನ್’ ಎಂಬ ಕಂಪೆನಿಯು ಬಿಬಿಎಂಪಿ ಸಹಯೋಗದೊಂದಿಗೆ ಹಡ್ಸನ್ ವೃತ್ತದ ಪೊಲೀಸ್ ಚೌಕಿ ಪಕ್ಕ ಪ್ರಾಯೋಗಿಕವಾಗಿ ಈ ಯಂತ್ರ ಅಳವಡಿಸಿದೆ.

ಘಟಕದ ಕಾರ್ಯ?: ನಗರದಲ್ಲಿ ಅಧಿಕ ವಾಹನಗಳ ಸಂಚಾರ, ಅದರಿಂದ ಉಂಟಾಗುವ ಹೊಗೆ, ಕಟ್ಟಡ ನಿರ್ಮಾಣದಿಂದ ಶೇ. 70ರಷ್ಟು ರಸ್ತೆ ಧೂಳು ಮಾಲಿನ್ಯ ಆಗುತ್ತಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಸಮೀಕ್ಷೆ ತಿಳಿಸಿದೆ. ಆದರೆ, ವಾಯುಮಾಲಿನ್ಯ ಶುದ್ಧೀಕರಣ ಘಟಕವು ಮಾಲಿನ್ಯಕಾರಕ ಧೂಳಿನ ಕಣಗಳಾದ ಪಿಎಂ 2.5, ಪಿಎಂ 10, ವಾಹನಗಳು ಉಗುಳುವ ಹೊಗೆಯನ್ನು ಹೀರಿಕೊಂಡು 6 ಹಂತಗಳಲ್ಲಿ ಶುದ್ಧೀಕರಿಸಲಾಗಿದೆ ಎನ್ನುತ್ತಾರೆ ಎ ಟೆಕ್ ಟ್ರೊನ್ ಸಂಸ್ಥೆಯ ಸಂಸ್ಥಾಪಕ ರಾಜೀವ್ ಕೃಷ್ಣ.

ನೆಲ ಮಟ್ಟದದಿಂದ ಆರೂವರೆ ಅಡಿ ಎತ್ತರವಿರುವ ಯಂತ್ರವು, ಮೇಲ್ಭಾಗದಿಂದ ಹೊಗೆ, ಧೂಳಿನ ಕಣಗಳನ್ನು ಹೀರಿಕೊಳ್ಳುತ್ತದೆ. ಯಂತ್ರದಲ್ಲಿ ಒಟ್ಟು 6 ಹಂತದ ಫಿಲ್ಟರ್ ವ್ಯವಸ್ಥೆ ಅಳವಡಿಸಲಾಗಿದೆ. ಇವು ಧೂಳಿನ ಕಣಗಳು, ಹೊಗೆಯನ್ನು ಹೀರಿಕೊಂಡು, ಶುದ್ಧ ಗಾಳಿಯನ್ನು ಹೊರ ಬಿಡುತ್ತವೆ. ಒಂದು ನಿಮಿಷಕ್ಕೆ 3,500 ಕ್ಯೂಬಿಕ್ ಅಡಿವರೆಗಿನ ಮಾಲಿನ್ಯವನ್ನು ಹೀರಿಕೊಂಡು, ಶುದ್ಧೀಕರಿಸಲಾಗುತ್ತದೆ. ಈ ಯಂತ್ರದಿಂದ ಯಾವುದೇ ರೀತಿಯ ಶಬ್ದಮಾಲಿನ್ಯ ಉಂಟಾಗುವುದಿಲ್ಲ. ಯಂತ್ರದ ಕಾರ್ಯ ನಿರ್ವಹಣೆಗೆ ಒಂದು ಗಂಟೆಗೆ ಕೇವಲ ಅರ್ಧ ಕಿಲೋ ವ್ಯಾಟ್ ವಿದ್ಯುತ್ ಸಾಕು ಎಂದು ಅವರು ವಿವರಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ಸಾವಿರ ಜಂಕ್ಷನ್‌ಗಳಲ್ಲಿ ಘಟಕ ಅಳವಡಿಸಲು ಪಾಲಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೆ, ಪುಣೆ, ಮುಂಬಯಿ ಮೆಟ್ರೊ ನಿಲ್ದಾಣ ಮತ್ತು ನೇಪಾಳದ ವಿಮಾನ ನಿಲ್ದಾಣಗಳಲ್ಲಿ ವಾಯುಮಾಲಿನ್ಯ ಶುದ್ಧೀಕರಣ ಘಟಕಗಳನ್ನು ಅಳವಡಿಸಿ ಯಶಸ್ವಿಯಾಗಿದ್ದೇವೆ ಎಂದರು.

45.6 ಕೆ.ಜಿ.ಧೂಳು: 20 ದಿನಗಳಿಗೆ ಅಂದಾಜು 2.5 ಕೆ.ಜಿ. ಯಷ್ಟು ಧೂಳಿನ ಕಣವನ್ನು ಸಂಗ್ರಹಿಸಬಹುದು. ಅಂದರೆ ವರ್ಷಕ್ಕೆ 45.6 ಕೆ.ಜಿ.ಯಷ್ಟು ಧೂಳು ಸಂಗ್ರಹವಾಗುತ್ತದೆ. ಆದರೆ, ನಗರದಲ್ಲಿ ಇರುವ ಧೂಳಿನ ಕಣಗಳನ್ನು ಸಂಗ್ರಹಿಸಲು 4,67,105 ಏರ್ ಪ್ಯೂರಿಫೈಯರ್ ಸಾಧನಗಳು ಬೇಕು.

ಆ ಪ್ರಮಾಣದ ಸಾಧನಗಳಿಗೆ ಕೋಟ್ಯಂತರ ರೂ.ಗಳು ಬೇಕಾಗುತ್ತದೆ. ಒಂದು ಏರ್ ಪ್ಯೂರಿಫೈಯರ್‌ಗೆ 2 ರಿಂದ 3 ಲಕ್ಷ ರೂ. ಆಗಬಹುದು ಎಂದು ಅಂದಾಜಿಸಲಾಗಿದ್ದು, ಬಿಬಿಎಂಪಿ ಮೀಸಲಿಟ್ಟಿರುವ 5 ಕೋಟಿಯಲ್ಲಿ 200 ರಿಂದ 210 ಏರ್ ಪ್ಯೂರಿಫೈಯರ್ ಮಾತ್ರ ಖರೀದಿಸಬಹುದು. ಇದು ನಗರದ ಯಾವ ಮೂಲೆಗೂ ಸಾಲದು ಎನ್ನುತ್ತಾರೆ ತಜ್ಞರು.

ಏನಿದು ಏರ್ ಪ್ಯೂರಿಫೈಯರ್?

ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ವಾಯುಮಾಲಿನ್ಯ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು, ಇದನ್ನು ಕಡಿಮೆ ಮಾಡಲು ಹುಟ್ಟಿಕೊಂಡ ಹೊಸ ಸಾಧನವಿದು. ಇದು ಮನೆಯ ವ್ಯಾಕ್ಯೂಮ್ ಕ್ಲೀನರ್‌ನ ರೀತಿಯಲ್ಲಿ ಕೆಲಸ ಮಾಡುತ್ತದೆ. ಧೂಳನ್ನು ಹೀರಿಕೊಳ್ಳುತ್ತದೆ. ಉಳಿದ ಶುದ್ಧ ಗಾಳಿ ಹೊರ ಬರುತ್ತದೆ.

‘ಶೀಘ್ರದಲ್ಲಿಯೇ ವರದಿ’

ಶೀಘ್ರದಲ್ಲಿಯೇ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ವರದಿ ನೀಡಲಿದೆ. ವರದಿಯಲ್ಲಿನ ಸಾಧಕ-ಭಾದಕಗಳನ್ನು ಗಮನಿಸಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಏರ್ ಪ್ಯೂರಿಫೈಯರ್ ಸಾಧನ ಅಳವಡಿಸುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು. 

-ಚಂದ್ರಶೇಖರ್, ಬಿಬಿಎಂಪಿ ಕಾರ್ಯಪಾಲಕ ಇಂಜಿನಿಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News