ಎರಡನೆ ಪತ್ನಿಯ ಮಕ್ಕಳೂ ಅನುಕಂಪದ ಆಧಾರದ ಸರಕಾರಿ ನೌಕರಿಗೆ ಅರ್ಹರು: ಹೈಕೋರ್ಟ್ ಮಹತ್ವದ ತೀರ್ಪು

Update: 2019-05-12 12:12 GMT

ಬೆಂಗಳೂರು, ಎ.12: ಎರಡನೆ ಪತ್ನಿಯ ಮಕ್ಕಳು ಅನುಕಂಪದ ಆಧಾರದಲ್ಲಿ ಸರಕಾರಿ ನೌಕರಿ ಪಡೆಯಲು ಅರ್ಹ ರಾಗಿರುತ್ತಾರೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. 

ಎರಡನೆ ಪತ್ನಿಯ ಮಗನಿಗೆ ಅನುಕಂಪದ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅವಕಾಶವಿಲ್ಲ ಎಂಬ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ(ಬಿಡಿಎ) ಆದೇಶ ಪ್ರಶ್ನಿಸಿ ವಿ.ಲೋಹಿತ್‌ಗೌಡ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಕಳೆದ ತಿಂಗಳ 25ರಂದು ಮಾನ್ಯ ಮಾಡಿದೆ.

ಪ್ರಕರಣವೇನು: ನನ್ನ ತಂದೆ ಎಚ್.ವರದೇಗೌಡ ಬಿಡಿಎ ಕಚೇರಿಯಲ್ಲಿ ಮೂಲಸೌಕರ್ಯ-2ರ ವಿಭಾಗದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ಅವರು 2013ರ ಜ.26ರಂದು ನಿಧನರಾಗಿದ್ದಾರೆ. ಅವರಿಗೆ ಇಬ್ಬರು ಪತ್ನಿಯರು. ಮೊದಲ ಪತ್ನಿ ವಿಚ್ಛೇದನ ಪಡೆದಿದ್ದಾರೆ. ನಾನು ಎರಡನೆ ಪತ್ನಿಯ ಮಗ. ನನಗೊಬ್ಬಳು ಒಡಹುಟ್ಟಿದ ಸಹೋದರಿ ಇದ್ದಾಳೆ. ತಾಯಿಯೂ ನಮ್ಮ ಜೊತೆಗಿದ್ದಾರೆ. ನನಗೀಗ 23 ವರ್ಷ. ತಾಯಿಗೆ ಉದ್ಯೋಗವಿಲ್ಲ. ನನಗೆ ಅನುಕಂಪದ ಆಧಾರದಲ್ಲಿ ನೌಕರಿ ಕೊಡಬೇಕು ಎಂದು 2013ರ ಮಾ.16ರಂದು ಬಿಡಿಎ ಆಯುಕ್ತರಿಗೆ ಮನವಿ ಮಾಡಿದ್ದೆ ಎಂದು ಲೋಹಿತ್‌ಗೌಡ ರಿಟ್ ಅರ್ಜಿಯಲ್ಲಿ ವಿವರಿಸಿದ್ದರು. ಆದರೆ, ಈ ಮನವಿಯನ್ನು ತಿರಸ್ಕರಿಸಲಾಗಿತ್ತು.

ರಾಜ್ಯ ಸರಕಾರ 2015ರ ಆ.28ರಂದು ಹೊರಡಿಸಿರುವ ಸುತ್ತೋಲೆಯಂತೆ, ನೀವು ಅನುಕಂಪದ ಆಧಾರದ ನೇಮಕಾತಿಗೆ ಅರ್ಹರಲ್ಲ ಎಂದು ತಿಳಿಸಲಾಗಿತ್ತು. ಸರಕಾರಿ ನೌಕರ, ಸೇವಾವಧಿಯಲ್ಲಿ ಎರಡನೆ ಮದುವೆಯಾದರೆ ಆ ಪತ್ನಿಗೆ ಜನಿಸಿದ ಮಕ್ಕಳು ಕಾನೂನು ಮಾನ್ಯತೆ ಪಡೆಯುತ್ತಾರಾದರೂ ಕುಟುಂಬ ಸದಸ್ಯರ ವ್ಯಾಖ್ಯಾನದ ಪರಿಧಿಯೊಳಗೆ ಬರುವುದಿಲ್ಲ ಎಂದು ಸ್ಪಷ್ಟನೆ ನೀಡಲಾಗಿತ್ತು. ಅರ್ಜಿದಾರರು ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಲೋಹಿತ್‌ಗೌಡ ಪರ ವಾದ ಮಂಡಿಸಿದ್ದ ವಕೀಲ ಎಂ.ಷಣ್ಮುಖಪ್ಪ ಅವರು, ವರದೇಗೌಡ ಅವರ ಮೊದಲ ಪತ್ನಿ ವಿಚ್ಛೇದನ ಪಡೆದಿದ್ದಾರೆ ಮತ್ತು ಅವರಿಗೊಬ್ಬ ಪುತ್ರಿಯಿದ್ದಾರೆ. ಲೋಹಿತ್‌ಗೌಡ ಅನುಕಂಪದ ಆಧಾರದಲ್ಲಿ ನೌಕರಿ ಪಡೆಯಲು ಅವರಿಂದ ಯಾವುದೇ ತಕರಾರು ಇರುವುದಿಲ್ಲ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದಿದ್ದರು. ಇದಕ್ಕೆ ಪೂರಕವಾಗಿ, ಕೇಂದ್ರ ಸರಕಾರ ವರ್ಸ್‌ಸ್ ವಿ.ಆರ್.ತ್ರಿಪಾಠಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನೂ ಉಲ್ಲೇಖಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News