ಅಂತಿಮ ಹಾಕಿ ಪಂದ್ಯದಲ್ಲಿ ಭಾರತಕ್ಕೆ ಹೀನಾಯ ಸೋಲು

Update: 2019-05-18 02:33 GMT

ಪರ್ತ್, ಮೇ 17: ಇಲ್ಲಿ ನಡೆದ ಐದನೇ ಹಾಗೂ ಅಂತಿಮ ಹಾಕಿ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯ ವಿರುದ್ಧ ಭಾರತ 2-5 ಅಂತರದಲ್ಲಿ ಹೀನಾಯ ಸೋಲು ಅನುಭವಿಸಿದೆ.

ಶುಕ್ರವಾರ ನಡೆದ ಪಂದ್ಯದಲ್ಲಿ ನಂ.5 ನೇ ತಂಡ ಆಸ್ಟ್ರೇಲಿಯಕ್ಕೆ ಶರಣಾಗುವುದರೊಂದಿಗೆ ಭಾರತ ಪ್ರವಾಸ ಸರಣಿಯನ್ನು ಮುಗಿಸಿತು.

 ಆಸ್ಟ್ರೇಲಿಯ ತಂಡದ ಟ್ರೆಂಟ್ ಮಿಟ್ಟಾನ್, ಫ್ಲಿನ್ ಒಗಿವೇ ,ಬ್ಲಾಕ್ ಗೋವೆರ್ಸ್‌ ಮತ್ತು ಟಿಮ್ ಬ್ರಾಂಡ್ ಗೋಲು ಜಮೆ ಮಾಡಿ ಗೆಲುವಿಗೆ ನೆರವಾದರು. ಭಾರತದ ಪರ ರೂಪಿಂದರ್‌ಪಾಲ್ ಸಿಂಗ್ ಹಾಗೂ ನೀಲಕಂಠ ಶರ್ಮಾ ತಲಾ 1 ಗೋಲು ಜಮೆ ಮಾಡಿದರು.

 ಭಾರತಕ್ಕೆ ಆಟದ ಆರಂಭದಲ್ಲೇ ಗೋಲು ಗಳಿಸುವ ಅವಕಾಶ ಸಿಕ್ಕಿತ್ತು. ಆದರೆ ಎಡೈ ಒಕೆಂಡೆನ್ ಇದಕ್ಕೆ ಅವಕಾಶ ನೀಡಲಿಲ್ಲ. ಬಳಿಕ ಮೂರನೇ ನಿಮಿಷದಲ್ಲಿ ಆಸ್ಟ್ರೇಲಿಯದ ಆಟಗಾರರು ನಡೆಸಿದ ಗೋಲು ಪ್ರಯತ್ನ ಫಲ ನೀಡಿತು. ಫ್ಲೆನ್ ಒಗಿಲೀ ಭಾರತದ ಗೋಲು ಕೀಪರ್ ಕೃಷ್ಣ ಪಾಠಕ್ ಕಣ್ಣು ತಪ್ಪಿಸಿ ಗೋಲು ಕಬಳಿಸಿದರು. ಆಸ್ಟ್ರೇಲಿಯ 1-0 ಮುನ್ನಡೆ ಗಳಿಸಿತು.

 8ನೇ ನಿಮಿಷದಲ್ಲಿ ಮನ್‌ದೀಪ್ ಸಿಂಗ್‌ಗೆ ಪೆನಾಲ್ಟಿ ಅವಕಾಶ ದೊರೆಯಿತು. ಆದರೆ ನೀಲಕಂಠ ಶರ್ಮಾ ಅವಕಾಶವನ್ನು ವ್ಯರ್ಥಗೊಳಿಸಿದರು.

 ಆಸ್ಟ್ರೇಲಿಯ 10ನೇ ನಿಮಿಷದಲ್ಲಿ ಮೊದಲ ಪೆನಾಲ್ಟಿ ಅವಕಾಶ ಪಡೆದಿತ್ತು. ಆದರೆ ಭಾರತದ ಆಟಗಾರರು ಗೋಲು ಗಳಿಸಲು ಅವಕಾಶ ನೀಡಲಿಲ್ಲ.11ನೇ ನಿಮಿಷದಲ್ಲಿ ಟ್ರೆಂಟ್ ಮಿಟ್ಟನ್ ಗೋಲು ಗಳಿಸಿದರು. ಆಸ್ಟ್ರೇಲಿಯ 2-0 ಮುನ್ನಡೆ ಸಾಧಿಸಿತು.

12ನೇ ನಿಮಿಷದಲ್ಲಿ ಭಾರತದ ನೀಲಕಂಠ ಶರ್ಮಾ ಸುಲಭವಾಗಿ ಚೆಂಡನ್ನು ಗುರಿ ತಲುಪಿಸಿ ಭಾರತದ ಗೋಲು ಖಾತೆ ತೆರೆದರು. 19ನೇ ನಿಮಿಷದಲ್ಲಿ ಮನ್‌ದೀಪ್ ಸಿಂಗ್ ಅವರ ಗೋಲು ಗಳಿಸುವ ಪ್ರಯತ್ನ ವಿಫಲಗೊಂಡಿತು.

23ನೇ ನಿಮಿಷದಲ್ಲಿ ವಿವೇಕ್ ಸಾಗರ್ ಪ್ರಸಾದ್ ಚೆಂಡನ್ನು ತಳ್ಳಿದರು. ಆದರೆ ಮನ್‌ದೀಪ್‌ಗೆ ಚೆಂಡನ್ನು ವಶಕ್ಕೆ ಪಡೆಯಲು ಸಾಧ್ಯವಾಗಲಿಲ್ಲ. ಆದರೆ 24ನೇ ನಿಮಿಷದಲ್ಲಿ ಜೋಶುವಾ ಸೊಮೊಂಡ್ಸ್ ಗೋಲು ಗಳಿಸಲು ಪ್ರಯತ್ನಿಸಿದರು. ಟ್ರೆಂಟ್ ಮಿಟ್ಟನ್ ಎರಡನೇ ಗೋಲು ಕಬಳಿಸಿ ಆಸ್ಟ್ರೇಲಿಯಕ್ಕೆ 3-1 ಮುನ್ನಡೆಗೆ ನೆರವಾದರು. 28ನೇ ನಿಮಿಷಲ್ಲಿ ಬ್ಲಾಕ್ ಗೊವೆರ್ಸ್‌ ಗೋಲು ಗಳಿಸಿದರು. ಆಸ್ಟ್ರೇಲಿಯ ಇದರೊಂದಿಗೆ 4-1 ಮೇಲುಗೈ ಸಾಧಿಸಿತು.

43ನೇ ನಿಮಿಷದಲ್ಲಿ ಟಿಮ್ ಬ್ರಾಂಡ್ ಗೋಲು ಕಬಳಿಸಿದರು. ಆಸ್ಟ್ರೇಲಿಯ 5-1 ಮುನ್ನಡೆ ಸಾಧಿಸಿತು. 53ನೇ ನಿಮಿಷದಲ್ಲಿ ರೂಪಿಂದರ್ ಪಾಲ್ ಮೂಲಕ ಭಾರತದ ಖಾತೆಗೆ 2ನೇ ಗೋಲು ಜಮೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News