ಮುಹಮ್ಮದ್ ನಲಪಾಡ್‌ಗೆ ಮೇ 15ರಿಂದ ಜೂ.6ರವರೆಗೆ ಮಕ್ಕಾಗೆ ಹೋಗಲು ಹೈಕೋರ್ಟ್ ಅನುಮತಿ

Update: 2019-05-15 12:49 GMT

ಬೆಂಗಳೂರು, ಮೇ 15: ಉದ್ಯಮಿ ಪುತ್ರ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಶಾಸಕ ಎನ್.ಎ.ಹಾರಿಸ್ ಪುತ್ರ ಮುಹಮ್ಮದ್ ನಲಪಾಡ್‌ಗೆ ಜಾಮೀನು ಷರತ್ತು ಸಡಿಲಿಸಿರುವ ಹೈಕೋರ್ಟ್, ಆತನಿಗೆ ಮಕ್ಕಾ ಮದೀನಕ್ಕೆ ಹೋಗಲು ಅವಕಾಶ ನೀಡಿದೆ.

ಮಕ್ಕಾ ಯಾತ್ರೆಗೆ ತೆರಳಲು ಜಾಮೀನಿನ ಷರತ್ತು ಸಡಿಲಿಸುವಂತೆ ಕೋರಿ ನಲಪಾಡ್ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ರಜಾಕಾಲದ ನ್ಯಾಯಪೀಠ ಅರ್ಜಿಯನ್ನು ಮಾನ್ಯ ಮಾಡಿತು.

ಅರ್ಜಿದಾರರ ಪರ ವಕೀಲ ಉಸ್ಮಾನ್ ಅರ್ಜಿದಾರರ ಕುಟುಂಬದವರೆಲ್ಲಾ ಮಕ್ಕಾ ಮದೀನ ಯಾತ್ರೆ ಕೈಗೊಂಡಿದ್ದಾರೆ. ಆದರೆ ಹೈಕೋರ್ಟ್ ಜಾಮೀನು ನೀಡುವಾಗ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ಹೊರೆಗೆ ಹೋಗಬಾರದೆಂದು ಷರತ್ತು ವಿಧಿಸಿತ್ತು.
ಅದನ್ನು ಸಡಿಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಅಧೀನ ನ್ಯಾಯಾಲಯ ತಿರಸ್ಕರಿಸಿದೆ. ಹೀಗಾಗಿ, ಆತ ಪವಿತ್ರ ಮಕ್ಕಾಗೆ ತೆರಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, 20 ದಿನಗಳ ಕಾಲ ಜಾಮೀನಿನ ಷರತ್ತು ಸಡಿಲಿಕೆ ಮಾಡಿ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು ಪ್ರಕರಣದಲ್ಲಿ ವಿಶೇಷ ಅಭಿಯೋಜಕರಾಗಿರುವ ಎಂ.ಎಸ್.ಶ್ಯಾಮ್ ಸುಂದರ್ ಅವರನ್ನು ಕೇಳಿತು. ಅವರು ತಮ್ಮದೇನೂ ಅಭ್ಯಂತರವಿಲ್ಲ. ಆದರೆ, ಕೆಲವು ಷರತ್ತುಗಳನ್ನು ವಿಧಿಸಬೇಕು ಎಂದರು.

ಮೇ 15ರಿಂದ ಜೂ.6ರವರೆಗೆ ಮೆಕ್ಕಾ ಯಾತ್ರೆ ಕೈಗೊಳ್ಳಲು ನ್ಯಾಯಪೀಠ ಅನುಮತಿ ನೀಡಿತು. ಅಲ್ಲದೆ, ಯಾತ್ರೆ ಕೈಗೊಂಡು ವಾಪಸ್ಸಾದ ನಂತರ ಪಾಸ್‌ಪೋರ್ಟ್ ಎಂಟ್ರಿ ಹಾಗೂ ಪ್ರವಾಸದ ಸಂಪೂರ್ಣ ವಿವರಗಳನ್ನು ಅಧೀನ ನ್ಯಾಯಾಲಯಕ್ಕೆ ಒಪ್ಪಿಸಿ ಅಲ್ಲಿ ರಿಪೋರ್ಟ್ ಮಾಡಿಕೊಳ್ಳಬೇಕೆಂದು ನ್ಯಾಯಪೀಠ ಆದೇಶಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News