ಒಂದೇ ದಿಕ್ಕಿನತ್ತ ಓಡಿದರೂ ರನೌಟ್‌ನಿಂದ ಬಚಾವಾದ ಪ್ಲೆಸಿಸ್, ವಾಟ್ಸನ್!

Update: 2019-05-11 07:22 GMT

ವಿಶಾಖಪಟ್ಟಣ, ಮೇ 11: ಐಪಿಎಲ್‌ನ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸಂಪೂರ್ಣ ಪ್ರಾಬಲ್ಯ ಮೆರೆದಿದ್ದ ಧೋನಿ ನಾಯತ್ವದ ಚೆನ್ನೈ ಸೂಪರ್ ಕಿಂಗ್ಸ್ 8ನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಆದರೆ, ಚೆನ್ನೈ ಗೆಲ್ಲಲು 148 ರನ್ ಚೇಸಿಂಗ್ ಮಾಡುತ್ತಿದ್ದಾಗ ಮೊದಲ ಓವರ್‌ನಲ್ಲೇ ಚೆನ್ನೈ ಆರಂಭಿಕ ಆಟಗಾರರಾದ ಎಫ್‌ಡು ಪ್ಲೆಸಿಸ್ ಹಾಗೂ ಶೇನ್ ವಾಟ್ಸನ್ ರನ್ ಗಳಿಸುವ ಧಾವಂತದಲ್ಲಿ ಗೊಂದಲಕ್ಕೆ ಒಳಗಾಗಿ ಒಂದೇ ದಿಕ್ಕಿನತ್ತ ಓಡಿದರು. ಡೆಲ್ಲಿ ಆಟಗಾರರು ಕೂಡ ಗೊಂದಲಕ್ಕೆ ಒಳಗಾದ ಕಾರಣ ಪ್ಲೆಸಿಸ್-ವಾಟ್ಸನ್ ಸಂಭಾವ್ಯ ರನೌಟ್‌ನಿಂದ ಬಚಾವಾದರು.

ಟ್ರೆಂಟ್ ಬೌಲ್ಟ್ ಎಸೆದ ಮೊದಲ ಓವರ್‌ನ 3ನೇ ಎಸೆತದಲ್ಲಿ ಈ ಗೊಂದಲ ಉಂಟಾಯಿತು. ಆ ನಂತರ ಎಚ್ಚರಿಕೆಯಿಂದ ಆಡಿದ ಪ್ಲೆಸಿಸ್(50 ರನ್, 39 ಎಸೆತ) ಹಾಗೂ ವಾಟ್ಸನ್(50 ರನ್, 32 ಎಸೆತ)ಮೊದಲ ವಿಕೆಟ್‌ಗೆ 81 ರನ್ ಜೊತೆಯಾಟ ನಡೆಸಿ ಸಿಎಸ್‌ಕೆ ಐಪಿಎಲ್‌ನಲ್ಲಿ 100ನೇ ಗೆಲುವು ದಾಖಲಿಸಲು ಭದ್ರಬುನಾದಿ ಹಾಕಿಕೊಟ್ಟರು.

ಚೆನ್ನೈ ತಂಡ ರವಿವಾರ ಹೈದರಾಬಾದ್‌ನಲ್ಲಿ ನಡೆಯುವ ಫೈನಲ್‌ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.

2008ರಲ್ಲಿ ಐಪಿಎಲ್ ಆರಂಭವಾದ ಬಳಿಕ ಉಭಯ ತಂಡಗಳು ತಲಾ 3 ಬಾರಿ ಐಪಿಎಲ್ ಟ್ರೋಫಿ ಜಯಿಸಿದ್ದು, ವಿಶ್ವದ ಅತ್ಯಂತ ಜನಪ್ರಿಯ ಟಿ-20 ಟೂರ್ನಮೆಂಟ್‌ನಲ್ಲಿ ಪ್ರಾಬಲ್ಯ ಸಾಧಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News