ಉತ್ತರ ಪ್ರದೇಶ: ಸ್ಟ್ರಾಂಗ್ ರೂಂನಿಂದ 2 ವಾಹನಗಳಲ್ಲಿ ಇವಿಎಂ ಸಾಗಾಟಕ್ಕೆ ಯತ್ನ?

Update: 2019-05-15 09:20 GMT

ಲಕ್ನೋ, ಮೇ 15: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧಿಸಿರುವ ಪ್ರತಿಷ್ಠಿತ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿನ ಸ್ಟ್ರಾಂಗ್ ರೂಂನಲ್ಲಿರಿಸಲಾಗಿದ್ದ ಇವಿಎಂಗಳನ್ನು ಹೊರಕ್ಕೆ ಕೊಂಡುಹೋಗಲಾಗಿದೆ ಎಂದು ವರದಿಯಾದ ನಂತರ ಇಂತಹುದೇ ಇನ್ನೊಂದು ಯತ್ನ ದೋಮರಿಯಾಗಂಜ್ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ವೀಡಿಯೋವೊಂದು ಹರಿದಾಡುತ್ತಿದೆ.

ಈ ಕ್ಷೇತ್ರದಲ್ಲಿ ಬಿಜೆಪಿಯ ಜಗದಂಬಿಕಾ ಪಾಲ್ ಅವರು ಮಹಾಮೈತ್ರಿ ಅಭ್ಯರ್ಥಿಯಾಗಿರುವ ಬಿಎಸ್‍ಪಿಯ ಅಫ್ತಾಬ್ ಇಸ್ಲಾಂ ಹಾಗೂ ಕಾಂಗ್ರೆಸ್ ಪಕ್ಷದ ಚಂದ್ರಶ್ ಅವರನ್ನು ಎದುರಿಸುತ್ತಿದ್ದಾರೆ.

ಈ ವೀಡಿಯೋ ಶೇರ್ ಮಾಡಿರುವ UttarPradesh.org ವೆಬ್ ಸೈಟ್ ನ ಪತ್ರಕರ್ತ ಅನಿಲ್ ತಿವಾರಿ  ಹೀಗೆ ಬರೆದಿದ್ದಾರೆ –“ದೊಮರಿಯಾಗಂಜ್ ಲೋಕಸಭಾ ಕ್ಷೇತ್ರದಲ್ಲಿ ಇವಿಎಂಗಳನ್ನು ಬದಲಾಯಿಸುವ ಯತ್ನ. ನಗರದ ನವೀನ್ ಮಂಡಿಯಲ್ಲಿರುವ ಸ್ಟ್ರಾಂಗ್ ರೂಂ ನಿಂದ ಎರಡು ವಾಹನಗಳ ತುಂಬಾ ಇವಿಎಂಗಳನ್ನು ಕೊಂಡು ಹೋಗುವ ಯತ್ನ. ಸ್ಥಳೀಯ ನಿವಾಸಿಗಳು ಹಾಗೂ ಬಿಎಸ್‍ಪಿ ಕಾರ್ಯಕರ್ತರು ಮುಖ್ಯ ಪ್ರವೇಶದ್ವಾರದಲ್ಲಿಯೇ ವಾಹನವನ್ನು ತಡೆದು ನಿಲ್ಲಿಸಿದ್ದಾರೆಂದು ಮಹಾಮೈತ್ರಿಕೂಟದ ಕಾರ್ಯಕರ್ತರು ಆರೋಪಿಸಿದ್ದಾರೆ''

ತಮ್ಮ ಈ ಟ್ವೀಟ್ ನಲ್ಲಿ ತಿವಾರಿ ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ಹಾಗೂ ಚುನಾವಣಾ ಆಯೋಗವನ್ನೂ ಟ್ಯಾಗ್ ಮಾಡಿದ್ದಾರಾದರೂ ಇಬ್ಬರೂ ಇನ್ನೂ ಪ್ರತಿಕ್ರಿಯಿಸಿಲಲ್ಲ.

ಮೇ 9ರಂದು ಉತ್ತರ ಪ್ರದೇಶದ ಅಮೇಥಿಯ ಸ್ಟ್ರಾಂಗ್ ರೂಂನಿಂದ ಇವಿಎಂಗಳನ್ನು ಕೊಂಡು ಹೋಗುತ್ತಿರುವ ವೀಡಿಯೋವೊಂದು ಕಾಂಗ್ರೆಸ್ ಬೆಂಬಲಿಗರ ಆತಂಕಕ್ಕೆ ಕಾರಣವಾಗಿತ್ತು.

ಮೇ 12ರಂದು ಚುನಾವಣೆ ನಡೆಯುವ ಸ್ಥಳಗಳಲ್ಲಿ ಇವಿಎಂಗಳ ಕೊರತೆಯಿರುವುದರಿಂದ ಅಲ್ಲಿಂದ ಮನವಿ ಬಂದ ಹಿನ್ನೆಲೆಯಲ್ಲಿ  ಇವಿಎಂಗಳನ್ನು ಕಳುಹಿಸಲಾಗುತ್ತಿದೆ ಎಂದು ಹಿರಿಯ ಡಿವಿಷನಲ್ ಮ್ಯಾಜಿಸ್ಟ್ರೇಟ್ ವಂದಿತಾ ಶ್ರೀವಾತ್ಸವ ಹೇಳಿದ್ದಾರೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News