ಸಾಂಬಾಜಿಯ ಅಂತ್ಯ ಸಂಸ್ಕಾರ ಮಾಡಿದವರಾರು?

Update: 2019-05-15 08:09 GMT
ಸಾಂಬಾಜಿ ಮತ್ತು ಗೋವಿಂದ ಮಹಾರರ ಸಮಾಧಿಗಳು

ಸಾಂಬಾಜಿ ಮಹಾರಾಜರ ಜಯಂತಿ(ಮೇ 14)ಯ ಸಂದರ್ಭ ಅವರ ಶವಸಂಸ್ಕಾರದ ಸತ್ಯ ಘಟನೆಯನ್ನು ತಿಳಿಸುವ ಒಂದು ಸಣ್ಣ ಪ್ರಯತ್ನ...

ಔರಂಗಜೇಬನು ಪೇಶ್ವೆಗಳ ಸಂಚಿನಿಂದ ಶಿವಾಜಿ ಮಹಾರಾಜರ ಮಗ ಸಾಂಬಾಜಿ ಮಹಾರಾಜರನ್ನು ಪುಣೆ ಹತ್ತಿರ ಬಂಧಿಸಿ 40ದಿನಗಳ ಕಾಲ ಚಿತ್ರಹಿಂಸೆ ನೀಡಿ ಅವರ ದೇಹವನ್ನು ತುಂಡು ತುಂಡು ಮಾಡಿ ಕೊಂದ ನಂತರ ಸಾಂಬಾಜಿ ಮಹಾರಾಜರ ತುಂಡಾದ ದೇಹದ ಚೂರುಗಳನ್ನು ಪುಣೆಯ ಇಂದ್ರಾಯಿಣಿ ನದಿಯಲ್ಲಿ ಬಿಸಾಡಿ ಆಮೇಲೆ ಸಾಂಬಾಜಿಯ ಶವಸಂಸ್ಕಾರವನ್ನು ಯಾರೂ ನೆರವೇರಿಸದಂತೆ ರಾಜ್ಯದ ತುಂಬೆಲ್ಲ ಡಂಗುರ ಸಾರಿ, ಅಕಸ್ಮಾತ್ ಶವಸಂಸ್ಕಾರ ನೆರವೇರಿಸಿದರೆ ಅವರಿಗೂ ಕೂಡ ಇದೇ ಗತಿ ಎಂದು ಎಚ್ಚರಿಕೆಯ ಸಂದೇಶ ನೀಡುತ್ತಾನೆ. ಶಿವಾಜಿ ಮಹಾರಾಜರು ರಾಜರಾಗುವುದಕ್ಕೆ ಯಾರೆಲ್ಲ ವಿರೋಧ ಮಾಡಿದ್ದರೋ ಅದೇ ವರ್ಗ ಪೇಶ್ವೆಗಳ ಸೂಚನೆಯಂತೆ ಸಾಂಬಾಜಿ ಮಹಾರಾಜರ ಶವಸಂಸ್ಕಾರ ನೆರವೇರಿಸುವುದಕ್ಕೆ ಮುಂದೆ ಬರುವುದಿಲ್ಲ.

ಔರಂಗಜೇಬನು ಶವವನ್ನು ಇಂದ್ರಾಯಿಣಿಯಲ್ಲಿ ಬಿಸಾಡಿದ ನಂತರ ಸಾಂಬಾಜಿ ಮಹಾರಾಜರ ದೇಹದ ಚೂರುಗಳು ಇಂದ್ರಾಯಿಣಿ ನದಿಯಿಂದ ಹರಿದುಕೊಂಡು ಭೀಮಾನದಿಯ ಕಡೆಗೆ ಬರುತ್ತವೆ. ಅದೇ ಸಮಯಕ್ಕೆ ಅಲ್ಲೇ ನದಿಯ ದಡದಲ್ಲಿ ಬಟ್ಟೆ ತೊಳೆಯುತ್ತಿದ್ದ ಜನಾಬಾಯಿ ಎಂಬ ಹೆಣ್ಣುಮಗಳು ಆ ಮಾಂಸದ ಮುದ್ದೆಗಳನ್ನು ನೋಡಿ ಭಯಭೀತಿಗೊಂಡು ಅಲ್ಲೇ ಕುರಿ ಕಾಯುತ್ತಿದ್ದ ಅಜ್ಜನಿಗೆ (ಆ ವೀರಗಲ್ಲಿನ ಮೇಲೆ ಈ ಅಜ್ಜನ ಹೆಸರು ಬರೆದಿಲ್ಲ) ಅಲ್ಲಿ ಯಾವುದೇ ವ್ಯಕ್ತಿಯ ತುಂಡಾದ ದೇಹಗಳು ನದಿಯಲ್ಲಿ ಹರಿದುಕೊಂಡು ಬರುತ್ತಿವೆ ಎಂದು ವಿಷಯ ಮುಟ್ಟಿಸುತ್ತಾಳೆ. ಆಗ ಅಜ್ಜ ‘‘ಇವು ಸಾಂಬಾಜಿಯ ದೇಹದ ತುಂಡುಗಳು, ಔರಂಗಜೇಬನು ಕತ್ತರಿಸಿ ನದಿಯಲ್ಲಿ ಬಿಸಾಡಿದ್ದಾನೆ’’ ಎಂದು ಹೇಳುತ್ತಾನೆ. ನಂತರ ಅವರಿಬ್ಬರು ಮಹಾರ ಜನಾಂಗದ ಗೋವಿಂದ ಮಹಾರ ಎಂಬ ವ್ಯಕ್ತಿಗೆ ಆ ವಿಷಯ ಮುಟ್ಟಿಸುತ್ತಾರೆ.

ಆಗ ಗೋವಿಂದ ಮಹಾರನು ಔರಂಗಜೇಬನ ಕಟ್ಟಾಜ್ಞೆಯ ಹೊರತಾಗಿಯೂ ಸಾಂಬಾಜಿ ಮಹಾರಾಜರ ಶವಸಂಸ್ಕಾರ ಮಾಡುವ ಉದ್ದೇಶದಿಂದ ತನ್ನ ಕೆಲವೊಂದಷ್ಟು ಸಂಗಡಿಗರನ್ನು ಕರೆದುಕೊಂಡು ನದಿಯಲ್ಲಿ ಈಜಾಡಿ ಸಿಕ್ಕಷ್ಟು ದೇಹದ ಚೂರುಗಳನ್ನು ಒಟ್ಟು ಮಾಡಿ ಯಾರಿಗೂ ತಿಳಿಯದಂತೆ ಶಿವಲೇ ಪಾಟೀಲ್ ಎಂಬ ಚಪ್ಪಲಿ ಹೊಲಿಯುವ ಸಮಗಾರ ಜನಾಂಗದ ವ್ಯಕ್ತಿಯ ಹತ್ತಿರ ಹೋಗಿ ಈ ದೇಹವನ್ನು ಹೊಲಿದು ಜೋಡಿಸಿಕೊಡುವಂತೆ ಬೇಡಿಕೊಳ್ಳುತ್ತಾನೆ. ಆದರೆ ಮೊದ-ಮೊದಲು ಹೆದರಿದ್ದ ಪಾಟೀಲ್ ನಂತರ ಒಪ್ಪಿಕೊಂಡು ದೇಹವನ್ನು ಜೋಡಿಸಿಕೊಡುತ್ತಾನೆ. ಆಗ ಗೋವಿಂದ ಮಹಾರನು ಕುರಿ ಕಾಯುವವರು ಹಾಗೂ ಮಹಾರ ಜನಾಂಗದವರ ಜೊತೆ ಸೇರಿ ಗುಪ್ತವಾಗಿ ಪುಣೆಯ ಹತ್ತಿರದ ವಡುಬುದ್ರುಕ ಎಂಬ ಗ್ರಾಮದಲ್ಲಿ ಸಾಂಬಾಜಿ ಮಹಾರಾಜರ ಚಿತೆಗೆ ತಾನೇ ಅಗ್ನಿ ಸ್ಪರ್ಶ ಮಾಡುತ್ತಾನೆ.

ನಂತರ ಸಾಂಬಾಜಿಯ ಶವ ಸಿಕ್ಕಿದೆ, ಅದನ್ನು ಮಹಾರರು ಶವಸಂಸ್ಕಾರ ಮಾಡುತ್ತಿದ್ದಾರೆ ಎನ್ನುವುದನ್ನು ಅರಿತ ಕುತಂತ್ರಿ ಪೇಶ್ವೆಗಳು ಇನ್ನು ಮುಂದೆ ನಾವು ಮತ್ತೆ ಶೂದ್ರರ ಮನೆಕಾಯುವ ಪ್ರಸಂಗ ಬರುತ್ತದೆ ಎನ್ನುವ ಭಯಕ್ಕೆ ಹೆದರಿ ಸಾಂಬಾಜಿ ಮಹಾರಾಜರ ಮಗ ಸಾಹು ಮಹಾರಾಜನಿಗೆ (ಈತನೇ ಎರಡನೆಯ ಶಿವಾಜಿ) ನಿನ್ನ ತಂದೆಯ ಶವಸಂಸ್ಕಾರವನ್ನು ಕೆಳಜಾತಿಯ ಮಹಾರ ಜನಾಂಗದವರು ಹಾಗೂ ಕುರಿ ಕಾಯುವವರು ನೆರವೇರಿಸಿ ಅಪಚಾರವೆಸಗಿದ್ದಾರೆ ಎಂದು ಆ ಯುವಕನ ತಲೆ ಕೆಡಿಸಿ ಶವಸಂಸ್ಕಾರ ನಡೆಯುತ್ತಿದ್ದ ಸ್ಥಳಕ್ಕೆ ದೌಡಾಯಿಸುತ್ತಾರೆ. ಆದರೆ ಅವರು ಹೋಗುವಷ್ಟರಲ್ಲೇ ಚಿತೆಗೆ ಅಗ್ನಿಸ್ಪರ್ಶವಾಗಿ ಬೂದಿಯಾಗಿರುತ್ತದೆ. ಗೋವಿಂದ ಮಹಾರನನ್ನು ಬಂಧಿಸುತ್ತಾರೆ. ಉಳಿದ ಜನಾಬಾಯಿ, ಕುರಿಕಾಯುವ ಅಜ್ಜ, ಚಪ್ಪಲಿ ಹೊಲಿಯುವ ಶಿವಲೇ ಪಾಟೀಲ್ ಅವರಿಂದ ತಪ್ಪಿಸಿಕೊಂಡು ರಾಜ್ಯ ತೊರೆದು ಭೂಗತರಾಗುತ್ತಾರೆ. (ನಿಜ ಅರ್ಥದಲ್ಲಿ ತಾನು ಕೂಡ ಶೂದ್ರನೇ ಎನ್ನುವುದು ಆ ಯುವರಾಜ ಸಾಹು ಮಹಾರಾಜನಿಗೆ ತಿಳಿದಿರುವುದಿಲ್ಲ).

ಆದರೂ ಆ ಬೂದಿಯನ್ನೇ ತೆಗೆದುಕೊಂಡು ಹೋಗಿ ವಡುಬುದ್ರುಕದಿಂದ ಆರು ಕಿಲೋಮೀಟರ್ ದೂರದ ತುಳಾಪುರ ಎಂಬ ಗ್ರಾಮದಲ್ಲಿ ಮತ್ತೊಮ್ಮೆ ನಾಟಕೀಯವಾಗಿ ಅಗ್ನಿಸ್ಪರ್ಶ ಮಾಡಿ ಸಾಂಬಾಜಿ ಮಹಾರಾಜರ ಎರಡನೇ ಸಮಾಧಿ ನಿರ್ಮಿಸುತ್ತಾರೆ.

ಸಾಂಬಾಜಿ ಮಹಾರಾಜರ ಶವಸಂಸ್ಕಾರ ಮಾಡಿದ ಗೋವಿಂದ ಮಹಾರನನ್ನು ಪೇಶ್ವೆಗಳು ಮತ್ತು ಔರಂಗಜೇಬನ ಸೈನಿಕರು ಕೊಲೆ ಮಾಡುತ್ತಾರೆ. ಈಗಲೂ ವಡುಬುದ್ರುಕ ಗ್ರಾಮದ ಅಂಬೇಡ್ಕರ್‌ನಗರದಲ್ಲಿ ಸಾಂಬಾಜಿ ಮಹಾರಾಜರ ಮೊದಲ ಸಮಾಧಿಯಿದೆ ಅದರ ಪಕ್ಕದಲ್ಲೇ ಗೋವಿಂದ ಮಹಾರನ ಸಮಾಧಿಯಿದೆ. ಅದೇ ಕಾರಣಕ್ಕೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಾಂಬಾಜಿ ಮಹಾರಾಜರನ್ನು ಸ್ಮರಿಸುವ ಉದ್ದೇಶದಿಂದ ದೇಶದ ಮೊದಲ ಸ್ವಾಭಿಮಾನಿ ಯುದ್ಧ ಭೀಮಾ ಕೊರೆಗಾಂವ್ ಯುದ್ಧದ ಸ್ಮಾರಕಕ್ಕೆ ವರ್ಷಕ್ಕೊಮ್ಮೆ ಭೇಟಿ ನೀಡುವ ಮುಂಚೆ ಅಲ್ಲೇ ಪಕ್ಕದ ಸಾಂಬಾಜಿ ಮಹಾರಾಜರ ಮೂಲ ಸಮಾಧಿಗೆ ಹಾಗೆಯೇ ಅದರ ಪಕ್ಕದ ಗೋವಿಂದ ಮಹಾರರ ಸಮಾಧಿಗೆ ಗೌರವ ನಮನ ಸಲ್ಲಿಸಿದ ನಂತರವೇ ಭೀಮಾ ಕೊರೆಗಾಂವ್ ಯುದ್ಧ ಸ್ಮಾರಕಕ್ಕೆ ತೆರಳುತ್ತಿದ್ದರು. ಅದೇ ರೂಢಿಯನ್ನು ಜನರು ಈಗಲೂ ಪಾಲಿಸಿಕೊಂಡು ಬರುತ್ತಿದ್ದಾರೆ. ಇದೇ ಸತ್ಯವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಸಂಭಾಜಿ ಬ್ರಿಗೇಡ್ ಸಂಘಟನೆ ಸುಮಾರು ವರ್ಷಗಳಿಂದ ಮಾಡುತ್ತಿದೆ..

ಏನೇ ಇರಲಿ ಯಾರೂ ಶವಸಂಸ್ಕಾರ ಮಾಡದೇ ಅನಾಥವಾಗಿ ಜಲಚರಗಳ ಪಾಲಾಗುತ್ತಿದ್ದ ವೀರ ಸಾಂಬಾಜಿ ಮಹಾರಾಜರ ದೇಹವನ್ನು ಪೇಶ್ವೆಗಳ ಕುತಂತ್ರ ಮತ್ತು ಔರಂಗಜೇಬನ ಬೆದರಿಕೆಯ ನಡುವೆಯೂ ಶವಸಂಸ್ಕಾರ ಮಾಡಿದ ಹುತಾತ್ಮ ಗೋವಿಂದ ಮಹಾರ, ಜನಾಬಾಯಿ, ಕುರಿ ಕಾಯುವ ಅಜ್ಜ, ಶಿವಲೇ ಪಾಟೀಲ್ ಇವರೆಲ್ಲರ ಸಾಹಸವನ್ನು ಮೆಚ್ಚಲೇಬೇಕು. ನೈಜ ಇತಿಹಾಸವನ್ನು ಅರಿಯಲೇಬೇಕು. ಶಿವಾಜಿ ಮಹಾರಾಜರ ಪಟ್ಟಾಭಿಷೇಕಕ್ಕೆ ವಿರೋಧ ಮಾಡಿದವರೇ, ಶಿವಾಜಿ ಮಹಾರಾಜರನ್ನು ಮೋಸದಿಂದ ಕೊಂದವರೇ, ಸಾಂಬಾಜಿ ಮಹಾರಾಜರನ್ನು ಔರಂಗಜೇಬನಿಗೆ ಹಿಡಿದುಕೊಟ್ಟವರೇ ಈಗ ಶಿವಾಜಿ ಮಹಾರಾಜರ ಹೆಸರಿನಲ್ಲಿ ಭಜನೆ ಮಾಡುತ್ತಿದ್ದಾರೆ. ಅದನ್ನು ಈಗಿನ ಯುವಜನಾಂಗ ತಿಳಿಯಲೇಬೇಕು.

Writer - ವೀರೇಶ್ ಎನ್. ಕೆ., ಹುಕ್ಕೇರಿ

contributor

Editor - ವೀರೇಶ್ ಎನ್. ಕೆ., ಹುಕ್ಕೇರಿ

contributor

Similar News