ವಚನ ಸಾಹಿತ್ಯದ ವೈಜ್ಞಾನಿಕ ಅಂಶ ಅಧ್ಯಯನವಾಗಲಿ: ಇಸ್ರೋ ಮಾಜಿ ಅಧ್ಯಕ್ಷ ಡಾ.ಕಿರಣ್ ಕುಮಾರ್

Update: 2019-05-12 15:19 GMT

ಬೆಂಗಳೂರು, ಮೇ.12: ವಚನ ಸಾಹಿತ್ಯದಲ್ಲಿ ಅಡಗಿರುವ ವೈಜ್ಞಾನಿಕ ಅಂಶಗಳ ಅಧ್ಯಯನ ನಡೆಸುವುದು ಅತ್ಯಗತ್ಯ ಎಂದು ಇಸ್ರೋ ಮಾಜಿ ಅಧ್ಯಕ್ಷ ಡಾ.ಕಿರಣ್ ಕುಮಾರ್ ಅಭಿಪ್ರಾಯಪಟ್ಟರು.

ರವಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಬಸವ ವೇದಿಕೆ ಆಯೋಜಿಸಿದ್ದ ಬಸವ ಜಯಂತಿ, ಬಸವಶ್ರೀ ಪ್ರಶಸ್ತಿ ಮತ್ತು ವಚನ ಸಾಹಿತ್ಯಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಬಸವಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ವಚನ ಸಾಹಿತ್ಯದಲ್ಲಿ ಅಡಗಿರುವ ಅಂಶಗಳನ್ನು ಜನ ಪಾಲಿಸಿದ್ದೇ ಆದರೆ ಭಾರತ ವಿಶ್ವದ ಗುರುವಾಗುವಲ್ಲಿ ಸಂದೇಹವೇ ಇಲ್ಲ. ಜ್ಞಾನ, ತಂತ್ರಜ್ಞಾನ ಹಾಗೂ ಕೌಶಲ್ಯವನ್ನು ಬಳಸಿ ಸಮಾಜಕ್ಕೆ ಉಪಯುಕ್ತ ಸೇವೆ ಹಾಗೂ ಸಂದೇಶಗಳನ್ನು ನೀಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಈ ನಿಟ್ಟಿನಲ್ಲಿ ಇಸ್ರೋ ಇಂದು ಮಹತ್ವದ ಸಾಧನೆಯತ್ತ ಹೆಜ್ಜೆ ಇರಿಸಿದೆ. ಇಸ್ರೋದಿಂದ ಉಡಾಯಿಸಿರುವ 4 ಉಪಗ್ರಹಗಳಿಂದ ವಿಶ್ವದ ಯಾವುದೇ ಭಾಗದಲ್ಲಿನ ಚಿತ್ರಣವನ್ನು ಒಂದು ನಿಮಿಷಗಳ ಕಾಲ ನೋಡಬಹುದಾದ ವ್ಯವಸ್ಥೆ ಸಾಧ್ಯವಾಗಿದೆ. ಪ್ರತಿ 15 ನಿಮಿಷಗಳಿಗೊಮ್ಮೆ ಭೂಮಿಯ ಮೇಲಿನ ಚಿತ್ರಗಳನ್ನು ಬೇರೆ ಬೇರೆ ತರಂಗಾಂತರಗಳಿಂದ ನೋಡಿ ಹವಾಮಾನ ಇಲಾಖೆಗೆ ಮಾಹಿತಿ ಒದಗಿಸಬಹುದಾಗಿದೆ ಎಂದು ತಿಳಿಸಿದರು.

ಇಸ್ರೋ ನಿರ್ಮಿಸಿರುವ ಕ್ಯಾಮರಾಗಳಿಂದ ಸಮುದ್ರದ ಮೇಲಿನ ಗಾಳಿಯ ವೇಗವನ್ನು ಉಪಗ್ರಹಗಳ ಮೂಲಕ ದಾಖಲಿಸಿಕೊಳ್ಳಬಹುದು. ಇತ್ತೀಚಿಗೆ ಫೋನಿಯಂತಹ ಸೂಪರ್ ಚಂಡಮಾರುತಗಳಿಂದ ಬಹುದೊಡ್ಡ ಅನಾಹುತಗಳು ಸೃಷ್ಠಿಯಾಗುವುದನ್ನು ತಡೆದಿರುವುದು ಇಸ್ರೋದ ಶ್ಲಾಘನೀಯ ವಿಚಾರವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸಮಾಜ ಸೇವೆಗೆ ಪುರಸ್ಕಾರ ಹಾಗೂ ಪ್ರಶಸ್ತಿಗಳನ್ನು ನೀಡುವುದು ಮತ್ತೊಬ್ಬರಿಗೆ ಉತ್ಸಾಹ ತುಂಬುವ ಉದ್ದೇಶದಿಂದ ಕೂಡಿದೆ. ಇಂದು ನನಗೆ ದೊರಕಿರುವ ಈ ಬಸವಶ್ರೀ ಪ್ರಶಸ್ತಿಯನ್ನು ನನ್ನ ವೈಯಕ್ತಿಕ ಸಾಧನೆಗಾಗಿ ಎಂದು ಪರಿಗಣಿಸದೇ ನನ್ನೊಂದಿಗೆ ಕೆಲಸ ನಿರ್ವಹಿಸಿದ ಇಸ್ರೋ ತಂಡದೊಂದಿಗೆ ಹಂಚಿಕೊಳ್ಳಲು ಇಷ್ಟ ಪಡುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಜರಗನಹಳ್ಳಿ ಶಿವಶಂಕರ್ ಹಾಗೂ ಸಾಹಿತಿ ಡಾ.ನ.ಮೊಗಸಾಲೆ ಅವರಿಗೆ ವಚನ ಸಾಹಿತ್ಯ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ತೋಂಟದ ಸಿದ್ದಲಿಂಗಶ್ರೀ, ವಚನಾನಂದ ಶ್ರೀ, ಹಿರಿಯ ನಟಿ ಜಯಶ್ರೀ, ಆಳ್ವಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ.ಮೋಹನ್ ಆಳ್ವಾ ಉಪಸ್ಥಿತ ರಿದ್ದರು.

ರಾಜ್ಯದಲ್ಲಿ ಅನೇಕ ಧಾರ್ಮಿಕ ಸುಧಾರಕರು ಬಂತು ಹೋಗಿದ್ದಾರೆ. ಆದರೆ, ಧಾರ್ಮಿಕ ಸುಧಾರಣೆಯೊಂದಿಗೆ ಸಾಮಾಜಿಕ ಸುಧಾರಣೆಯನ್ನು ಮಾಡಿದ ರಾಜ್ಯದ ವಚನ ಚಳುವಳಿಯ ರೂವಾರಿ ಬಸವಣ್ಣ.

-ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮೈಸೂರು ಮಹಾರಾಜರ ವಂಶಸ್ಥ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News