ಗುತ್ತಿಗೆದಾರರು-ಅಧಿಕಾರಿಗಳ ಬೆನ್ನು ಬಿದ್ದಿರುವ ಬಿಎಸ್‌ವೈ: ಡಿ.ಕೆ.ಶಿವಕುಮಾರ್ ಆರೋಪ

Update: 2019-05-12 12:49 GMT

ಬೆಂಗಳೂರು, ಮೇ 12: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದು, ಅವರ ಬೆನ್ನು ಬಿದ್ದು ಪ್ರತಿನಿತ್ಯ ಅವರಿಗೆ ದೂರವಾಣಿ ಕರೆಗಳನ್ನು ಮಾಡುತ್ತಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಆರೋಪಿಸಿದರು.

ರವಿವಾರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರಕಾರ ಬರುತ್ತದೆ, ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಮೇಲೆ ಪ್ರಭಾವ ಬೀರಲು ಯಡಿಯೂರಪ್ಪ ಯತ್ನಿಸುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಯಡಿಯೂರಪ್ಪ, ಈ ಸರಕಾರವನ್ನು ಪತನ ಮಾಡಿ, ನಾವು ಅಧಿಕಾರಕ್ಕೆ ಬರುತ್ತೇವೆ. ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿಕೊಂಡೆ ತಿರುಗಾಡುತ್ತಿದ್ದಾರೆ. ಅವರ ಕನಸು ನನಸಾಗುವುದಿಲ್ಲ ಎಂದು ಅವರು ಟೀಕಿಸಿದರು.

ಕಾಂಗ್ರೆಸ್ ಪಕ್ಷದ ಯಾವ ಶಾಸಕರೂ ಬಿಜೆಪಿಗೆ ಹೋಗುವುದಿಲ್ಲ. ಹೋಗಬೇಕಾಗಿರುವವರು ಈಗಾಗಲೇ ರಾಜೀನಾಮೆ ನೀಡಿ ಹೋಗಿದ್ದಾರೆ. ಅವರ ಪಕ್ಷದ ಶಾಸಕರು ನಮ್ಮ ಸಂಪರ್ಕದಲ್ಲಿರುವ ವಿಚಾರದ ಕುರಿತು ನಾನು ಈ ಹಂತದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದು ಶಿವಕುಮಾರ್ ತಿಳಿಸಿದರು.

ಮೈತ್ರಿ ಸರಕಾರಕ್ಕೆ ಯಾವುದೇ ಅಪಾಯವಿಲ್ಲ. ಐದು ವರ್ಷಗಳ ಆಡಳಿತವನ್ನು ಈ ಸರಕಾರ ಪೂರೈಸಲಿದೆ ಎಂದು ನಮ್ಮ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಿನ್ನೆಯೇ ಸ್ಪಷ್ಟಪಡಿಸಿದ್ದಾರೆ. ಅವರ ಮಾತಿಗೆ ನಮ್ಮೆಲ್ಲರ ಸಹಕಾರ, ಬೆಂಬಲವಿದೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೆಸಾರ್ಟ್‌ನಲ್ಲಿ ವಿಶ್ರಾಂತಿ ಪಡೆಯುತ್ತಿರುವ ವಿಚಾರದ ಕುರಿತು ಟೀಕಿಸಿ ಬಿಜೆಪಿ ಮಾಡಿರುವ ಟ್ವಿಟ್‌ಗೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಮುಖ್ಯಮಂತ್ರಿ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ಚಿಕಿತ್ಸೆಗಾಗಿ ರೆಸಾರ್ಟ್‌ಗೆ ಹೋಗಿರುವ ಅವರು, ವಾಪಸ್ ಬಂದು ಸಚಿವ ಸಂಪುಟ ಸಭೆಯನ್ನು ಮಾಡಿದ್ದಾರೆ ಎಂದರು.

ವಿಶ್ರಾಂತಿ ಇಲ್ಲದೆ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿ, ಒಂದೆರೆಡು ದಿನಗಳ ಕಾಲ ವಿಶ್ರಾಂತಿ ಪಡೆದರೆ ತಪ್ಪೇನು. ಬಿಜೆಪಿಯವರು ಎಲ್ಲ ವಿಚಾರದಲ್ಲೂ ತಪ್ಪುಗಳನ್ನು ಹುಡುಕುತ್ತಿರುತ್ತಾರೆ. ಬಿಜೆಪಿಯವರನ್ನು ಕೇಳಿ ನಾವು ಸರಕಾರ ನಡೆಸಬೇಕೆ ಎಂದು ಶಿವಕುಮಾರ್ ತಿರುಗೇಟು ನೀಡಿದರು.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತನ್ನನ್ನು ಪೇಪರ್ ಸಿಂಹ ಎಂದು ಟೀಕಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಯಾರು ಹೇಳಿದ್ದು ನಾನು ಟೈಗರ್ ಅಂತ, ನಾನು ಪೇಪರೂ ಅಲ್ಲ, ಟೈಗರೂ ಅಲ್ಲ. ನಾನೊಬ್ಬ ಕಾಂಗ್ರೆಸ್ ಕಾರ್ಯಕರ್ತ. ಪಕ್ಷ ವಹಿಸುವ ಜವಾಬ್ದಾರಿಯನ್ನು ನಿರ್ವಹಿಸುವುದಷ್ಟೇ ನನ್ನ ಕೆಲಸ ಎಂದರು.

ಮಹಾರಾಷ್ಟ್ರದ ಕೊಯ್ನ ಜಲಾಶಯದಿಂದ ರಾಜ್ಯಕ್ಕೆ ನೀರು ಬಿಡುಗಡೆ ಮಾಡುವ ವಿಚಾರದ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ನಮ್ಮ ಬಳಿ ಹಣ ಪಡೆದುಕೊಂಡು ನೀರು ಬಿಡುತ್ತಿದ್ದರು. ಆದರೆ, ಈಗ ನೀರಿನ ಬದಲು ನೀರು ಬಿಡಲು ಸಿದ್ಧವಾಗಿದ್ದಾರೆ ಎಂದು ಅವರು ಹೇಳಿದರು.

ನೀರಿನ ಬದಲು ನೀರು ಬಿಡುವ ಕುರಿತು ಒಪ್ಪಂದಕ್ಕೆ ಸಹಿ ಮಾಡಲು ನಮ್ಮ ಸರಕಾರ ಸಿದ್ಧವಾಗಿದೆ. ನೀರಿನ ಸಮಸ್ಯೆ ಗಂಭೀರವಾಗಿರುವುದರಿಂದ, ಮಾನವೀಯ ದೃಷ್ಟಿಯಿಂದ ನೀರು ಬಿಡುವಂತೆ ಮಹಾರಾಷ್ಟ್ರ ಸರಕಾರಕ್ಕೆ ಮನವಿ ಮಾಡಿದ್ದೇವೆ. ಆದರೆ, ಈವರೆಗೆ ನೀರು ಬಿಟ್ಟಿಲ್ಲ. ಮಹಾರಾಷ್ಟ್ರ ಸರಕಾರ ಯಾಕೆ ಈ ರೀತಿ ನಡೆದುಕೊಳ್ಳುತ್ತಿದೆ ಅನ್ನೋದು ಗೊತ್ತಾಗುತ್ತಿಲ್ಲ ಎಂದು ಶಿವಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News