ಸಿಆರ್ ಪಿಎಫ್ ರಕ್ಷಣೆ ನೀಡದಿರುತ್ತಿದ್ದರೆ ನಾನು ಗಾಯಗೊಳ್ಳದೆ ಪಾರಾಗುತ್ತಿರಲಿಲ್ಲ: ಅಮಿತ್ ಶಾ

Update: 2019-05-15 08:58 GMT

ಹೊಸದಿಲ್ಲಿ, ಮೇ 15: ಉತ್ತರ ಪ್ರದೇಶದ ಮುಖ್ಯ ಮಂತ್ರಿ ಆದಿತ್ಯನಾಥ್ ವಿರುದ್ಧ ಕ್ರಮಕೈಗೊಳ್ಳುವುದಿದ್ದರೆ ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಯಾಕೆ ಕಾನೂನು ಕ್ರಮಕೈಗೊಳ್ಳಲು ಸಾಧ್ಯವಿಲ್ಲ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಟಿಎಂಸಿ ಹಿಂಸಾಚಾರದಲ್ಲಿ ತೊಡಗಿದ್ದರೂ, ಚುನಾವಣಾ ಆಯೋಗ ಯಾವುದೇ  ಕ್ರಮಕೈಗೊಳ್ಳದೆ ಮೂಕ ಪ್ರೇಕ್ಷನಂತೆ ನೋಡುತ್ತಿದೆ ಎಂದು ಆರೋಪಿಸಿದರು.

 ಕೋಲ್ಕತಾದಲ್ಲಿ ನಡೆದ ರ್ಯಾಲಿ ವೇಳೆ ಸಿಆರ್ ಪಿಎಫ್ ರಕ್ಷಣೆ ನೀಡದೆ ಇರುತ್ತಿದ್ದರೆ ತನ್ನ ಮೇಲೆ ದಾಳಿ ನಡೆಯುವ ಸಾಧ್ಯತೆ ಇತ್ತು. ತಾನು ಗಾಯಗೊಳ್ಳದೆ ಪಾರಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಆರು ಹಂತದಲ್ಲಿ ಈಗಾಗಲೇ ಲೋಕಸಭೆ ಚುನಾವಣೆಗೆ ಮತದಾನದ ನಡೆದಿದೆ. ಬಿಜೆಪಿ ಎಲ್ಲ ರಾಜ್ಯಗಳಲ್ಲೂ ಸ್ಪರ್ಧಿಸಿದೆ. ಆದರೆ ಎಲ್ಲೂ ಗಲಾಟೆ ಉಂಟಾಗಿಲ್ಲ. ಪಶ್ಚಿಮ ಬಂಗಾಳದಲ್ಲಿ ಮಾತ್ರ ಯಾಕೆ ಮತದಾನದ ವೇಳೆ  ಹಿಂಸಾಚಾರ ನಡೆದಿದೆ ಎಂದು ಪ್ರಶ್ನಿಸಿದರು.

ಹಿಂಸಾಚಾರಕ್ಕೆ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ನೇರ  ಹೊಣೆಯಾಗಿದ್ದಾರೆ . ಕಾಲೇಜು ಆವರಣದಲ್ಲಿರುವ ಈಶ್ವರ್ ಚಂದ್ರ ವಿದ್ಯಾಸಾಗರ್ ಪ್ರತಿಮೆಯನ್ನು ಟಿಎಂಸಿಯ ಗೂಂಡಾಗಳು ಧ್ವಂಸಗೊಳಿಸಿದ್ದಾರೆ ಎಂದು ಆರೋಪಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News