ಫ್ರೆಂಚ್ ಓಪನ್‌ನಿಂದ ಹಿಂದೆ ಸರಿದ ಮರಿಯ ಶರಪೋವಾ

Update: 2019-05-17 05:15 GMT

ಮ್ಯಾಡ್ರಿಡ್(ಸ್ಪೇನ್), ಮೇ 16: ಎರಡು ಬಾರಿಯ ಫ್ರೆಂಚ್ ಓಪನ್ ಚಾಂಪಿಯನ್ ಮರಿಯಾ ಶರಪೋವಾ ಈ ವರ್ಷದ ಎರಡನೇ ಗ್ರಾನ್‌ಸ್ಲಾಮ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ದೀರ್ಘ ಸಮಯದಿಂದ ಕಾಡುತ್ತಿರುವ ಬಲ ಭುಜನೋವಿನಿಂದಾಗಿ ರಶ್ಯದ ಹಿರಿಯ ಆಟಗಾರ್ತಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಫ್ರೆಂಚ್ ಓಪನ್ ಟೂರ್ನಿಯಿಂದ ಹಿಂದೆ ಸರಿಯುವ ಮಾಹಿತಿ ನೀಡಿದ ಶರಪೋವಾ,‘‘ಕೆಲವೊಮ್ಮೆ ಸರಿಯಾದ ನಿರ್ಧಾರವು ಯಾವಾಗಲೂ ಸುಲಭವಾಗಿರುವುದಿಲ್ಲ. ನಾನು ಪ್ರಾಕ್ಟೀಸ್ ಆರಂಭಿಸಿದ್ದೇನೆ. ನಿಧಾನವಾಗಿ ಭುಜನೋವಿನಿಂದ ಚೇತರಿಸಿಕೊಳ್ಳಲು ಯತ್ನಿಸುತ್ತಿದ್ದೇನೆ ’’ ಎಂದು ಬರೆದಿದ್ದಾರೆ. ವಿಶ್ವದ ಮಾಜಿ ನಂ.1 ಆಟಗಾರ್ತಿ ಹಾಗೂ ಐದು ಬಾರಿ ಗ್ರಾನ್‌ಸ್ಲಾಮ್ ಚಾಂಪಿಯನ್ ಆಗಿರುವ ಶರಪೋವಾ ಜನವರಿಯಿಂದ ಯಾವುದೇ ಟೂರ್ನಿಗಳಲ್ಲಿ ಸ್ಪರ್ಧಿಸಿಲ್ಲ. ಫ್ರೆಂಚ್ ಓಪನ್ ಟೂರ್ನಿಯು ಮೇ 26 ರಂದು ಆರಂಭವಾಗಲಿದೆ. 32ರ ಹರೆಯದ ಶರಪೋವಾ 2012ರಲ್ಲಿ ಫ್ರಾನ್ಸ್‌ನಲ್ಲಿ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದರು. ಈ ಮೂಲಕ ವೃತ್ತಿಜೀವನದಲ್ಲಿ ಎಲ್ಲ ನಾಲ್ಕೂ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ ಸಾಧನೆ ಮಾಡಿದ್ದರು. 2014ರಲ್ಲಿ ಮತ್ತೊಮ್ಮೆ ಆವೆಮಣ್ಣಿನ ಅಂಗಣದಲ್ಲಿ ಫ್ರೆಂಚ್ ಓಪನ್ ಕಿರೀಟ ಧರಿಸಿದ್ದರು. ಆ ಬಳಿಕ ಅವರು ಯಾವುದೇ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿಲ್ಲ. 2016ರ ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಉದ್ದೀಪನಾ ಮದ್ದು ಸೇವನೆ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ ಶರಪೋವಾ 15 ತಿಂಗಳ ಕಾಲ ನಿಷೇಧಕ್ಕೆ ಒಳಗಾಗಿದ್ದರು. 2017ರ ಎಪ್ರಿಲ್‌ನಲ್ಲಿ ಸಕ್ರಿಯ ಟೆನಿಸ್‌ಗೆ ವಾಪಸಾಗಿದ್ದರು. ಅತ್ಯಂತ ಕೆಳ ರ್ಯಾಂಕಿನ ಆಟಗಾರ್ತಿಯಾಗಿ ಗ್ರಾನ್‌ಸ್ಲಾಮ್ ಟೂರ್ನಿಗಳಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News