ಗೋಡ್ಸೆ ಕುರಿತ ಹೇಳಿಕೆ ಶಿಸ್ತು ಸಮಿತಿಗೆ ವರ್ಗ: ಅಮಿತ್ ಶಾ

Update: 2019-05-17 14:37 GMT

ಮುಂಬೈ, ಮೇ 17: ಮಹಾತ್ಮಾ ಗಾಂಧೀಜಿಯವರ ಹಂತಕ ನಾಥೂರಾಮ್ ಗೋಡ್ಸೆಯ ಬಗ್ಗೆ ಬಿಜೆಪಿಯ ಮೂವರು ನಾಯಕರು ನೀಡಿರುವ ಹೇಳಿಕೆ ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿದ್ದು ಇದನ್ನು ತಾನು ಬೆಂಬಲಿಸುವುದಿಲ್ಲ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದು ಗೋಡ್ಸೆ ಬಗ್ಗೆ ಅನಂತ್‌ಕುಮಾರ್ ಹೆಗಡೆ, ಪ್ರಜ್ಞಾ ಠಾಕೂರ್ ಮತ್ತು ನಳಿನ್ ಕುಮಾರ್ ಕಟೀಲ್ ನೀಡಿರುವ ಹೇಳಿಕೆಯ ಬಗ್ಗೆ ಅವರಿಂದ ಶಿಸ್ತು ಸಮಿತಿ ವಿವರಣೆ ಕೇಳಿದ್ದು ಬಳಿಕ ಸಮಿತಿ 10 ದಿನದೊಳಗೆ ಪಕ್ಷಕ್ಕೆ ವರದಿ ಸಲ್ಲಿಸಲಿದೆ ಎಂದು ಶಾ ಟ್ವೀಟ್ ಮಾಡಿದ್ದಾರೆ.

ಲೋಕಸಭಾ ಅಭ್ಯರ್ಥಿ ಪ್ರಜ್ಞಾ ಸಿಂಗ್ ಠಾಕೂರ್, ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ ಹಾಗೂ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲು ನೀಡಿರುವ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದು ಬಿಜೆಪಿಗೆ ಯಾವುದೇ ಸಂಬಂಧವಿಲ್ಲ. ಅವರು ಈಗಾಗಲೇ ತಮ್ಮ ಹೇಳಿಕೆಯನ್ನು ಹಿಂಪಡೆದು ಕ್ಷಮೆ ಯಾಚಿಸಿದ್ದಾರೆ. ಆದರೂ ಅವರ ಹೇಳಿಕೆ ಸಾರ್ವಜನಿಕ ಜೀವನದ ಹಾಗೂ ಬಿಜೆಪಿಯ ಶಿಷ್ಟಾಚಾರಕ್ಕೆ ವಿರುದ್ಧವಾಗಿದೆ. ಅಲ್ಲದೆ ಪಕ್ಷದ ಸಿದ್ಧಾಂತಕ್ಕೂ ವಿರೋಧವಾಗಿರುವ ಈ ಹೇಳಿಕೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದ್ದು ಇದನ್ನು ಶಿಸ್ತು ಸಮಿತಿಗೆ ಒಪ್ಪಿಸಲಾಗಿದೆ ಎಂದು ಶಾ ಹೇಳಿದ್ದಾರೆ.

ಮಹಾತ್ಮಾ ಗಾಂಧೀಜಿಯ ಹಂತಕ ನಾಥೂರಾಮ್ ಗೋಡ್ಸೆ ಓರ್ವ ದೇಶಭಕ್ತ ಎಂದು ಗುರುವಾರ ಪ್ರಜ್ಞಾ ಸಿಂಗ್ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ, 7 ದಶಕಗಳ ಬಳಿಕ ನಾಥೂರಾಮ್ ಗೋಡ್ಸೆ ಕುರಿತು ಇಂದಿನ ಪೀಳಿಗೆಯವರು ಬದಲಾದ ದೃಷ್ಟಿಕೋನದಿಂದ ಚರ್ಚೆ ನಡೆಸುತ್ತಿರುವುದು ಶ್ಲಾಘನೀಯ. ಈ ಚರ್ಚೆಯಿಂದ ಕಡೆಗೂ ಗೋಡ್ಸೆಗೆ ಸಂತೋಷವಾಗಬಹುದು ಎಂದಿದ್ದರು.

“ಗೋಡ್ಸೆ ಕೊಂದದ್ದು ಒಬ್ಬರನ್ನು, ಕಸಬ್ ಕೊಂದದ್ದು 72 ಮಂದಿಯನ್ನು, ರಾಜೀವ್ ಗಾಂಧಿ ಕೊಂದದ್ದು 17,000 ಜನರನ್ನು. ಇವರಲ್ಲಿ ಹೆಚ್ಚು ಕ್ರೂರಿಗಳು ಯಾರೆಂದು ನೀವೇ ನಿರ್ಧರಿಸಿ” ಎಂದು ಎರಡು ಬಾರಿಯ ಸಂಸದ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News