ಫೈನಲ್‌ಗೇರಲು ಕಿನನ್, ಪೃಥ್ವಿರಾಜ್ ವಿಫಲ

Update: 2019-05-17 06:17 GMT

ಚಾಂಗ್ವಾನ್, ಮೇ 16: ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಗುರುವಾರ ನಡೆದ ಪುರುಷರ ಟ್ರಾಪ್ ಇವೆಂಟ್‌ನ ಅರ್ಹತಾ ಸುತ್ತಿನಲ್ಲ್ಲಿ ಭಾರತೀಯ ಶೂಟರ್‌ಗಳಾದ ಕಿನನ್ ಚೆನಾಯ್ ಹಾಗೂ ಪೃಥ್ವಿರಾಜ್ ಟೊಂಡೈಮನ್ ಕ್ರಮವಾಗಿ 15ನೇ ಹಾಗೂ 33ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಇದರೊಂದಿಗೆ ವರ್ಷದ ಮೂರನೇ ವಿಶ್ವಕಪ್‌ನಲ್ಲಿ ಫೈನಲ್‌ಗೆ ತಲುಪುವ ಅವಕಾಶದಿಂದ ವಂಚಿತರಾದರು.

ಅರ್ಹತಾ ಸುತ್ತಿನ ಮೊದಲ ದಿನವಾದ ಬುಧವಾರ ಮೊದಲೆರಡು ಸುತ್ತಿನಲ್ಲಿ ತಲಾ 25 ಅಂಕ ಗಳಿಸಿದ್ದ ಕಿನನ್ ಹಾಗೂ ಪೃಥ್ವಿರಾಜ್ ಮುನ್ನಡೆಯಲ್ಲಿದ್ದರು. ಆದರೆ, ಇಂದು ನಡೆದ ಅಂತಿಮ ಮೂರು ಸುತ್ತುಗಳಲ್ಲಿ ತಮ್ಮ ಲಯ ಕಳೆದುಕೊಂಡ ಕಿನನ್ ಹಾಗೂ ಪೃಥ್ವಿರಾಜ್ ಈ ವರ್ಷ ಮತ್ತೊಮ್ಮೆ ಅಂತರ್‌ರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ ವಿಶ್ವಕಪ್ ಸ್ಟೇಜ್ ಫೈನಲ್‌ಗೆ ಅರ್ಹತೆ ಪಡೆಯಲು ವಿಫಲರಾದರು.

ಗುರುವಾರ 24, 24 ಹಾಗೂ 22 ಅಂಕ ಗಳಿಸಿದ ಕಿನನ್ ಒಟ್ಟು 119 ಅಂಕ ಗಳಿಸಿದರು. ಫೈನಲ್‌ಗೆ ತೇರ್ಗಡೆಯಾಗಲು ಕನಿಷ್ಠ 122 ಅಂಕ ಗಳಿಸುವ ಅಗತ್ಯವಿದೆ. ಪೃಥ್ವಿರಾಜ್ 118 ಅಂಕ ಗಳಿಸಿದರೆ, ಇನ್ನೋರ್ವ ಶೂಟರ್ ರೊರಾವರ್ ಸಿಂಗ್ ಸಂಧು 116 ಅಂಕ ಗಳಿಸಿ 64ನೇ ಸ್ಥಾನ ಪಡೆದಿದ್ದಾರೆ. ವರ್ಷದ ಮೊದಲೆರಡು ವಿಶ್ವಕಪ್ ಸ್ಟೇಜ್‌ಗಳಲ್ಲಿ 123 ಹಾಗೂ 122 ಅಂಕ ಗಳಿಸಿದ್ದ ಕಿನನ್ ಕ್ರಮವಾಗಿ 10ನೇ ಹಾಗೂ ಏಳನೇ ಸ್ಥಾನ ಪಡೆದಿದ್ದರು. ಇದೀಗ ದಕ್ಷಿಣ ಕೊರಿಯಾ ಚಾಂಗ್ವಾನ್ ನಗರದಲ್ಲೂ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಎಡವಿದರು.

ಮಿನಿಮಮ್ ಕ್ವಾಲಿಫಿಕೇಶನ್ ಸ್ಕೋರ್ ವಿಭಾಗದಲ್ಲಿ ಲಕ್ಷ ಶೆರೊನ್ 116 ಅಂಕ ಗಳಿಸಿದರು. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ 50ರಲ್ಲಿ ತಲಾ 45 ಅಂಕ ಗಳಿಸಿದ್ದ ಅಂಡ್ರಿಯಸ್ ಮಕ್ರಿ ಹಾಗೂ ಮ್ಯಾಥ್ಯೂ ಜಾನ್ ಟೈ ಸಾಧಿಸಿದ್ದರು. ಅಂತಿಮವಾಗಿ ಶೂಟ್-ಆಫ್‌ನಲ್ಲಿ ಮಕ್ರಿ 6-5 ಅಂತರದಿಂದ ಜಯ ಸಾಧಿಸಿ ಚಿನ್ನದ ಪದಕ ತನ್ನದಾಗಿಸಿಕೊಂಡರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News