×
Ad

ಕಾಮೆಡ್-ಕೆ ಪರೀಕ್ಷೆ: ರಾಜ್ಯದಲ್ಲಿ 18,901 ವಿದ್ಯಾರ್ಥಿಗಳು ಹಾಜರು

Update: 2019-05-12 21:12 IST
ಬೆಂಗಳೂರಿನ ಕೆಎಲ್ಇ ಕಾಲೇಜ್ ನಲ್ಲಿ ಕಾಮೆಡ್-ಕೆ ಪರೀಕ್ಷೆ ಬರೆದು ಹೊರಬರುತ್ತಿರುವ ವಿದ್ಯಾರ್ಥಿಗಳು

ಬೆಂಗಳೂರು, ಮೇ 12: ಖಾಸಗಿ ಎಂಜಿನಿಯರಿಂಗ್ ಕಾಲೇಜು ಹಾಗೂ ಖಾಸಗಿ ವಿಶ್ವ ವಿದ್ಯಾಲಯಗಳ ಎಂಜಿನಿಯರಿಂಗ್ ಸೀಟುಗಳ ಹಂಚಿಕೆಗೆ ಕಾಮೆಡ್-ಕೆ ನಡೆಸುವ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ದೇಶಾದ್ಯಂತ ಸುಗಮವಾಗಿ ನಡೆಯಿತು.

ರವಿವಾರ ದೇಶದ 133 ನಗರಗಳ 248 ಕೇಂದ್ರಗಳು, ರಾಜ್ಯದ 24 ನಗರಗಳ 90 ಕೇಂದ್ರಗಳಲ್ಲಿ ಕಾಮೆಡ್-ಕೆ ಪರೀಕ್ಷೆ ಜರುಗಿತು. ದೇಶಾದ್ಯಂತ ನೋಂದಣಿ ಮಾಡಿಕೊಂಡಿದ್ದ 70,163 ವಿದ್ಯಾರ್ಥಿಗಳ ಪೈಕಿ 58,834 (ಶೇ.83.85) ಹಾಗೂ ರಾಜ್ಯದ 21,417 ವಿದ್ಯಾರ್ಥಿಗಳ ಪೈಕಿ 18,901 (ಶೇ.88.25) ವಿದ್ಯಾರ್ಥಿಗಳು ಹಾಜರಾಗಿದ್ದರು.

ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಪರೀಕ್ಷೆ ನಡೆಯಿತು. ರಸಾಯಶಾಸ್ತ್ರ, ಭೌತಶಾಸ್ತ್ರ ಹಾಗೂ ಗಣಿತ ಪರೀಕ್ಷೆಗಳು ತಲಾ 60 ಅಂಕಗಳಿಗೆ ಪರೀಕ್ಷೆ ನಡೆಯಿತು. ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರ ಪ್ರಶ್ನೆಗಳಿಗಿಂತ ಗಣಿತ ವಿಷಯದ ಪ್ರಶ್ನೆಗಳು ಸ್ವಲ್ಪ ಕಠಿಣವಾಗಿದ್ದವು ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಆನ್‌ಲೈನ್ ಪರೀಕ್ಷೆಯಾಗಿರುವುದರಿಂದ ಬೆಂಗಳೂರಿನ ಕೆಲವು ಕೇಂದ್ರಗಳಲ್ಲಿ ಅಭ್ಯರ್ಥಿಗಳ ಲಾಗಿನ್ ಮಾಡಲು ಸ್ವಲ್ಪ ವಿಳಂಬವಾಗಿತ್ತು. ಆದರೆ, ಪರೀಕ್ಷೆ ಮಾತ್ರ ನಿಗದಿತ ಅವಧಿಯಲ್ಲಿಯೇ ಪೂರ್ಣಗೊಂಡಿದೆ. ರಾಜ್ಯದ ಯಾವುದೇ ಕಡೆ ಪರೀಕ್ಷಾ ಅಕ್ರಮಗಳು ಕಂಡುಬಂದಿಲ್ಲ. ಸುಗಮವಾಗಿ ಪರೀಕ್ಷೆ ನಡೆಯಿತು.

ಮೇ 16ರಂದು ತಾತ್ಕಾಲಿಕ ಮಾದರಿ ಉತ್ತರಗಳನ್ನು ಪ್ರಕಟಿಸಲಾಗುತ್ತದೆ. ಮೇ 24ರಂದು ಅಂತಿಮ ಉತ್ತರಗಳನ್ನು ಪ್ರಕಟಿಸಲಾಗುತ್ತದೆ. ಮೇ 27ರಂದು ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಕಾಮೆಡ್ ಕೆ ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ಎಸ್. ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News