ಮೋದಿ ರ್ಯಾಲಿ ಪೋಸ್ಟರ್‌ನಿಂದ ಸುಮಿತ್ರಾ ಮಹಾಜನ್ ಔಟ್!

Update: 2019-05-13 04:03 GMT

ಇಂದೋರ್, ಮೇ 13: ಮೂವತ್ತು ವರ್ಷಗಳಲ್ಲೇ ಮೊದಲ ಬಾರಿಗೆ ಬಿಜೆಪಿ ಚುನಾವಣಾ ಪೋಸ್ಟರ್‌ಗಳಿಂದ ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಫೋಟೊ ಕಿತ್ತುಹಾಕಲಾಗಿದ್ದು, ಇದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ರವಿವಾರ ಪ್ರಧಾನಿ ನರೇಂದ್ರ ಮೋದಿಯವರ ರ್ಯಾಲಿಗಾಗಿ ಹಾಕಿದ್ದ ಪೋಸ್ಟರ್‌ಗಳಲ್ಲಿ ತಮ್ಮ ಭಾವಚಿತ್ರ ಇಲ್ಲದಿದ್ದುದರಿಂದ ಅಸಮಾಧಾನಗೊಂಡ ಮಹಾಜನ್, "ನಾನಿನ್ನೂ ಮಾಜಿ ಆಗಿಲ್ಲ" ಎಂದು ಸಂಘಟಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮಹಾಜನ್ ಫೋಟೊ ಇಲ್ಲದ ಬಿಜೆಪಿ ಬ್ಯಾನರ್‌ಗಳ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಮಧ್ಯಾಹ್ನದ ವೇಳೆಗೆ ವೈರಲ್ ಆಗಿತ್ತು. ಇದರಿಂದಾಗಿ ಬಿಜೆಪಿ ಮುಖಂಡರಿಗೆ ಹಲವು ಮಂದಿ ಮಾಧ್ಯಮ ಪ್ರತಿನಿಧಿಗಳು ಕರೆ ಮಾಡಿ ಸ್ಪಷ್ಟನೆ ಕೇಳಿದರು. ಆದರೆ ಮಹಾಜನ್ ಮಾತ್ರವಲ್ಲದೇ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್‌ ವರ್ಗಿಯಾ ಅವರ ಭಾವಚಿತ್ರವನ್ನೂ ಸ್ಥಳದ ಅಭಾವ ಕಾರಣದಿಂದ ಮುದ್ರಿಸಿಲ್ಲ ಎಂದು ಮುಖಂಡರು ಸಬೂಬು ಹೇಳಿದರು.

ಇದಾದ ಬಳಿಕ ಎಚ್ಚೆತ್ತುಕೊಂಡ ಬಿಜೆಪಿ ಸ್ಥಳೀಯ ಮುಖಂಡರು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಚಿತ್ರವನ್ನು ಎಡಕ್ಕೆ ಸರಿಸಿ, ಮಹಾಜನ್, ಶಿವರಾಜ್‌ಸಿಂಗ್ ಚೌಹಾಣ್ ಮತ್ತು ವಿಜಯ್‌ ವರ್ಗಿಯಾ ಚಿತ್ರಗಳನ್ನು ಬ್ಯಾನರ್‌ನಲ್ಲಿ ತುರುಕಿದರು.

ಎಂಟು ಬಾರಿ ಇಂಧೋರ್ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಮಹಾಜನ್ ಅವರಿಗೆ ಈ ಬಾರಿ ಟಿಕೆಟ್ ನಿರಾಕರಿಸಲಾಗಿದೆ. ಕೊನೆಕ್ಷಣದ ವರೆಗೂ ಆ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಗುಪ್ತವಾಗಿರಿಸಿ, ಶಂಕರ್ ಲಾಲ್ವಾನಿಯವರಿಗೆ ಟಿಕೆಟ್ ನೀಡಲಾಗಿತ್ತು. ಮೋದಿ ರ್ಯಾಲಿ ಬ್ಯಾನರ್‌ನಲ್ಲಿ ಲಾಲ್ವಾನಿ ಫೋಟೊ ಮತ್ತು ದೇವಸ್ ಅಭ್ಯರ್ಥಿ ಮಹೇಂದ್ರ ಸಿಂಗ್ ಸೋಳಂಕಿ ಚಿತ್ರಗಳು ರಾರಾಜಿಸುತ್ತಿದ್ದವು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News