ಕೊಲ್ಕತ್ತಾ ಹಿಂಸಾಚಾರ: ಬಿಜೆಪಿ ಕಾರ್ಯಕರ್ತರ ದಾಂಧಲೆ ವಿಡಿಯೋ ಬಿಡುಗಡೆಗೊಳಿಸಿದ ಟಿಎಂಸಿ

Update: 2019-05-15 07:13 GMT

ಕೊಲ್ಕತ್ತಾ, ಮೇ 15: ಮಂಗಳವಾರ ಸಂಜೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೊಲ್ಕತ್ತಾದಲ್ಲಿ ನಡೆಸಿದ ರೋಡ್ ಶೇ ವೇಳೆ ನಡೆದ ಹಿಂಸಾಚಾರದ ಬಗ್ಗೆ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ದೋಷಾರೋಪಣೆ ಹೊರಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿವೆ. ಇನ್ನೊಂದೆಡೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ಧ ಕೊಲ್ಕತ್ತಾದಲ್ಲಿ ಪೊಲೀಸ್ ದೂರು ಕೂಡ ದಾಖಲಾಗಿದೆ.

ಪಶ್ಚಿಮ ಬಂಗಾಳ ಸಿಎಂ ಹಾಗೂ ತೃಣಮೂಲ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಇಂದು ಅಪರಾಹ್ನ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಿದ್ದಾರೆ.  ವಿದ್ಯಾಸಾಗರ ಕಾಲೇಜಿನ ಹೊರಗೆ ನಿಲ್ಲಿಸಲಾಗಿದ್ದ ಹಲವು ಮೋಟಾರ್ ಬೈಕ್  ಹಾಗೂ ಸೈಕಲ್ ಗಳನ್ನು ಕೇಸರಿ ಬಟ್ಟೆ ಧರಿಸಿದ್ದ ಬಿಜೆಪಿ ಕಾರ್ಯಕರ್ತರು ಹೊತ್ತಿ ಉರಿಸುತ್ತಿರುವುದನ್ನು ತೋರಿಸುವ ಹಲವಾರು ವೀಡಿಯೋಗಳನ್ನು ತೃಣಮೂಲ ಕಾಂಗ್ರೆಸ್ ವಕ್ತಾರ ಡೆರೆಕ್ ಒಬ್ರಿಯಾನ್ ಬಿಡುಗಡೆಗೊಳಿಸಿದ್ದಾರೆ. ಕಾಲೇಜಿನ ಒಳಗಡೆಯಿಂದ ಈ ವೀಡಿಯೋಗಳನ್ನು ಚಿತ್ರೀಕರಿಸಿರುವಂತೆ ಕಾಣುತ್ತದೆ.

ಈ ಘಟನೆ ಕುರಿತಂತೆ ಚುನಾವಣಾ ಆಯೋಗವು ಪಶ್ಚಿಮ ಬಂಗಾಳ ಚುನಾವಣಾ ವೀಕ್ಷಕರ ಜತೆ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಚರ್ಚಿಸಲಿದೆ. ಕಾಲೇಜಿನೊಳಗಡೆಯಿದ್ದ ತೃಣಮೂಲ ಕಾರ್ಯಕರ್ತರು ಬಿಜೆಪಿ ರ್ಯಾಲಿ ವೇಳೆ ದಾಳಿ ನಡೆಸಿದ್ದರೆಂದು ಬಿಜೆಪಿ ಆರೋಪಿಸಿದ್ದರೆ, ಕಾಲೇಜಿನ ಆವರಣದಲ್ಲಿರುವ 19ನೇ ಶತಮಾನದ ಸಮಾಜ ಸುಧಾರಕ, ಶಿಕ್ಷಣ ತಜ್ಞ ಹಾಗೂ ಸಾಹಿತಿ ವಿದ್ಯಾಸಾಗರ್ ಅವರ  ಪ್ರತಿಮೆಯನ್ನು ಬಿಜೆಪಿ ಬೆಂಬಲಿಗರು  ಹಾನಿಗೊಳಿಸಿದ್ದಾರೆಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.

ಘಟನೆಯನ್ನು ಖಂಡಿಸಿ ಮಂಗಳವಾರ ರಾತ್ರಿಯೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ  ವಿದ್ಯಾಸಾಗರ ಕಾಲೇಜಿನಿಂದ ಕೊಲ್ಕತ್ತಾ ವಿವಿ ತನಕ ಪಾದಯಾತ್ರೆ ನಡೆಸಿದರು. ಮಮತಾ ಮತ್ತು ಅವರ ಪಕ್ಷದ ಅನೇಕ ನಾಯಕರು ಘಟನೆಯನ್ನು ಖಂಡಿಸಿ ತಮ್ಮ ಟ್ವಿಟ್ಟರ್ ಪ್ರೊಫೈಲ್ ಚಿತ್ರವಾಗಿ ವಿದ್ಯಾಸಾಗರ್ ಅವರ ಚಿತ್ರವನ್ನು ಹಾಕಿದ್ದಾರೆ.

ಕೊಲ್ಕತ್ತಾದಲ್ಲಿ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ ಮಮತಾ,  ಅಮಿತ್ ಶಾ ಅವರನ್ನು `ಗೂಂಡಾ" ಎಂದು ಬಣ್ಣಿಸಿದರು. ``ವಿದ್ಯಾಸಾಗರ್ ಅವರ ಮೇಲೆ ಕೈ ಮಾಡುವವರನ್ನು ಗೂಂಡಾ ಅಲ್ಲದೆ ಮತ್ತಿನ್ನೇನು ಕರೆಯಲಿ?,'' ಎಂದು ಅವರು ಪ್ರಶ್ನಿಸಿದರು.

ಅಮಿತ್ ಶಾ ರ್ಯಾಲಿಗೆ ದೊರೆತ ಬೆಂಬಲ ಸಹಿಸಲಾರದೆ ತೃಣಮೂಲ ಕಾಂಗ್ರೆಸ್ ಹಿಂಸೆಗೆ ಕೈ ಹಾಕಿದೆ ಎಂದು ಬಿಜೆಪಿ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News