ಹಿಮಾ ದಾಸ್‌ಗೆ ಅನಾರೋಗ್ಯ: ಭಾರತೀಯ ಅಥ್ಲೆಟಿಕ್ಸ್ ತಂಡದಲ್ಲಿ ಕಳವಳ

Update: 2019-05-11 18:41 GMT

ಯೊಕೊಹಮ,ಮೇ.12: ಭಾರತದ 4x 400ಮೀ. ಮಹಿಳಾ ತಂಡದ ತಾರಾ ಅಥ್ಲೀಟ್ ಹಿಮಾ ದಾಸ್ ಸದ್ಯ ಬೆನ್ನಿನ ಸ್ನಾಯು ಸೆಳೆತದಿಂದ ಇನ್ನೂ ಸಂಪೂರ್ಣ ಗುಣಮುಖರಾಗದಿರುವುದು ಜಪಾನ್‌ನ ಯೊಕೊಹಮದಲ್ಲಿ ಮೇ 13ರಂದು ನಡೆಯಲಿರುವ ರಿಲೆಯಲ್ಲಿ ಗೆಲುವು ಸಾಧಿಸುವ ಭಾರತದ ಕನಸನ್ನು ಭಗ್ನಗೊಳಿಸಿದೆ. ಆ ಮೂಲಕ 2020ರ ಟೋಕಿಯೊ ಒಲಿಂಪಿಕ್ಸ್‌ಗೆ ನೇರ ಪ್ರವೇಶ ಪಡೆಯುವ ಅವಕಾಶದಿಂದ ವಂಚಿತವಾಗುವ ಸಾಧ್ಯತೆಯೂ ಇದೆ.

ಹಿಮಾ ದಾಸ್ ಸ್ಥಾನದಲ್ಲಿ ಇತರರನ್ನು ಟ್ರಾಕ್‌ಗೆ ಇಳಿಸಲು ತಂಡದ ಮುಖ್ಯಸ್ಥರು ನಿರ್ಧರಿಸಿದ್ದಾರೆ. ಆದರೆ ಸದ್ಯ 50.79 ಸೆಕೆಂಡ್‌ಗಳ ದಾಖಲೆ ಹೊಂದಿರುವ ದಾಸ್ ಅನುಪಸ್ಥಿತಿಯಿಂದಾಗಿ ತಂಡ ಮುನ್ನಡೆ ಸಾಧಿಸುವುದು ಕಷ್ಟ ಎನ್ನುವುದು ಎಲ್ಲರ ಅಭಿಪ್ರಾಯವಾಗಿದೆ. ಆದರೆ ಸದ್ಯ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿರುವ ಹಿಮಾ ದಾಸ್ ಮೇ 13ರಂದು ನಡೆಯಲಿರುವ ರಿಲೆಯಲ್ಲಿ ಭಾಗವಹಿಸುವುದಾಗಿ ಹೇಳಿಕೆ ನೀಡಿದ್ದಾರೆ. ಅಸ್ಸಾಂನ ದಿಂಗ್ ಜಿಲ್ಲೆಯವರಾಗಿರುವ ಮತ್ತು ದಿಂಗ್ ಎಕ್ಸ್ ಪ್ರೆಸ್ ಎಂದೇ ಕರೆಯಲ್ಪಡುವ ಹಿಮಾ ದಾಸ್ ಈ ವಾರದ ಆರಂಭದಲ್ಲಿ ಯೊಕೊಹಮದಲ್ಲಿ ತಂಡದ ಇತರ ಅಥ್ಲೀಟ್‌ಗಳ ಜೊತೆ ಅಭ್ಯಾಸ ನಡೆಸಿದ್ದರು. ಆದರೆ ಅವರ ದೈಹಿಕ ಸ್ಥಿತಿಯನ್ನು ಗಮನಿಸಿ ಅವರಿಗೆ ರಿಲೆಯಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರಬಹುದು ಎಂದು ಭಾವಿಸಲಾಗಿತ್ತು.

ತನ್ನ ಹೇಳಿಕೆಯ ವೀಡಿಯೊ ಸಂದೇಶ ಹರಿಯಬಿಟ್ಟಿರುವ ಹಿಮಾ ದಾಸ್, ಗೆಳೆಯರೇ, ನಾನು ಮೇ 13ರಂದು ನಡೆಯುವ ರಿಲೆಯಲ್ಲಿ ಭಾಗವಹಿಸುತ್ತಿದ್ದೇನೆ. ನನಗಾಗಿ ದೇವರಲ್ಲಿ ಪ್ರಾರ್ಥಿಸಿ. ಪ್ರೀತಿ ಇರಲಿ ಎಂದು ಮನವಿ ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News